ಸೌರ ಶಕ್ತಿಯಿಂದ ಚಾಲಿತವಾಗುವ ವಿದ್ಯುತ್ ಹೆದ್ದಾರಿ ಅಭಿವೃದ್ಧಿಗೆ ಕೇಂದ್ರ ಸರಕಾರ ಶ್ರಮಿಸುತ್ತಿದೆ: ಸಚಿವ ಗಡ್ಕರಿ

Update: 2022-09-12 17:25 GMT

ಹೊಸದಿಲ್ಲಿ, ಸೆ. 12: ಸೌರ ಶಕ್ತಿಯಿಂದ ಚಾಲಿತವಾಗುವ ‘ಎಲೆಕ್ಟ್ರಿಕ್ ಹೆದ್ದಾರಿ’ಯನ್ನು ಅಭಿವೃದ್ಧಿಪಡಿಸಲು ಕೇಂದ್ರ ಸರಕಾರ ಶ್ರಮಿಸುತ್ತಿದೆ. ಇದು ಭಾರೀ ಟ್ರಕ್ ಹಾಗೂ ಬಸ್‌ಗಳಿಗೆ ಚಾರ್ಜ್ ಮಾಡಲು ಅನುಕೂಲವಾಗಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಸೋಮವಾರ ಹೇಳಿದ್ದಾರೆ.

‘ಇಂಡೊ-ಅಮೆರಿಕನ್ ಚೇಂಬರ್ ಆಫ್ ಕಾಮರ್ಸ್’ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಗಡ್ಕರಿ, ವಿದ್ಯುತ್ ಆಧರಿಸಿ ಭಾರತದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಕೇಂದ್ರ ಸರಕಾರ ಬಯಸಿದೆ ಎಂದು ಪುನರುಚ್ಚರಿಸಿದರು.

ವಿದ್ಯುತ್ ಸಂಚಾರ ವ್ಯವಸ್ಥೆಗೆ ಸೌರ ಹಾಗೂ ಗಾಳಿ ಶಕ್ತಿ ಆಧಾರಿತ ಚಾರ್ಜ್ ಮಾಡುವ ವ್ಯವಸ್ಥೆಯನ್ನು ಕೇಂದ್ರ ಸರಕಾರ ಉತ್ತೇಜಿಸಲಿದೆ. ಸೌರ ಶಕ್ತಿಯಿಂದ ಚಾಲಿತವಾಗುವ ಎಲೆಕ್ಟ್ರಿಕ್ ಹೆದ್ದಾರಿಯನ್ನು ಕೂಡ ಅಭಿವೃದ್ಧಿಪಡಿಸಲು ನಾವು ಶ್ರಮಿಸುತ್ತಿದ್ದೇವೆ. ಇದು ಭಾರೀ ಟ್ರಕ್ ಹಾಗೂ ಬಸ್‌ಗಳು ಸಂಚರಿಸುತ್ತಿರುವ ಸಂದರ್ಭ ಚಾರ್ಜ್ ಆಗುವ ಸೌಲಭ್ಯವನ್ನು ಒದಗಿಸಲಿದೆ ಎಂದು ಅವರು ತಿಳಿಸಿದ್ದಾರೆ.

ಮೇಲ್ಭಾಗದಲ್ಲಿರುವ ವಿದ್ಯುತ್ ತಂತಿ ಮೂಲಕ ಸೇರಿದಂತೆ ವಾಹನಗಳು ಸಂಚರಿಸುವಾಗ ವಿದ್ಯುತ್ ಪೂರೈಸುವ ರಸ್ತೆಯನ್ನು ಸಾಮಾನ್ಯಾಗಿ ಎಲೆಕ್ಟ್ರಿಕ್ ಹೆದ್ದಾರಿ ಎಂದು ಕರೆಯಲಾಗುತ್ತದೆ. ಸೋಲಾರ್ ಶಕ್ತಿ ಚಾಲಿತ ಟೋಲ್ ಪ್ಲಾಝಾಗಳನ್ನು ಕೂಡ ಕೇಂದ್ರ ಸರಕಾರ ಉತ್ತೇಜಿಸುತ್ತಿದೆ ಎಂದು ಗಡ್ಕರಿ ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News