ಉ.ಪ್ರ.: ದಲಿತ ಬಾಲಕಿಯ ಸಾಮೂಹಿಕ ಅತ್ಯಾಚಾರ, ಬೆಂಕಿ ಹಚ್ಚಿ ಕೊಲೆಗೆ ಯತ್ನ; ಇಬ್ಬರ ಬಂಧನ

Update: 2022-09-12 17:27 GMT

ಪಿಲಿಭಿತ್ (ಉತ್ತರಪ್ರದೇಶ), ಸೆ. 12: ದಲಿತ ಬಾಲಕಿಯ ಮೇಲೆ ಇಬ್ಬರು ಸಾಮೂಹಿಕ ಅತ್ಯಾಚಾರ ನಡೆಸಿ ಬಳಿಕ ಡೀಸೆಲ್ ಸುರಿದು ಬೆಂಕಿ ಹಚ್ಚಿದ ಘಟನೆ ಇಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗಂಭೀರ ಗಾಯಗೊಂಡಿರುವ 16 ವರ್ಷದ ಬಾಲಕಿ ಜಿಲ್ಲೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸ್ ಅಧೀಕ್ಷಕ ದಿನೇಶ್ ಕುಮಾರ್ ಪ್ರಭು ಅವರು ಹೇಳಿದ್ದಾರೆ.

ಆರೋಪಿಗಳು ಮೊದಲು ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಅನಂತರ ಆಕೆಯನ್ನು ಹತ್ಯೆಗೈಯಲು ಡೀಸೆಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಘಟನೆಗೆ ಸಂಬಂಧಿಸಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆ ಜಿಲ್ಲೆಯ ಮಾಧವ್ ಟಂಡಾ ಪ್ರದೇಶದಲ್ಲಿ ಸೆಪ್ಟಂಬರ್ 7ರಂದು ನಡೆದಿದೆ. ಸಂತ್ರಸ್ತ ಬಾಲಕಿ ತನಗಾದ ಸಂಕಷ್ಟವನ್ನು ವಿವರಿಸುವ ವೀಡಿಯೊ ಶನಿವಾರ ವೈರಲ್ ಆದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ ಎಂದು ಅವರು ಹೇಳಿದ್ದಾರೆ.

ಬಾಲಕಿಯ ಕುಟುಂಬ ನೀಡಿದ ದೂರಿನ ಆಧಾರದಲ್ಲಿ ಇಬ್ಬರು ಆರೋಪಿಗಳ ವಿರುದ್ಧ ರವಿವಾರ ರಾತ್ರಿ ಐಪಿಸಿ, ಪೋಕ್ಸೊ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಕರಣದ ಕುರಿತು ಕೂಲಂಕುಷ ತನಿಖೆ ನಡೆಸಲಾಗುತ್ತಿದೆ. ಬಂಧಿಸಲಾಗಿರುವ ಇಬ್ಬರು ಆರೋಪಿಗಳನ್ನು ಪ್ರಶ್ನಿಸಲಾಗುತ್ತಿದೆ ಎಂದು ಅವರು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News