ಕಲಾವಿದರು ಭೀತಿಯಲ್ಲಿದ್ದಾರೆ: ಕುನಾಲ್ ಕಾಮ್ರಾ
ಹೊಸದಿಲ್ಲಿ: ದೇಶದಲ್ಲಿ ಕಲಾವಿದರು ಭೀತಿಯ ವಾತಾವರಣದಲ್ಲಿ ಕಾರ್ಯ ನಿರ್ವಹಿಸುವ ಸ್ಥಿತಿ ಇದೆ ಎಂದು ಖ್ಯಾತ ಹಾಸ್ಯ ಕಲಾವಿದ ಕುನಾಲ್ ಕಾಮ್ರಾ ಅಭಿಪ್ರಾಯಪಟ್ಟಿದ್ದಾರೆ.
ಬಲಪಂಥೀಯರ ಬೆದರಿಕೆ ಬಳಿಕ ಕಾರ್ಯಕ್ರಮ ರದ್ದಾದ ಬಳಿಕ ಎನ್‍ಡಿಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದು ಯಾವುದೇ ಕಲಾಪ್ರಕಾರಕ್ಕೆ ಒಳ್ಳೆಯ ಸೂಚನೆಯಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಹಲವು ಮಂದಿ ಚಿತ್ರ ಕಲಾವಿದರು ಮತ್ತು ಕಲಾವಿದರಿಗೆ ಬಹಿಷ್ಕಾರ ಹಾಕುವ ಕ್ರಮವನ್ನು ಎಲ್ಲೂ ಉದಾಹರಿಸದೇ, "ಬಾಲಿವುಡ್ ನಟರಿಂದ ಹಿಡಿದು ಹಾಸ್ಯನಟರವರೆಗೆ ಎಲ್ಲರೂ, ಭಯದ ವಾತಾವರಣದಲ್ಲೇ ಕಾರ್ಯ ನಿರ್ವಹಿಸಬೇಕಾಗಿದೆ. ಯಾವುದೇ ಕಲಾಪ್ರಕಾರಗಳ ಒಳ್ಳೆಯ ಯೋಚನೆಗಳು.. ಸಂಪೂರ್ಣವಾಗಿ ಸತ್ತಿವೆ" ಎಂದು ಅವರು ಹೇಳಿದರು.
ಕಳೆದ ಹಲವು ತಿಂಗಳಿಂದ ಹಲವು ಚಲನಚಿತ್ರಗಳ ವಿರುದ್ಧ ಬಲಪಂಥೀಯ ಗುಂಪುಗಳ ಪ್ರತಿಭಟನೆ ನಡೆಯುತ್ತಿದೆ. ಇತ್ತೀಚೆಗೆ ರಣಬೀರ್ ಕಪೂರ್- ಅಲಿಯಾ ಭಟ್ ಜೋಡಿಯ ಬ್ರಹ್ಮಸೂತ್ರ ಕೆಂಗಣ್ಣಿಗೆ ಗುರಿಯಾಗಿದೆ. ಹನ್ನೊಂದು ವರ್ಷದ ಹಿಂದೆ ಸಂದರ್ಶನವೊಂದರಲ್ಲಿ ತಮಗೆ ಗೋಮಾಂಸ ಅತ್ಯಂತ ಪ್ರಿಯ ಎಂದು ಹೇಳಿದ್ದನ್ನು ನೆಪವಾಗಿ ಇಟ್ಟುಕೊಂಡು ಪ್ರತಿಭಟನೆ ನಡೆದಿದೆ.
ದೆಹಲಿ ಸಮೀಪದ ಗುರುಗಾಂವ್‍ನ ಸ್ಟುಡಿಯೊ ಕ್ಸೋ ಬಾರ್‍ನಲ್ಲಿ ಈ ತಿಂಗಳ 17 ಮತ್ತು 18ರಂದು ನಡೆಯಬೇಕಿದ್ದ ಕುನಾಲ್ ಕಾಮ್ರಾ ಕಾರ್ಯಕ್ರಮ ಬಲಪಂಥೀಯ ಸಂಘಟನೆಗಳ ಪ್ರತಿಭಟನೆ ಬೆದರಿಕೆಯಿಂದಾಗಿ ರದ್ದಾಗಿದೆ. ಕುನಾಲ್ ಕಾಮ್ರಾ ಅವರ ಹಾಸ್ಯ ತುಣುಕುಗಳು ಹಿಂದೂ ದೇವತೆಗಳನ್ನು ಅವಹೇಳನ ಮಾಡುವಂಥದ್ದು ಎನ್ನುವುದು ಅವರ ಆರೋಪ.
ಎರಡು ವಾರ ಹಿಂದೆ ದೆಹಲಿಯಲ್ಲಿ ನಡೆಯಬೇಕಿದ್ದ ಮುನಾವರ್ ಫರೂಕಿ ಕಾರ್ಯಕ್ರಮಗಳು ಕೂಡಾ ಪೊಲೀಸರು ಅವಕಾಶ ನಿರಾಕರಿಸಿದ್ದರಿಂದ ರದ್ದಾಗಿದ್ದವು ಎಂದು ndtv.com ವರದಿ ಮಾಡಿದೆ.