ಉಳ್ಳಾಲ | ರಸ್ತೆ ಬದಿ ಕಮರಿಗೆ ಉರುಳಿದ ಆಟೋ ರಿಕ್ಷಾ: ಚಾಲಕ ಸ್ಥಳದಲ್ಲೇ ಮೃತ್ಯು
Update: 2022-09-13 10:13 IST
ಉಳ್ಳಾಲ: ಆಟೋ ರಿಕ್ಷಾ ಒಂದು ನಿಯಂತ್ರಣ ತಪ್ಪಿ ಕಮರಿಗೆ ಉರುಳಿ ಬಿದ್ದ ಪರಿಣಾಮ ಆಟೋ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಯ ಪಾನೀರು ಎಂಬಲ್ಲಿ ನಿನ್ನೆ ರಾತ್ರಿ ಸಂಭವಿಸಿದೆ.
ಮೃತರನ್ನು ಸೋಮೇಶ್ವರ ಸೋಮನಾಥ ದೇವಸ್ಥಾನದ ಬಳಿಯ ನಿವಾಸಿ ಆನಂದ್ ಸಫಲ್ಯ(70) ಎಂದು ಗುರುತಿಸಲಾಗಿದೆ.
ಆನಂದ್ ಅವರು ನಿನ್ನೆ (ಸೋಮವಾರ) ರಾತ್ರಿ ಬಾಡಿಗೆಗೆ ತೆರಳಿ ಹಿಂತಿರುಗುತ್ತಿರುವ ವೇಳೆ ಅವಘಡ ನಡೆದಿದೆ. ರಾತ್ರಿ 8.45 ರ ವೇಳೆಗೆ ಪಾನೀರು ಅಸ್ಸಿಸಿ ಶಾಲೆ ಬಳಿ ಆನಂದ್ ಚಲಾಯಿಸುತ್ತಿದ್ದ ಆಟೋ ರಿಕ್ಷಾ ಉರುಳಿ ಕಮರಿಗೆ ಬಿದ್ದಿದೆ ಎನ್ನಲಾಗಿದೆ.
ಮೃತರು ಪತ್ನಿ, ಪುತ್ರ, ಪುತ್ರಿಯನ್ನ ಅಗಲಿದ್ದಾರೆ.
ಈ ಸಂಬಂಧ ಮಂಗಳೂರು ದಕ್ಷಿಣ ಸಂಚಾರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.