ಆಟೋ ರಿಕ್ಷಾ ಚಾಲಕನ ಮನೆಗೆ ಊಟಕ್ಕೆ ತೆರಳುತ್ತಿದ್ದ ಕೇಜ್ರಿವಾಲ್ ರನ್ನು ತಡೆದ ಗುಜರಾತ್ ಪೊಲೀಸರು

Update: 2022-09-13 06:57 GMT

ಅಹಮದಾಬಾದ್: ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಹಾಗೂ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ (Arvind Kejriwal)ಸೋಮವಾರ ಅಹಮದಾಬಾದ್‌ನಲ್ಲಿರುವ ಆಟೋ ರಿಕ್ಷಾ ಚಾಲಕನ ಮನೆಯಲ್ಲಿ ರಾತ್ರಿ ಊಟಕ್ಕೆ ತೆರಳುತ್ತಿದ್ದಾಗ  ಭದ್ರತೆಯ ಕಾರಣಗಳನ್ನು ಉಲ್ಲೇಖಿಸಿ ಗುಜರಾತ್ ಪೊಲೀಸರು ಕೇಜ್ರಿವಾಲ್ ಅವರನ್ನು ಆಟೋದಲ್ಲಿ ಪ್ರಯಾಣಿಸದಂತೆ ಸ್ವಲ್ಪ ಸಮಯ ತಡೆದಿರುವ ನಾಟಕೀಯ ಘಟನೆ ನಡೆಯಿತು.

ಇದಕ್ಕೂ ಮೊದಲು, ಎಎಪಿ ನಾಯಕ ಅಹಮದಾಬಾದ್‌ನಲ್ಲಿರುವ ತನ್ನ ಮನೆಯಲ್ಲಿ ಊಟಕ್ಕೆ ಬರುವಂತೆ ಆಟೋ ರಿಕ್ಷಾ ಚಾಲಕ ನೀಡಿದ ಆಹ್ವಾನವನ್ನು ಸ್ವೀಕರಿಸಿದ್ದರು. ರಾತ್ರಿ 7.30ರ ಸುಮಾರಿಗೆ ತನ್ನ ಹೊಟೇಲ್‌ನಿಂದ ಹೊರಟು ಆಟೋದಲ್ಲಿ ರಿಕ್ಷಾ ಚಾಲಕನ ಮನೆ ತಲುಪಲು ಯೋಜಿಸಿದ್ದರು.

ಪೊಲೀಸರು ಕೇಜ್ರಿವಾಲ್ ರನ್ನು ತಡೆದರು, ಇದು ತೀವ್ರ ವಾಗ್ವಾದಕ್ಕೆ ಕಾರಣವಾಯಿತು. ಬಳಿಕ ಆಟೋ ಚಾಲಕನ ಮನೆಗೆ ತೆರಳಲು ಕೇಜ್ರಿವಾಲ್ ಗೆ ಅವಕಾಶ ನೀಡಲಾಯಿತು. ಆಟೊ-ರಿಕ್ಷಾ ಚಾಲಕನ ಪಕ್ಕದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಕುಳಿತುಕೊಂಡರು.  ಎರಡು ಪೊಲೀಸ್ ಕಾರುಗಳು ರಿಕ್ಷಾಕ್ಕೆ ಬೆಂಗಾವಲು ನೀಡಿದವು.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ  ಎಎಪಿಯ ಪ್ರಚಾರದ ಭಾಗವಾಗಿ ಎರಡು ದಿನಗಳ ಗುಜರಾತ್ ಪ್ರವಾಸದಲ್ಲಿರುವ   ಕೇಜ್ರಿವಾಲ್ ಸೋಮವಾರ ಮಧ್ಯಾಹ್ನ ಅಹಮದಾಬಾದ್‌ನಲ್ಲಿ ಆಟೋರಿಕ್ಷಾ ಚಾಲಕರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಕೇಜ್ರಿವಾಲ್  ಭಾಷಣದ ನಂತರ ನಗರದ ಘಟ್ಲೋಡಿಯಾ ಪ್ರದೇಶದ ನಿವಾಸಿ ವಿಕ್ರಮ್ ದಾಂತನಿ ಎಂಬ ಆಟೋ-ರಿಕ್ಷಾ ಚಾಲಕ  ಕೇಜ್ರಿವಾಲ್ ಅವರನ್ನು ತನ್ನ ಮನೆಯಲ್ಲಿ ರಾತ್ರಿ ಊಟ ಮಾಡುವಂತೆ ವಿನಂತಿಸಿದ್ದ.

"ನಾನು ನಿಮ್ಮ ಅಭಿಮಾನಿ. ಸೋಷಿಯಲ್ ಮೀಡಿಯಾದಲ್ಲಿ ನಾನು ನೋಡಿದ ವೀಡಿಯೊದಲ್ಲಿ, ನೀವು ಪಂಜಾಬ್‌ನ ಆಟೋ ಡ್ರೈವರ್‌ನ ಮನೆಗೆ ಊಟಕ್ಕೆ ಹೋಗಿದ್ದೀರಿ. ಹಾಗಾದರೆ, ನೀವು ನನ್ನ ಮನೆಗೆ ಊಟಕ್ಕೆ ಬರುತ್ತೀರಾ?" ಎಂದು ದಾಂತನಿ ಕೇಳಿದ್ದ.

ರಿಕ್ಷಾ ಚಾಲಕನ ಆಮಂತ್ರಣಕ್ಕೆ ದಿಲ್ಲಿ ಮುಖ್ಯಮಂತ್ರಿ ತಕ್ಷಣವೇ ಸಕಾರಾತ್ಮಕವಾಗಿ ಉತ್ತರಿಸಿದರು.

"ಪಂಜಾಬ್ ಮತ್ತು ಗುಜರಾತ್‌ನ ಆಟೋವಾಲಾಗಳು ನನ್ನನ್ನು ಪ್ರೀತಿಸುತ್ತಾರೆ. ನಾನು ಇಂದು ಸಂಜೆ ಬರಬೇಕೇ? ಎಷ್ಟು ಗಂಟೆಗೆ ಬರಬೇಕು. ನನ್ನನ್ನು ಹೊಟೇಲ್ ನಿಂದ ಕರೆದುಕೊಂಡು ಹೋಗಲು ಬರುವಿರಾ, ನಾವು ಮೂವರು ಊಟಕ್ಕೆ ಬರುತ್ತೇವೆ " ಎಂದು ಎಎಪಿ ನಾಯಕ ಕೇಜ್ರಿವಾಲ್ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News