ಶೋಷಿತ-ದುರ್ಬಲ ಗುಂಪುಗಳಲ್ಲಿ ಶಿಶು ಮರಣವೂ ಅಧಿಕ

Update: 2022-09-13 07:13 GMT

ಭಾರತದಲ್ಲಿ ಶಿಶು ಮರಣ ದರ (ಹುಟ್ಟಿದ ಬಳಿಕದ ಒಂದು ತಿಂಗಳ ಅವಧಿಯಲ್ಲಿ ಸಾಯುವ ಶಿಶುಗಳ ಸಂಖ್ಯೆ) 2019ಕ್ಕಿಂತ ಮೊದಲಿನ ಐದು ವರ್ಷಗಳ ಅವಧಿಯಲ್ಲಿ ಪ್ರತೀ ಸಾವಿರ ಶಿಶುಗಳಿಗೆ 25 ಆಗಿತ್ತು ಎಂದು ಇತ್ತೀಚೆಗೆ ಬಿಡುಗಡೆಗೊಂಡಿರುವ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 2019-21 (ಎನ್‌ಎಫ್‌ಎಚ್‌ಎಸ್-5) ವರದಿಯು ತಿಳಿಸಿದೆ. ಅಂದರೆ, ಹುಟ್ಟಿದ ಬಳಿಕ ಒಂದು ತಿಂಗಳ ಅವಧಿಯಲ್ಲಿ 40 ಶಿಶುಗಳ ಪೈಕಿ ಒಂದು ಮೃತಪಟ್ಟಿದೆ.

ಅದೇ ವೇಳೆ, ಹುಟ್ಟಿದ ಬಳಿಕ ಮತ್ತು ಮೊದಲ ಹುಟ್ಟು ಹಬ್ಬದ ನಡುವೆ ಸಾಯುವ ಶಿಶುಗಳ ಸಂಖ್ಯೆ ಪ್ರತೀ 1,000 ಶಿಶುಗಳಿಗೆ 35. ಹಾಗೂ ಐದು ವರ್ಷ ತಲುಪುವ ಮೊದಲೇ ಸಾಯುವ ಮಕ್ಕಳ ದರ ಪ್ರತೀ 1,000ಕ್ಕೆ 42.

ಅಂದರೆ, ಭಾರತದಲ್ಲಿ 24 ಮಕ್ಕಳ ಪೈಕಿ ಒಂದು ಮಗು ತನ್ನ ಐದನೇ ಹುಟ್ಟಿದ ದಿನಕ್ಕಿಂತ ಮೊದಲು ಸಾಯುತ್ತದೆ. ಈ ಪೈಕಿ ಶೇ. 83 ಸಾವುಗಳು ಶಿಶುವಾಗಿದ್ದಾಗಲೇ ಸಂಭವಿಸುತ್ತವೆ.

ಪ್ರವೃತ್ತಿಗಳು

 ಐದು ವರ್ಷಕ್ಕಿಂತ ಕೆಳಗಿನ ಮಕ್ಕಳ ಸಾವಿನ ಪ್ರಮಾಣವು ನಗರ ಪ್ರದೇಶಗಳಿಗಿಂತ (ಪ್ರತೀ 1,000 ಜೀವಂತ ಜನನಕ್ಕೆ 32 ಸಾವು) ಗ್ರಾಮೀಣ ಪ್ರದೇಶಗಳಲ್ಲಿ (ಪ್ರತೀ 1,000 ಜೀವಂತ ಜನನಕ್ಕೆ 46 ಸಾವು) ಅಧಿಕವಾಗಿದೆ.

 ಐದು ವರ್ಷಕ್ಕಿಂತ ಕೆಳಗಿನ ಮಕ್ಕಳ ಸಾವಿನ ಪ್ರಮಾಣವು ರಾಜ್ಯವಾರು ಉತ್ತರಪ್ರದೇಶ (ಪ್ರತೀ1,000 ಮಕ್ಕಳಲ್ಲಿ 60 ಸಾವು)ದಲ್ಲಿ ಗರಿಷ್ಠವಾಗಿದೆ ಹಾಗೂ ಕೇರಳ ಮತ್ತು ಪುದುಚೇರಿಯಲ್ಲಿ (ಪ್ರತೀ 1,000 ಮಕ್ಕಳಿಗೆ ಕ್ರಮವಾಗಿ 5 ಮತ್ತು 4 ಸಾವು) ಕನಿಷ್ಠವಾಗಿದೆ.

 ತಾಯಂದಿರ ಶಿಕ್ಷಣ ಮಟ್ಟ ಹೆಚ್ಚಾದಂತೆ ಐದು ವರ್ಷಕ್ಕಿಂತ ಕೆಳಗಿನ ಮಕ್ಕಳು ಸಾಯುವ ಪ್ರಮಾಣ ಕಡಿಮೆಯಾಗುತ್ತದೆ.

 ಐದು ವರ್ಷಕ್ಕಿಂತ ಕೆಳಗಿನ ಮಕ್ಕಳ ಸಾವಿನ ಪ್ರಮಾಣವು, ಪರಿಶಿಷ್ಟ ಪಂಗಡಗಳು (ಪ್ರತೀ ಸಾವಿರ ಮಕ್ಕಳಿಗೆ 50 ಸಾವು), ಪರಿಶಿಷ್ಟ ಜಾತಿಗಳು (ಪ್ರತೀ ಸಾವಿರ ಮಕ್ಕಳಿಗೆ 49 ಸಾವು) ಮತ್ತು ಇತರ ಹಿಂದುಳಿದ ವರ್ಗಗಳ (ಪ್ರತೀ ಸಾವಿರ ಮಕ್ಕಳಿಗೆ 41 ಸಾವು) ಗುಂಪುಗಳಲ್ಲಿ ಅಧಿಕವಾಗಿದೆ. ಈ ಗುಂಪುಗಳಿಗೆ ಹೊರತಾದ ಗುಂಪಿನಲ್ಲಿ ಈ ಪ್ರಮಾಣ ಪ್ರತೀ ಸಾವಿರ ಮಕ್ಕಳಿಗೆ 33 ಸಾವು.

 ಕುಟುಂಬಗಳ ಸಂಪತ್ತು ಹೆಚ್ಚಿದಂತೆ ಐದು ವರ್ಷಕ್ಕಿಂತ ಕೆಳಗಿನ ಮಕ್ಕಳು ಸಾಯುವ ಪ್ರಮಾಣ ಕಡಿಮೆಯಾಗುತ್ತದೆ. ಸಂಪತ್ತಿನ ಪ್ರಮಾಣವನ್ನು ಐದು ಭಾಗಗಳಲ್ಲಿ ವಿಂಗಡಿಸಿದರೆ, ಕನಿಷ್ಠ ಸಂಪತ್ತು ಹೊಂದಿರುವ ಗುಂಪಿಗೆ ಸೇರಿದ ಐದು ವರ್ಷಕ್ಕಿಂತ ಕೆಳಗಿನ ಮಕ್ಕಳು ಸಾಯುವ ಪ್ರಮಾಣವು ಗರಿಷ್ಠ (ಪ್ರತೀ ಸಾವಿರ ಮಕ್ಕಳಿಗೆ 59 ಸಾವು)ವಾಗಿದೆ ಹಾಗೂ ಗರಿಷ್ಠ ಸಂಪತ್ತು ಗುಂಪಿಗೆ ಸೇರಿದ ಐದು ವರ್ಷಕ್ಕಿಂತ ಕೆಳಗಿನ ಮಕ್ಕಳು ಸಾಯುವ ಪ್ರಮಾಣವು ಕನಿಷ್ಠ (ಪ್ರತೀಸಾವಿರ ಮಕ್ಕಳಿಗೆ 20 ಸಾವು)ವಾಗಿದೆ.

 ಐದು ವರ್ಷ ತುಂಬುವ ಮೊದಲು ಮಕ್ಕಳು ಸಾಯುವ ಪ್ರಮಾಣವು ಬಾಲಕಿಯರಿಗಿಂತ ಬಾಲಕರಲ್ಲಿ ಸ್ವಲ್ಪ ಹೆಚ್ಚು. ಈ ಅಂತರವು ಒಂದು ತಿಂಗಳಿಗೂ ಮೊದಲೇ ಸಾಯುವ ಶಿಶುಗಳಲ್ಲಿ ಹೆಚ್ಚು ಸ್ಪಷ್ಟವಾಗಿ ಗೋಚರಿಸುತ್ತದೆ.

ಹುಟ್ಟುವ ಮೊದಲೇ ಸಾಯುವ ಮಕ್ಕಳು

* ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 2019-21ರ ಪ್ರಕಾರ, ಭಾರತದಲ್ಲಿ ಪ್ರತೀ 1,000 ಜನನಗಳ ಪೈಕಿ 32 ಮಕ್ಕಳು ಹುಟ್ಟುವ ಮೊದಲೇ ಸಾಯುತ್ತವೆ.

*ಹುಟ್ಟುವ ಮೊದಲೇ ಸಾಯುವ ಮಕ್ಕಳ ಪ್ರಮಾಣವು ಗ್ರಾಮೀಣ ಪ್ರದೇಶಗಳಲ್ಲಿ ಅಧಿಕ (ಪ್ರತೀ 1,000 ಜನನಗಳ ಪೈಕಿ 34) ಮತ್ತು ನಗರ ಪ್ರದೇಶಗಳಲ್ಲಿ ಕಡಿಮೆ (ಪ್ರತೀ 1,000 ಜನನಗಳ ಪೈಕಿ 25).

*ರಾಜ್ಯಾವಾರು. ಹುಟ್ಟುವ ಮೊದಲೇ ಸಾಯುವ ಮಕ್ಕಳ ಪ್ರಮಾಣ ಉತ್ತರಪ್ರದೇಶದಲ್ಲಿ ಅಧಿಕ (ಪ್ರತೀ 1,000 ಜನನಗಳ ಪೈಕಿ 44). ನಂತರದ ಸ್ಥಾನದಲ್ಲಿ ಬರುವುದು ಬಿಹಾರ (ಪ್ರತೀ 1,000 ಜನನಗಳ ಪೈಕಿ 43). ಈ ಪ್ರಮಾಣ ಗೋವಾದಲ್ಲಿ ಅತ್ಯಂತ ಕಡಿಮೆ (ಪ್ರತೀ1,000 ಜನನಗಳ ಪೈಕಿ 2 ).

*ತಾಯಂದಿರ ಶಿಕ್ಷಣ ಅವಧಿ ಹೆಚ್ಚಿದಂತೆ, ಹುಟ್ಟುವ ಮೊದಲೇ ಸಾಯುವ ಮಕ್ಕಳ ಪ್ರಮಾಣ ಕಡಿಮೆಯಾಗುತ್ತದೆ.

*ಕುಟುಂಬಗಳ ಸಂಪತ್ತು ಹೆಚ್ಚಿದಂತೆ ಜನನ ಪೂರ್ವ ಶಿಶು ಮರಣ ಪ್ರಮಾಣ ಕಡಿಮೆಯಾಗುತ್ತದೆ. ಸಂಪತ್ತಿನ ಪ್ರಮಾಣವನ್ನು ಐದು ಭಾಗಗಳಲ್ಲಿ ವಿಂಗಡಿಸಿದರೆ, ಕನಿಷ್ಠ ಸಂಪತ್ತು ಹೊಂದಿರುವ ಗುಂಪಿಗೆ ಸೇರಿದ ಕುಟುಂಬಗಳಲ್ಲಿ ಹುಟ್ಟುವ ಮೊದಲೇ ಸಾಯುವ ಮಕ್ಕಳ ಪ್ರಮಾಣವು ಗರಿಷ್ಠ (ಪ್ರತೀ ಸಾವಿರ ಜನನಗಳಿಗೆ 41 ಸಾವು)ವಾಗಿದೆ ಹಾಗೂ ಗರಿಷ್ಠ ಸಂಪತ್ತು ಗುಂಪಿಗೆ ಸೇರಿದ ಕುಟುಂಬಗಳಲ್ಲಿ ಹುಟ್ಟುವ ಮೊದಲೇ ಸಾಯುವ ಮಕ್ಕಳ ಪ್ರಮಾಣವು ಕನಿಷ್ಠ (ಪ್ರತೀ ಸಾವಿರ ಜನನಗಳಿಗೆ 17 ಸಾವು)ವಾಗಿದೆ.

ಶಿಶು ಮರಣ ದರದಲ್ಲಿ ಇಳಿಕೆ

ಹುಟ್ಟಿದ ಒಂದೇ ತಿಂಗಳ ಅವಧಿಯಲ್ಲಿ ಸಾಯುವ ಶಿಶುಗಳ ಸಂಖ್ಯೆ, 1992-93ರ ಎನ್‌ಎಫ್‌ಎಚ್‌ಎಸ್ ಸಮೀಕ್ಷೆಯ ವೇಳೆ ದಾಖಲಾಗಿದ್ದ ಪ್ರತೀಸಾವಿರಕ್ಕೆ 49ರಿಂದ 2029-21ರ ಸಮೀಕ್ಷೆಯಲ್ಲಿ ಪ್ರತೀಸಾವಿರಕ್ಕೆ 25ಕ್ಕೆ ಇಳಿದಿದೆ. 1998-99, 2005-06 ಮತ್ತು 2015-16ರ ಸಮೀಕ್ಷೆಗಳಲ್ಲಿ ಈ ಪ್ರಮಾಣವು ಕ್ರಮವಾಗಿ ಪ್ರತೀಸಾವಿರಕ್ಕೆ 43, 39, 30 ಆಗಿತ್ತು.

ಹುಟ್ಟಿದ ಬಳಿಕ ಒಂದು ವರ್ಷಕ್ಕಿಂತ ಮೊದಲೇ ಸಾಯವು ಮಕ್ಕಳ ಪ್ರಮಾಣ 1992-93ರ ಎನ್‌ಎಫ್‌ಎಚ್‌ಎಸ್ ಸಮೀಕ್ಷೆಯಲ್ಲಿ ದಾಖಲಾಗಿದ್ದ ಪ್ರತೀಸಾವಿರಕ್ಕೆ 79ರಿಂದ 2019-21ರ ಎನ್‌ಎಫ್‌ಎಚ್‌ಎಸ್ ಸಮೀಕ್ಷೆಯಲ್ಲಿ ಪ್ರತೀ ಸಾವಿರಕ್ಕೆ 35ಕ್ಕೆ ಇಳಿದಿದೆ. ಇದೇ ಅವಧಿಯಲ್ಲಿ ಐದು ವರ್ಷಕ್ಕಿಂತ ಕೆಳಗಿನ ಮಕ್ಕಳು ಸಾಯುವ ದರವು ಪ್ರತೀ ಸಾವಿರಕ್ಕೆ 109ರಿಂದ 42ಕ್ಕೆ ಇಳಿದಿದೆ.

ಹುಟ್ಟಿದ ಬಳಿಕ ಒಂದು ವರ್ಷಕ್ಕಿಂತ ಮೊದಲೇ ಸಾಯುವ ಮಕ್ಕಳ ದರವು 28 ವರ್ಷಗಳ ಅವಧಿಯಲ್ಲಿ ಶೇ. 56ದಷ್ಟು ಕಡಿಮೆಯಾಗಿದೆ.

ಇದೇ ಅವಧಿಯಲ್ಲಿ, ಐದಕ್ಕಿಂತ ಕೆಳಗಿನ ಮಕ್ಕಳು ಸಾಯುವ ದರದಲ್ಲಿನ ಇಳಿಕೆಯು (ಶೇ. 62) ಒಂದು ವರ್ಷಕ್ಕಿಂತ ಕೆಳಗಿನ ಮಕ್ಕಳು ಸಾಯುವ ದರದಲ್ಲಿನ ಇಳಿಕೆಗಿಂತ ಕೊಂಚ ಹೆಚ್ಚಾಗಿದೆ.

Writer - ಆರ್.ಎಚ್.

contributor

Editor - ಆರ್.ಎಚ್.

contributor

Similar News