ಉಡುಪಿ: ಕಾಂಗ್ರೆಸ್ ಭವನ ಆವರಣದಲ್ಲಿ ಆಸ್ಕರ್ ಪ್ರತಿಮೆ ಅನಾವರಣ
ಉಡುಪಿ, ಸೆ.13: ಬ್ರಹ್ಮಗಿರಿಯ ನಾಯರ್‌ಕೆರೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿ ಆವರಣದಲ್ಲಿ ಇಂದು ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವ ದಿ.ಆಸ್ಕರ್ ಫೆರ್ನಾಂಡಿಸ್‌ರ ಪಂಚಲೋಹದ ಪ್ರತಿಮೆಯನ್ನು ಅವರ ಪ್ರಥಮ ಪುಣ್ಯತಿಥಿಯ ಸಂದರ್ಭದಲ್ಲಿ ಅನಾವರಣಗೊಳಿಸಲಾಯಿತು.
ಆಸ್ಕರ್ ಅವರ ಸಂಸ್ಮರಣೆಯಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಹಲವು ಜನಪರ ಕಾರ್ಯಕ್ರಮಗಳನ್ನು ಆಯೋಜಿ ಸಲಾಗಿತ್ತು. ಅಲ್ಲದೇ ಕಾಂಗ್ರೆಸ್ ಭವನದಲ್ಲಿ ಕಾರ್ಯಕರ್ತರಿಗಾಗಿ ಹಲವು ಸ್ಪರ್ಧೆಗಳನ್ನು ಸಹ ಆಯೋಜಿಸಲಾ ಗಿತ್ತು.
ಹಿರಿಯ ಕಾಂಗ್ರೆಸ್ ನಾಯಕ ಹಾಗೂ ವಿಧಾನಪರಿಷತ್‌ನ ಮಾಜಿ ಸಭಾಪತಿ ಪ್ರತಾಪ್‌ಚಂದ್ರ ಶೆಟ್ಟಿ ಅವರು ಪ್ರತಿಮೆಯನ್ನು ಅನಾವರಣಗೊಳಿಸಿ, ಹೂವಿನ ಹಾರವನ್ನು ಅರ್ಪಿಸಿದರು. ಬಳಿಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್‌ಕುಮಾರ್ ಕೊಡವೂರು ಸೇರಿದಂತೆ ಜಿಲ್ಲಾ ಮಟ್ಟದ ನಾಯಕರು, ಕಾರ್ಯಕರ್ತರು ಪ್ರತಿಮೆ ಹೂವಿನ ಹಾರ ಅರ್ಪಿಸಿ, ಪುಷ್ಪವೃಷ್ಟಿ ನಡೆಸಿದರು.
ಕಾರ್ಕಳ ಕೆನರಾ ಬ್ಯಾಂಕ್ ಕೌಶಲ್ಯಾಭಿವೃದ್ಧಿ ಕೇಂದ್ರದಲ್ಲಿ ಲೋಕ ಶಿಲ್ಪಿ ಹರೀಶ್ ನಾಯ್ಕ್ ಆಸ್ಕರ್ ಅವರ ಪಂಚಲೋಹದ ಈ ಪ್ರತಿಮೆಯನ್ನು ನಿರ್ಮಿಸಿದ್ದಾರೆ. ಎರಡೂವರೆ ಅಡಿ ಎತ್ತರ ಹಾಗೂ ೮೦ಕೆ.ಜಿ.ಭಾರದ ಈ ಮೂರ್ತಿಯ ನಿರ್ಮಾಣಕ್ಕೆ 3.5 ಲಕ್ಷ ರೂ.ವೆಚ್ಚವಾಗಿದೆ. ಒಟ್ಟು ಆರು ಲಕ್ಷ ರೂ.ವೆಚ್ಚದಲ್ಲಿ ಪ್ರತಿಮೆಯನ್ನು ಕಾಂಗ್ರೆಸ್ ಭವನದ ಎದುರು ಪ್ರತಿಷ್ಠಾಪಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ಅಶೋಕಕುಮಾರ್ ಕೊಡವೂರು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ವಿನಯಕುಮಾರ್ ಸೊರಕೆ, ಆಸ್ಕರ್ ಫೆರ್ನಾಂಡೀಸ್ ಅವರು ರಾಷ್ಟ್ರಮಟ್ಟದಲ್ಲಿ ಪ್ರಭಾವಿ ನಾಯಕರಾಗಿದ್ದು, ದೇಶಕ್ಕೆ ಅವರ ಕೊಡುಗೆ ಅಪಾರ. ಆಸ್ಕರ್ ಅಜಾತಶತ್ರು ವಾಗಿದ್ದರು. ಹಿರಿಯ ಬಿಜೆಪಿ ನಾಯಕ ಡಾ.ವಿ.ಎಸ್.ಆಚಾರ್ಯ ಅವರು ಕೂಡಾ ಆಸ್ಕರ್ ಅವರ ವ್ಯಕ್ತಿತ್ವಕ್ಕೆ ಮಾರು ಹೋಗಿದ್ದರು ಎಂದರು.
ಜಿಲ್ಲಾ ಕಾಂಗ್ರೆಸ್ ವತಿಯಿಂದ ಆಸ್ಕರ್‌ರ ಪ್ರತಿಮೆ ಪ್ರತಿಷ್ಠಾಪನೆ ಸೇರಿದಂತೆ ಹಲವು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕರ್ತರಿಗೆ ರಸ ಪ್ರಶ್ನೆ, ಭಾಷಣ ಸ್ಪರ್ಧೆಯನ್ನು ಹಮ್ಮಿಕೊಂಡಿದ್ದೇವೆ. ಆಸ್ಕರ್ ಅವರೇ ನಿರ್ಮಿಸಿದ ಈ ಕಾಂಗ್ರೆಸ್ ಕಚೇರಿಯನ್ನು ಇನ್ನು ಆಸ್ಕರ್ ಫೆರ್ನಾಂಡೀಸ್ ಸ್ಮಾರಕ ಕಾಂಗ್ರೆಸ್ ಭವನ ಎಂದು ಮರು ನಾಮಕರಣಗೊಳಿಸಲಿದ್ದೇವೆ ಇಂದು ಬೆಂಗಳೂರಿನಲ್ಲೂ ಆಸ್ಕರ್ ಸಂಸ್ಮರಣೆ ನಡೆಯುತ್ತಿದೆ ಎಂದು ಸೊರಕೆ ಹೇಳಿದರು.
ಬ್ರಹ್ಮಗಿರಿ ವೃತ್ತವನ್ನು ಆಸ್ಕರ್ ಫೆರ್ನಾಂಡೀಸ್ ಅವರ ನೆನಪಿನಲ್ಲಿ ಆಸ್ಕರ್ ಫೆರ್ನಾಂಡೀಸ್ ವೃತ್ತವೆಂದು ನಾಮಕರಣಗೊಳಿಸಲು ಈಗಾಗಲೇ ನಗರಸಭೆಗೆ ಅರ್ಜಿಯನ್ನು ಸಲ್ಲಿಸಿದ್ದೇವೆ. ನಗರಸಭೆ ಸಾಮಾನ್ಯ ಸಭೆ ಇದಕ್ಕೆ ಒಪ್ಪಿಗೆ ನೀಡಿದ್ದು, ಸರಕಾರದ ನಗರಾಭಿವೃದ್ಧಿ ಇಲಾಖೆಯ ಒಪ್ಪಿಗೆಗೆ ಕಾಯಲಾಗುತ್ತಿದೆ. ಒಪ್ಪಿಗೆ ಸಿಕ್ಕಿದಾಕ್ಷಣ ಈ ಸರ್ಕಲ್‌ನ್ನು ಆಸ್ಕರ್ ಫೆರ್ನಾಂಡೀಸ್ ಸರ್ಕಲ್ ಎಂದು ನಾಮಕರಣ ಮಾಡಲಾಗುತ್ತದೆ ಎಂದರು.
ಇಂದಿನ ಕಾರ್ಯಕ್ರಮದಲ್ಲಿ ಆಸ್ಕರ್ ಫೆರ್ನಾಂಡೀಸ್ ಅವರ ಸಹೋದರಿ ಜುಡಿತ್ ಶ್ರೇಷ್ಠ, ಮಾಜಿ ಶಾಸಕ ಗೋಪಾಲ ಪೂಜಾರಿ, ಐವನ್ ಡಿಸೋಜ, ಮಿಥುನ್ ರೈ, ಎಂ.ಎ.ಗಫೂರ್, ಮಿಲಿಯಂ ಮಾರ್ಟಿಸ್, ವಾಸುದೇವ ಯಡಿಯಾಳ್, ಹಿರಿಯಣ್ಣ, ಭುಜಂಗ ಶೆಟ್ಟಿ, ದಿನೇಶ್ ಪುತ್ರನ್, ಬಿ.ನರಸಿಂಹ ಮೂರ್ತಿ, ಹರೀಶ್ ಕಿಣಿ, ಉದ್ಯಾವರ ನಾಗೇಶ್ ಕುಮಾರ್, ಭಾಸ್ಕರ ರಾವ್ ಕಿದಿಯೂರು, ಅಣ್ಣಯ್ಯ ಶೇರಿಗಾರ್, ಕೀರ್ತಿ ಶೆಟ್ಟಿ, ಪ್ರಖ್ಯಾತ ಶೆಟ್ಟಿ, ಯತೀಶ್ ಕರ್ಕೇರ, ಕುದಿ ವಸಂತ ಶೆಟ್ಟಿ, ಡಾ.ಶ್ರೀಕಾಂತ ಸಿದ್ಧಾಪುರ, ಸಂತೋಷ ಶೆಟ್ಟಿ ಹಿರಿಯಡ್ಕ, ಕಿಶನ್ ಹೆಗ್ಡೆ ಕೊಳ್ಕೆಬೈಲ್, ರಮೇಶ್ ಕಾಂಚನ್, ಗೀತಾ ವಾಗ್ಳೆ, ಡಾ.ಸುನಿತಾ ಶೆಟ್ಟಿ, ರೋಷನಿ ಒಲಿವೆರಾ, ಬಿ.ಕುಶಲ ಶೆಟ್ಟಿ, ಎಲ್ಲೂರು ಶಶಿಧರ ಶೆಟ್ಟಿ, ಗಣೇಶ್‌ರಾಜ್ ಸರಳೆಬೆಟ್ಟು, ದಿನಕರ ಹೇರೂರು, ಮುರಲಿ ಶೆಟ್ಟಿ, ಮಂಜುನಾಥ ಪೂಜಾರಿ, ನವೀನ್‌ಚಂದ್ರ ಸುವರ್ಣ, ಯತೀಶ್ ಕರ್ಕೇರ, ಮದನಕುಮಾರ್, ಹಬೀಬ್ ಅಲಿ ಮುಂತಾದವರು ಉಪಸ್ಥಿತರಿದ್ದರು.