×
Ad

ಮಂಗಳೂರು: ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆಯಿಂದ ಪ್ರತಿಭಟನೆ

Update: 2022-09-13 21:28 IST

ಮಂಗಳೂರು : ಗುಜರಾತ್ ಗಲಭೆಯ ವೇಳೆ ಗರ್ಭಿಣಿ ಬಿಲ್ಕಿಸ್ ಬಾನುವಿನ ಅತ್ಯಾಚಾರ ಎಸಗಿದ ಹಾಗೂ ಅವರ ಕುಟಂಬದ ಸದಸ್ಯರನ್ನು ಸಾಮೂಹಿಕವಾಗಿ ಹತ್ಯೆ ನಡೆಸಿ ಶಿಕ್ಷೆಗೊಳಗಾಗಿದ್ದ ಹನ್ನೊಂದು ಮಂದಿಯನ್ನು ಗುಜರಾತ್ ಸರಕಾರವು ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡಿದ ಕ್ರಮವನ್ನು ಖಂಡಿಸಿ ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆಯಿಂದ ಮಂಗಳವಾರ ನಗರದ ಕ್ಲಾಕ್ ಟವರ್ ಮುಂದೆ ಪ್ರತಿಭಟನೆ ನಡೆಯಿತು.

ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘ, ಸಹೋದಯ, ಬಿಲ್ಲವ ಮಹಿಳಾ ಮಂಡಲ, ಮಹಿಳಾ ಮಂಡಲಗಳ ಒಕ್ಕೂಟ ಮಂಗಳೂರು, ಶಿಕ್ಷಣ ಸಂಪನ್ಮೂಲ ಕೇಂದ್ರ, ಫಾರ್ವರ್ಡ್ ಟ್ರಸ್ಟ್, ಡಿಸಿಸಿ ಡಬ್ಲ್ಯು, ಯುವ ಮುನ್ನಡೆ, ಸಂಚಲನ, ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ. ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ದ.ಕ ಜಿಲ್ಲಾ ಸಮಿತಿ, ಇಂಡಿಯನ್ ಕಮ್ಯುನಿಸ್ಟ್ ಆಕ್ಟಿವಿಸ್ಟ್ ನೆಟ್‌ವರ್ಕ್, ನ್ಯಾಶನಲ್ ವಿಮೆನ್ಸ್ ಫ್ರಂಟ್ ಕರ್ನಾಟಕ, ವಿಮೆನ್ ಇಂಡಿಯಾ ಮೂವ್ಮೆಂಟ್ ಕರ್ನಾಟಕ, ಕರಾವಳಿ ಮಹಿಳಾ ಹಕ್ಕುಗಳ ರಕ್ಷಣಾ ವೇದಿಕೆ, ಜಮಾಅತೆ ಇಸ್ಲಾಮಿ ಹಿಂದ್ ಮಹಿಳಾ ವಿಭಾಗ, ಜೀವನ್ ಧಾರಾ ಮತ್ತು ತರಿಕಿಟ ಕಲಾ ಕಮ್ಮಟ ಸಂಘಟನೆಗಳು, ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಹಿಳೆಯರು ಕಪ್ಪು ಉಡುಪು ಧರಿಸಿ ಆಕ್ರೋಶ ವ್ಯಕ್ತಪಡಿಸಿದರು.

ಬಿಲ್ಕಿಸ್ ಬಾನುಗೆ ನ್ಯಾಯ ಸಲ್ಲಿಸಲು ಬಿಡುಗಡೆಯಾದ 11 ಮಂದಿ ಅಪರಾಧಿಗಳನ್ನು ಮತ್ತೆ ಜೈಲಿಗಟ್ಟಬೇಕು, ಮುರುಘಾ ಮಠದ ಶಿವಮೂರ್ತಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು. ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆಯರಿಗೆ ಕಾನೂನು ರೀತಿಯಲ್ಲಿ ಸಿಗಬೇಕಾದ ಪರಿಹಾರಗಳನ್ನು ತಕ್ಷಣ ನೀಡಬೇಕು ಎಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯನ್ನು ಉದ್ಘಾಟಿಸಿ ಮಾತನಾಡಿದ ಅಖಿಲ ಭಾರತ ಬಿಲ್ಲವ ಮಹಿಳಾ ಸಂಘದ ಪ್ರಧಾನ ಕಾರ್ಯದರ್ಶಿ ಸುಖಲಾಕ್ಷಿ ಸುವರ್ಣ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯವು ಕ್ರೌರ್ಯದ ಪರಮಾವಧಿ ಕೃತ್ಯವಾಗಿದೆ. ಕ್ರೌರ್ಯ ಮತ್ತು ಲೈಂಗಿಕ ತೃಷೆಯ ಮನಸ್ಥಿತಿ ಉಳ್ಳವರು ಬದಲಾಗುವುದೇ ಇಲ್ಲ. ಇಂತಹ ಹೇಯ ಕೃತ್ಯಕ್ಕೆ ಕ್ಷಮೆ ನೀಡಿರುವುದು ಎಲ್ಲ ಜೀವಪರ ಮನುಷ್ಯರಿಗೆ ಆಘಾತ ನೀಡಿದೆ ಎಂದರು.

ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ತಮ್ಮದೇ ವಸತಿ ನಿಲಯದ ಅಪ್ರಾಪ್ತ ದಲಿತ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪವಿದೆ. ಎಸ್‌ಸಿ-ಎಸ್ಟಿ ಕಾಯ್ದೆ ಹಾಗೂ ಪೊಕ್ಸೊ ಕಾಯ್ದೆಯಡಿ ದಾಖಲಾದ ಈ ಪ್ರಕರಣದಲ್ಲಿ ತಕ್ಷಣ ಅವರನ್ನು ಬಂಧಿಸಬೇಕಿತ್ತು. ಆದರೆ ಹಾಗಾಗಲಿಲ್ಲ. ಸಂತ್ರಸ್ತ ಬಾಲಕಿಯರ ಪರ ನಿಲ್ಲಬೇಕಾದ ಸರಕಾರಿ ವ್ಯವಸ್ಥೆಯು ಆರೋಪಿಗಳಿಗೆ ಬೆಂಬಲವಾಗಿ ನಿಂತು ಪೊಕ್ಸೊ ಕಾಯ್ದೆಯ ಮಹತ್ವವನ್ನು ನಾಶಮಾಡಲು ಹೊರಟಿರುವುದು ವಿಷಾದನೀಯ ಎಂದು ಸುಖಾಲಾಕ್ಷಿ ಸುವರ್ಣ ಆಕ್ರೋಶ ವ್ಯಕ್ತಪಡಿಸಿದರು.

ಲೇಖಕಿಯರಾದ ಬಿ.ಎಂ. ರೋಹಿಣಿ, ಗುಲಾಬಿ ಬಿಳಿಮಲೆ, ಸಬೀಹಾ ಫಾತಿಮಾ, ವಿಮೆನ್ ಇಂಡಿಯಾ ಮೂವ್ಮೆಂಟ್‌ನ ಶಾಕಿರಾ ಬಾನು, ಎನ್‌ಡಬ್ಲ್ಯುಎಫ್‌ನ ಶಹನಾಝ್ ಮಾತನಾಡಿದರು. ಪ್ರಜ್ಞಾ ಸಲಹಾ ಕೇಂದ್ರದ ಪ್ರೊ ಹಿಲ್ಡಾ ರಾಯಪ್ಪನ್ ಸಮಾರೋಪ ಭಾಷಣ ಮಾಡಿದರು. ವಾಣಿ ಪೆರಿಯೋಡಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News