ಕೆನ್ಯಾ ಅಧ್ಯಕ್ಷರಾಗಿ ವಿಲಿಯಂ ರುಟೊ ಪ್ರಮಾಣ ವಚನ; ವ್ಯಾಪಕ ಪ್ರತಿಭಟನೆ

Update: 2022-09-13 16:58 GMT

ನೈರೋಬಿ, ಸೆ.13.  ಕೆನ್ಯಾದಲ್ಲಿ ನಡೆದ ನಿಕಟ ಪೈಪೋಟಿಯ ಚುನಾವಣೆಯಲ್ಲಿ ಮೇಲುಗೈ ಸಾಧಿಸಿದ ವಿಲಿಯಂ ರುಟೊ ಮಂಗಳವಾರ ದೇಶದ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಆದರೆ ಪರಾಜಿತ ಅಭ್ಯರ್ಥಿಯ ಭದ್ರಕೋಟೆಗಳಲ್ಲಿ ಹಿಂಸಾತ್ಮಕ ಪ್ರತಿಭಟನೆ ಭುಗಿಲೆದ್ದಿದ್ದು, ಚುನಾವಣೆಯ ಉಸ್ತುವಾರಿ ವಹಿಸಿದ್ದ ಆಯೋಗದಲ್ಲಿ  ಚುನಾವಣೆಯ ಫಲಿತಾಂಶದ ವಿಷಯದಲ್ಲಿ ಭಿನ್ನಮತ ಮೂಡಿದೆ ಎಂದು ವರದಿಯಾಗಿದೆ. ನೈರೋಬಿಯ ಐಇಬಿಸಿ(ಇಂಡಿಪೆಂಡೆಂಟ್ ಎಲೆಕ್ಟೋರಲ್ ಆ್ಯಂಡ್ ಬೌಂಡರೀಸ್ ಕಮಿಷನ್) ಕೇಂದ್ರದಲ್ಲಿ ಚುನಾವಣೆ ಘೋಷಿಸುವ ಸಂದರ್ಭ ಹಲವು ನಾಟಕೀಯ ಘಟನೆ ನಡೆದು ಕೇಂದ್ರ ಗೊಂದಲದ ಗೂಡಾಯಿತು.

ರಾಜಕೀಯ ಪಕ್ಷಗಳ ಮುಖಂಡರು ಮತ್ತು ಬೆಂಬಲಿಗರು ಪರಸ್ಪರರತ್ತ ಕುರ್ಚಿಗಳನ್ನು ಎಸೆದು ಗದ್ದಲ ಆರಂಭಿಸಿದರು. ಐಇಬಿಸಿಯ 7 ಸದಸ್ಯರಲ್ಲಿ 4 ಸದಸ್ಯರು ಫಲಿತಾಂಶವನ್ನು ನಿರಾಕರಿಸಿದರು. ವಿಪಕ್ಷದ ಪ್ರಮುಖ ಮುಖಂಡ ಒಡಿಂಗಾರ ಭದ್ರಕೋಟೆ ಕಿಸುಮು ನಗರದಲ್ಲಿ ಅವರ ಬೆಂಬಲಿಗರು ಬೀದಿಗಿಳಿದು ಟೈಯರ್‌ಗಳಿಗೆ ಬೆಂಕಿ ಹಚ್ಚಿ ರಸ್ತೆ ತಡೆ ನಡೆಸಿದರು ಮತ್ತು ಕಲ್ಲುಗಳನ್ನು ಎಸೆದರು. ಅಶ್ರುವಾಯು ಸಿಡಿಸಿ ಅವರನ್ನು ಪೊಲೀಸರು ಚದುರಿಸಿದರು.

ಚುನಾವಣೆಯಲ್ಲಿ ವ್ಯಾಪಕ ಅಕ್ರಮ ಮತ್ತು ಅನ್ಯಾಯ ನಡೆದಿದ್ದು ಫಲಿತಾಂಶವನ್ನು ಒಪ್ಪಲು ಸಾಧ್ಯವಿಲ್ಲ ಎಂದು ಒಡಿಂಗಾ ಅವರ ಪಕ್ಷ ಆರೋಪಿಸಿದೆ. 2007, 2013 ಮತ್ತು 2017ರ ಅಧ್ಯಕ್ಷೀಯ ಚುನಾವಣೆಯಲ್ಲೂ ಸ್ಪರ್ಧಿಸಿದ್ದ 77 ವರ್ಷದ ಒಡಿಂಗಾ ಈ ಬಾರಿಯ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ಹೊಂದಿದ್ದರು. ಇದೀಗ ಫಲಿತಾಂಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಮನವಿ ಸಲ್ಲಿಸುವುದಾಗಿ ಒಡಿಂಗಾ ಅವರ ಪಕ್ಷದ ಮುಖಂಡರು ಹೇಳಿದ್ದಾರೆ.

ಶಾಂತಿ ಕಾಪಾಡುವಂತೆ ನೂತನ ಅಧ್ಯಕ್ಷ  ರುಟೋ ದೇಶದ ಜನತೆಗೆ ಮನವಿ ಮಾಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News