ದೇಶದ ಶೇ. 67 ಮಕ್ಕಳಲ್ಲಿ ಅನೀಮಿಯ!

Update: 2022-09-14 05:54 GMT

ರಕ್ತದಲ್ಲಿ ಹಿಮೋಗ್ಲೋಬಿನ್ ಮಟ್ಟ ಕಡಿಮೆಯಾದರೆ ಅದನ್ನು ಅನೀಮಿಯ (ರಕ್ತಹೀನತೆ) ಎಂದು ಕರೆಯಲಾಗುತ್ತದೆ. ಹಿಮೋಗ್ಲೋಬಿನ್‌ನ ಮುಖ್ಯ ಅಂಶ ಕಬ್ಬಿಣ. ಜಗತ್ತಿನಾದ್ಯಂತ ಇರುವ ಒಟ್ಟು ಅನೀಮಿಯ ಪ್ರಕರಣಗಳ ಅರ್ಧದಷ್ಟಕ್ಕೆ ಕಬ್ಬಿಣಾಂಶದ ಕೊರತೆಯೇ ಕಾರಣ ಎಂದು ಅಂದಾಜಿಸಲಾಗಿದೆ. ಅನೀಮಿಯಕ್ಕೆ ಕಾರಣವಾಗುವ ಇತರ ಅಂಶಗಳೆಂದರೆ ಮಲೇರಿಯ, ಕೊಕ್ಕೆಹುಳ ಮತ್ತು ಲಾಡಿಹುಳ ಮುಂತಾದ ಇತರ ಪರೋಪಜೀವಿ ಹುಳಗಳು, ಇತರ ಪೌಷ್ಟಿಕಾಂಶ ಕೊರತೆಗಳು, ಗಂಭೀರ ಸೋಂಕುಗಳು ಮತ್ತು ವಂಶವಾಹಿ ಕಾರಣಗಳು. ಮಕ್ಕಳಲ್ಲಿ ಅನೀಮಿಯವು ಗಂಭೀರ ಸಮಸ್ಯೆಯಾಗಿದೆ. ಯಾಕೆಂದರೆ ಅದು ಬೌದ್ಧಿಕ ಬೆಳವಣಿಗೆಯನ್ನು ತಡೆಹಿಡಿಯಬಲ್ಲದು, ದೈಹಿಕ ಬೆಳವಣಿಗೆಯನ್ನು ಸ್ಥಗಿತಗೊಳಿಸಬಹುದು ಮತ್ತು ಸಾಂಕ್ರಾಮಿಕ ರೋಗಗಳಿಗೆ ಗುರಿಯಾಗುವ ಸಾಧ್ಯತೆಯನ್ನು ಹೆಚ್ಚಿಸಬಹುದು.

ಸಮೀಕ್ಷೆಯಲ್ಲಿ, 6ರಿಂದ 59 ತಿಂಗಳುಗಳ ನಡುವಿನ ಮಕ್ಕಳನ್ನು ಹಿಮೋಗ್ಲೋಬಿನ್ ಪರೀಕ್ಷೆಗೆ ಒಳಪಡಿಸಲಾಯಿತು. ಪರೀಕ್ಷೆಗೆ ಅರ್ಹರಾದ ಮಕ್ಕಳ ಪೈಕಿ ಶೇ. 91 ಮಕ್ಕಳಿಗೆ ಪರೀಕ್ಷೆಯನ್ನು ಯಶಸ್ವಿಯಾಗಿ ಮಾಡಲಾಯಿತು. ಒಟ್ಟಾರೆ ಶೇ. 67 ಮಕ್ಕಳು ಒಂದಲ್ಲ ಒಂದು ಹಂತದ ಅನೀಮಿಯದಿಂದ ಬಳಲುತ್ತಿರುವುದು ಪರೀಕ್ಷೆಯಿಂದ ಗೊತ್ತಾಯಿತು. ಶೇ. 29 ಮಕ್ಕಳು ಲಘು ಅನೀಮಿಯದಿಂದ ಬಳಲಿದರೆ, ಶೇ. 36 ಮಕ್ಕಳು ಮಧ್ಯಮ ಪ್ರಮಾಣದ ಅನೀಮಿಯದಿಂದ ಬಳಲುತ್ತಿದ್ದಾರೆ. ಹಾಗೂ ಶೇ. 2 ಮಕ್ಕಳು ತೀವ್ರ ಪ್ರಮಾಣದ ಅನೀಮಿಯದಿಂದ ಬಳಲುತ್ತಿದ್ದಾರೆ.

ಶೇ. 57 ಮಹಿಳೆಯರಿಗೆ ಅನೀಮಿಯ

ಭಾರತದಲ್ಲಿ 15-49 ವಯೋ ಗುಂಪಿನ ಶೇ. 57 ಮಹಿಳೆಯರು ಮತ್ತು ಶೇ. 25 ಪುರುಷರು ಅನೀಮಿಯಕ್ಕೆ ಒಳಗಾಗಿದ್ದಾರೆ ಎಂದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 2019-21 ವರದಿ ಹೇಳುತ್ತದೆ.

ಈ ಪೈಕಿ ಶೇ. 26 ಮಹಿಳೆಯರು ಲಘು ಅನೀಮಿಯಕ್ಕೆ ಒಳಗಾದರೆ, ಶೇ. 29 ಮಹಿಳೆಯರು ಮಧ್ಯಮ ಮಟ್ಟದ ಅನೀಮಿಯಕ್ಕೆ ಒಳಗಾಗಿದ್ದಾರೆ. ಹಾಗೂ ಶೇ.3 ಮಹಿಳೆಯರು ತೀವ್ರ ಅನೀಮಿಯದಿಂದ ಬಳಲುತ್ತಿದ್ದಾರೆ.

ಅದೇ ವೇಳೆ, ಶೇ. 20 ಪುರುಷರು ಲಘು ಅನೀಮಿಯಕ್ಕೆ ಒಳಗಾದರೆ, ಶೇ. 5 ಪುರುಷರು ಮಧ್ಯಮ ಮಟ್ಟದ ಅನೀಮಿಯದಿಂದ ಬಳಲುತ್ತಿದ್ದಾರೆ. ಶೇ. 0.4 ಪುರುಷರು ತೀವ್ರ ಮಟ್ಟದ ಅನೀಮಿಯಕ್ಕೆ ಒಳಗಾಗಿದ್ದಾರೆ.

ಅನೀಮಿಯ ಪ್ರವೃತ್ತಿಗಳು

ಅನೀಮಿಯವು ದೊಡ್ಡ ಮಕ್ಕಳಿಗಿಂತಲೂ ಹೆಚ್ಚಾಗಿ 35 ತಿಂಗಳುಗಳಿಗಿಂತ ಕೆಳಗಿನ ಮಕ್ಕಳನ್ನು ಬಾಧಿಸುತ್ತದೆ. ಶೇ. 80 ಅನೀಮಿಯ ಪ್ರಕರಣಗಳು 12-17 ತಿಂಗಳುಗಳ ನಡುವಿನ ಮಕ್ಕಳಲ್ಲಿ ಕಾಣಿಸಿಕೊಂಡಿವೆ.

ಹೆತ್ತವರ ಮಕ್ಕಳ ಸಂಖ್ಯೆಯಲ್ಲಿ ಹೆಚ್ಚಾದಂತೆ ಅವರ ಮಕ್ಕಳು ಅನೀಮಿಯಕ್ಕೆ ಒಳಗಾಗುವುದೂ ಹೆಚ್ಚುತ್ತದೆ. ಅನೀಮಿಯಕ್ಕೆ ಒಳಗಾಗದ ತಾಯಂದಿರ ಮಕ್ಕಳಿಗಿಂತ ಅನೀಮಿಯಕ್ಕೆ ಒಳಗಾಗಿರುವ ತಾಯಂದಿರ ಮಕ್ಕಳಲ್ಲಿ ಅನೀಮಿಯ ಪ್ರಕರಣಗಳು ಹೆಚ್ಚು.

ತಾಯಿಯ ಶಿಕ್ಷಣದ ಅವಧಿ ಮತ್ತು ಕುಟುಂಬದ ಸಂಪತ್ತು ಹೆಚ್ಚಿದಂತೆ ಮಕ್ಕಳ ಅನೀಮಿಯ ಪ್ರಕರಣಗಳು ಕಡಿಮೆಯಾಗುತ್ತವೆ.

ಹೆಚ್ಚುತ್ತಿರುವ ಅನೀಮಿಯ ಪ್ರಕರಣಗಳು

ಅನೀಮಿಯ ಪ್ರಕರಣಗಳ ಸಂಖ್ಯೆ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-4 ಮತ್ತು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5ರ ನಡುವಿನ ಅವಧಿಯಲ್ಲಿ ಏರಿಕೆಯಾಗಿದೆ. ಅಂದರೆ 2015-16ರಲ್ಲಿ ಮಹಿಳೆಯರಲ್ಲಿ ಶೇ. 53ರಷ್ಟಿದ್ದ ಅನೀಮಿಯ ಪ್ರಕರಣಗಳ ಸಂಖ್ಯೆ 2019-21ರ ವೇಳೆಗೆ ಶೇ. 57ಕ್ಕೆ ಹೆಚ್ಚಿದೆ. ಇದೇ ಅವಧಿಯಲ್ಲಿ ಪುರುಷರ ಅನೀಮಿಯ ಪ್ರಕರಣಗಳ ಸಂಖ್ಯೆ ಶೇ. 23ರಿಂದ 25ಕ್ಕೆ ಏರಿದೆ.

ಶಾಲಾ ಶಿಕ್ಷಣ ಮತ್ತು ಸಂಪತ್ತು

   ಶಾಲಾ ಶಿಕ್ಷಣದ ಅವಧಿ ಹೆಚ್ಚಿದಂತೆ ಸಾಮಾನ್ಯವಾಗಿ ಅನೀಮಿಯ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತದೆ. ಶಾಲೆಗೆ ಹೋಗದ ಮಹಿಳೆಯರ ಅನೀಮಿಯ ಪ್ರಮಾಣ ಶೇ. 59 ಆಗಿದ್ದರೆ, 12 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗೆ ಶಾಲೆಗೆ ಹೋಗಿರುವ ಮಹಿಳೆಯರಲ್ಲಿ ಈ ಪ್ರಮಾಣ ಶೇ. 52 ಆಗಿದೆ. ಅದೇ ವೇಳೆ, ಶಾಲೆಗೆ ಹೋಗದ ಪುರುಷರ ಅನೀಮಿಯ ಪ್ರಮಾಣ ಶೇ. 32 ಆಗಿದ್ದರೆ, 12 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗೆ ಶಾಲೆಗೆ ಹೋಗಿರುವ ಪುರುಷರರಲ್ಲಿ ಈ ಪ್ರಮಾಣ ಶೇ. 19 ಆಗಿದೆ.

 ಕುಟುಂಬದ ಸಂಪತ್ತು ಹೆಚ್ಚಿದಂತೆ ಅನೀಮಿಯ ಪ್ರಕರಣಗಳ ಸಂಖ್ಯೆಯೂ ಕಡಿಮೆಯಾಗುತ್ತದೆ. ಸಂಪತ್ತನ್ನು ಐದು ವಿಭಾಗಗಳಲ್ಲಿ ವಿಂಗಡಿಸಿದರೆ, ಕನಿಷ್ಠ ಸಂಪತ್ತು ಗುಂಪಿನಲ್ಲಿ ಬರುವ ಮಹಿಳೆಯರು ಅನೀಮಿಯಕ್ಕೆ ಒಳಗಾಗುವ ಪ್ರಮಾಣ ಶೇ. 64 ಇದ್ದರೆ, ಗರಿಷ್ಠ ಸಂಪತ್ತು ಗುಂಪಿಗೆ ಸೇರಿದ ಮಹಿಳೆಯರಲ್ಲಿ ಈ ಪ್ರಮಾಣ ಶೇ. 51 ಆಗಿದೆ. ಅದೇ ವೇಳೆ, ಕನಿಷ್ಠ ಸಂಪತ್ತು ಗುಂಪಿನಲ್ಲಿ ಬರುವ ಪುರುಷರು ಅನೀಮಿಯಕ್ಕೆ ಒಳಗಾಗುವ ಪ್ರಮಾಣ ಶೇ. 36 ಇದ್ದರೆ, ಗರಿಷ್ಠ ಸಂಪತ್ತು ಗುಂಪಿಗೆ ಸೇರಿದ ಪುರುಷರಲ್ಲಿ ಈ ಪ್ರಮಾಣ ಶೇ. 18 ಆಗಿದೆ.

ಗುಜರಾತ್‌ನಲ್ಲಿ ಅತ್ಯಧಿಕ ಅನೀಮಿಯಪೀಡಿತ ಮಕ್ಕಳು

   6ರಿಂದ 59 ತಿಂಗಳುಗಳ ನಡುವಿನ ಮಕ್ಕಳ ಪೈಕಿ, ರಾಜ್ಯವಾರು ಅತ್ಯಧಿಕ ಅನೀಮಿಯಪೀಡಿತ ಮಕ್ಕಳಿರುವುದು ಗುಜರಾತ್‌ನಲ್ಲಿ (ಶೇ. 80).

   ನಂತರದ ಸ್ಥಾನಗಳಲ್ಲಿರುವ ರಾಜ್ಯಗಳೆಂದರೆ ಮಧ್ಯಪ್ರದೇಶ (ಶೇ. 73), ರಾಜಸ್ಥಾನ (ಶೇ. 72) ಮತ್ತು ಪಂಜಾಬ್ (ಶೇ. 71).

   ಕೆಲವು ಕೇಂದ್ರಾಡಳಿತ ಪ್ರದೇಶಗಳಲ್ಲಿ ಇದಕ್ಕೂ ಹೆಚ್ಚಿನ ಅನೀಮಿಯ ಪ್ರಕರಣಗಳಿವೆ. ಅವುಗಳೆಂದರೆ ಲಡಾಖ್‌ನಲ್ಲಿ ಶೇ. 94, ದಾದರ್ ಮತ್ತು ನಗರ ಹವೇಲಿ (ಶೇ. 76), ದಾಮನ್ ಮತ್ತು ದಿಯು (ಶೇ. 76) ಮತ್ತು ಜಮ್ಮು ಮತ್ತು ಕಾಶ್ಮೀರ (ಶೇ. 73).

  ಮಕ್ಕಳಲ್ಲಿ ಕನಿಷ್ಠ ಅನೀಮಿಯ ಪ್ರಕರಣಗಳಿರುವ ರಾಜ್ಯಗಳೆಂದರೆ ಕೇರಳ (ಶೇ. 39), ಅಂಡಮಾನ್ ಮತ್ತು ನಿಕೋಬಾರ್ (ಶೇ. 40), ನಾಗಾಲ್ಯಾಂಡ್ (ಶೇ. 43) ಮತ್ತು ಮಣಿಪುರ (ಶೇ. 43).

Writer - ಆರ್.ಎಚ್.

contributor

Editor - ಆರ್.ಎಚ್.

contributor

Similar News