×
Ad

ಉಳ್ಳಾಲ: ಮೆದುಳು ನಿಷ್ಕ್ರಿಯಗೊಂಡ ವಿದ್ಯಾರ್ಥಿಯ ಅಂಗಾಂಗ ದಾನ

Update: 2022-09-14 17:55 IST
ಯಶ್‌ ರಾಜ್

ಉಳ್ಳಾಲ: ಸಿಟಿ ಬಸ್ಸಿಂದ ಎಸೆಯಲ್ಪಟ್ಟು ಒಂದು ವಾರದಿಂದ ಚಿಂತಾಜನಕ ಸ್ಥಿತಿಯಲ್ಲಿದ್ದು, ಮೆದುಳು ನಿಷ್ಕ್ರಿಯಗೊಂಡ ಪಿಯು ವಿದ್ಯಾರ್ಥಿಯ ಅಂಗಾಂಗದಾನವು ಬುಧವಾರ ಕುಟುಂಬಸ್ಥರ ಒಪ್ಪಿಗೆ ಮೇರೆಗೆ ಮಾಡಲಾಯಿತು.

ನಗರದ ಖಾಸಗಿ ಆಸ್ಪತ್ರೆಯಿಂದ ಬೆಂಗಳೂರು ಮತ್ತು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಝೀರೋ ಟ್ರಾಫಿಕಲ್ಲಿ ಲಿವರ್, ಕಿಡ್ನಿ ಮತ್ತು ಕಣ್ಣುಗಳನ್ನು ರವಾನೆ ಮಾಡಲಾಗಿದೆ.

ಮಗನನ್ನು ಕಳಕೊಂಡ ದುಃಖದ ನಡುವೆಯೂ ಹೆತ್ತವರು ಅಂಗಾಂಗ ದಾನಕ್ಕೆ ಒಪ್ಪಿದ್ದು, ಅದರಂತೆ ರಾಜ್ಯ ಸರಕಾರದ ಜೀವ ಸಾರ್ಥಕತೆ ತಂಡದವರು ಅಂಗಾಂಗ ಕಸಿಗೆ ಏರ್ಪಾಡು ಮಾಡಿದ್ದಾರೆ.

ಬೆಂಗಳೂರುನಿಂದ ಬಂದ ವೈದ್ಯರು ಅಂಗಾಂಗ ದಾನ ಮಾಡಿ ಮೃತ ದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದಾರೆ.

ಎಲೋಶಿಯಸ್ ಕಾಲೇಜಿನಲ್ಲಿ ಪ್ರಥಮ ವರ್ಷದ ಕಂಪ್ಯೂಟರ್ ಸಾಯನ್ಸ್ ವಿದ್ಯಾರ್ಥಿಯಾಗಿದ್ದ ಯಶ್ ರಾಜ್‌  ಸೆ.7 ರ ಬೆಳಗ್ಗೆ ಮಾಸ್ತಿಕಟ್ಟೆಯಿಂದ ಸಿಟಿ ಬಸ್ಸಲ್ಲಿ ಕಾಲೇಜಿಗೆ ಹೋಗುತ್ತಿದ್ದ ವೇಳೆ ಅಡಂ ಕುದ್ರುವಿನಲ್ಲಿ ಬಸ್ಸಿಂದ ಹೊರಗೆ ಎಸೆಯಲ್ಪಟ್ಟಿದ್ದ. ಇದರಿಂದ ತಲೆಗೆ ಗಂಭೀರ ಗಾಯಗೊಂಡಿದ್ದ  ಆತನನ್ನು ನಗರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.

ಆರೋಗ್ಯದಲ್ಲಿ ಚೇತರಿಕೆ ಕಾಣದ ಆತನ ಮೆದುಳು ನಿಷ್ಕ್ರಿಯಗೊಂಡಿದೆ ಎಂದು ವೈದ್ಯರು ಮಂಗಳವಾರ ತಿಳಿಸಿದ್ದರು. ಪೋಷಕರ ಒಪ್ಪಿಗೆ ಮೇರೆಗೆ ಯಶ್ ರಾಜ್ ನ‌ ಅಂಗಾಂಗ ಬುಧವಾರ ದಾನ ಮಾಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಯಶ್ ರಾಜ್ ತಂದೆ ತ್ಯಾಗರಾಜ್ ಹೊಟೇಲ್ ಮಾಲಕರಾಗಿದ್ದು,‌ ತಾಯಿ ಮಮತಾ ಶಿಕ್ಷಕಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News