ಕೊರಗರ ಕಾಯಿಲೆಗೆ ಮದ್ಯಪಾನ, ದುಶ್ಟಟ ಕಾರಣವೆಂಬುದಕ್ಕೆ ಆಧಾರ ಇಲ್ಲ: ಡಾ.ಕಕ್ಕಿಲ್ಲಾಯ, ಡಾ.ಭಂಡಾರಿ

Update: 2022-09-14 14:33 GMT
ಡಾ.ಕಕ್ಕಿಲ್ಲಾಯ, ಡಾ.ಭಂಡಾರಿ

ಉಡುಪಿ, ಆ.14:  ಕೊರಗ ಸಮುದಾಯದವರು ಮದ್ಯಪಾನ ಮತ್ತು ಇತರ ದುಶ್ಚಟಗಳ ಕಾರಣದಿಂದ ತೀವ್ರತರ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎನ್ನುವುದಕ್ಕೆ ಮತ್ತು ಆ ಸಮುದಾಯದ ಮಕ್ಕಳು, ಮಹಿಳೆಯರು ಮತ್ತೆಲ್ಲರಿಗೂ ಉಂಟಾಗುವ ಯಾವುದೇ ಕಾಯಿಲೆಗಳಿಗೂ ಇವುಗಳಷ್ಟೇ ಕಾರಣ ಎನ್ನುವುದಕ್ಕೆ ಯಾವುದಾದರೂ ಆಧಾರಗಳಿದ್ದರೆ ಸರಕಾರವು ಅವನ್ನು ಈ ಕೂಡಲೇ ಬಿಡುಗಡೆ ಮಾಡಬೇಕು ಎಂದು ಉಡುಪಿಯ ಖ್ಯಾತ ಮನೋರೋಗ ತಜ್ಞ ಡಾ.ಪಿ.ವಿ. ಭಂಡಾರಿ ಹಾಗೂ ಮಂಗಳೂರಿನ ವೈದ್ಯಕೀಯ ತಜ್ಞ ಡಾ.ಶ್ರೀನಿವಾಸ ಕಕ್ಕಿಲ್ಲಾಯ  ಹೇಳಿದ್ದಾರೆ.

ಈ ಕುರಿತು ಜಂಟಿ ಹೇಳಿಕೆಯೊಂದನ್ನು ಬಿಡುಗಡೆಗೊಳಿಸಿರುವ ಅವರು, ‘ಆನ್‌ಲೈನ್ ಜರ್ನಲ್ ಆಫ್ ಹೆಲ್ತ್ ಆ್ಯಂಡ್ ಅಲೈಡ್ ಸಯನ್ಸ್’ನಲ್ಲಿ 2009ರಲ್ಲಿ ಪ್ರಕಟವಾದ ಉಡುಪಿಯ ಕೊರಗ ಸಮುದಾಯದ ಅಧ್ಯಯನದಲ್ಲಿ ಕೊರಗರಲ್ಲಿ ಮದ್ಯಪಾನದಿಂದ ಹಾನಿಗಳಾಗುವ ಸಾಧ್ಯತೆಗಳು ಇತರರಿಗಿಂತ ಕಡಿಮೆ ಇರುವುದನ್ನು ವರದಿ ಮಾಡಲಾಗಿತ್ತು. ಹಾಗಿರುವಾಗ ಕೊರಗರಿಗೆ ಬಾಧಿಸುವ ಎಲ್ಲಾ ಕಾಯಿಲೆಗಳಿಗೆ ಮದ್ಯಪಾನ ಮತ್ತು ಇತರ ದುಶ್ಚಟಗಳಷ್ಟೇ ಕಾರಣವೆಂದು ದೂಷಿಸಿ ಆ ನೆಪದಲ್ಲಿ ಸಕಲ ವೈದ್ಯಕೀಯ ಮರುಪಾವತಿಯನ್ನು ರದ್ದು ಪಡಿಸಿರುವುದು ಪರಮ ಅನ್ಯಾಯವಾಗಿದೆ ಎಂದವರು ಟೀಕಿಸಿದ್ದಾರೆ.

ಅಷ್ಟೇ ಅಲ್ಲ, ಆ ರೀತಿಯ ಆರೋಪವನ್ನು ಮಾಡಿರುವುದು ನಮ್ಮ ದೇಶದ ಅತಿ ಪ್ರಾಚೀನವಾದ, ಒಂದು ಕಾಲದಲ್ಲಿ ಈ ನಾಡನ್ನು ಆಳಿಕೊಂಡಿದ್ದ, ಈಗ ಅತಿ ಹಿಂದುಳಿದಿರುವ, ಅತಿ ಕಡಿಮೆ ಸದಸ್ಯರು ಉಳಿದುಕೊಂಡಿರುವ ಕೊರಗ ಸಮುದಾಯಕ್ಕೆ ಮಾಡಿರುವ ಮಹಾ ಅವಮಾನವೂ ಆಗಿದೆ. ಆದ್ದರಿಂದ ಇಂಥ ಅಮಾನವೀಯವಾದ, ಅವಮಾನಕಾರಿಯಾದ ಆದೇಶವನ್ನು ಈ ಕೂಡಲೇ ಹಿಂಪಡೆಯಬೇಕು ಎಂದು ಡಾ.ಭಂಡಾರಿ ಮತ್ತು ಡಾ.ಕಕ್ಕಿಲ್ಲಾಯ ಒತ್ತಾಯಿಸಿದ್ದಾರೆ.

ಈ ಆದೇಶದಲ್ಲಿ ನೀಡಿರುವ ಕಾರಣಗಳಿಗೆ ಕೊರಗ ಸಮುದಾಯದವರಿಗೆ ವೈದ್ಯಕೀಯ ಮರುಪಾವತಿ ಕೊಡುವುದಿಲ್ಲ ಎಂದಾದರೆ ಅವೇ ಕಾರಣಗಳಿಗಾಗಿ ಅಂಥ ’ದುಶ್ಚಟಗಳನ್ನು’ ಹೊಂದಿರಬಹುದಾದ ಜನಪ್ರತಿನಿಧಿಗಳಿಗೂ, ಸಚಿವರಿಗೂ ಯಾವುದೇ ವೈದ್ಯಕೀಯ ಮರುಪಾವತಿಯನ್ನು ನೀಡಲಾಗದು ಎಂಬ ಆದೇಶವನ್ನು ಹೊರಡಿಸುವ ಧೈರ್ಯವು ಸರಕಾರಕ್ಕಿದೆಯೇ ಎಂದು ಅವರು ಪ್ರಶ್ನಿಸಿದ್ದಾರೆ.  

ಅತ್ಯಂತ ಹಿಂದುಳಿದ ಕೊರಗ ಸಮುದಾಯದವರು ‘ಮದ್ಯಪಾನ ಮತ್ತು ಇತರ ದುಶ್ಚಟಗಳ ಕಾರಣದಿಂದ ತೀವ್ರತರ ಕಾಯಿಲೆಗಳಿಂದ ಬಳಲುತ್ತಿದ್ದು’, ಅದೇ ಕಾರಣಕ್ಕೆ ಇನ್ನು ಮುಂದೆ ಅವರಿಗೆ ಯಾವುದೇ ವೈದ್ಯಕೀಯ ವೆಚ್ಚ ಮರುಪಾವತಿಗೆ ಅವಕಾಶವಿರುವುದಿಲ್ಲ ಎಂಬ ಆದೇಶವನ್ನು ಆ.17ರಂದು ರಾಜ್ಯಸರಕಾರದ ಸಮಾಜ ಕಲ್ಯಾಣ ಇಲಾಖೆಯ ಉಪಕಾರ್ಯದರ್ಶಿ ಅವರು  ಹೊರಡಿಸಿದ್ದರು. ಈ ಆದೇಶದಲ್ಲಿ ಹೇಳಿರುವ ವೈದ್ಯಕೀಯ ವೆಚ್ಚದ ನಿರಾಕರಣೆಯೂ, ಅದಕ್ಕಾಗಿ ಬಳಸಿರುವ ಭಾಷೆಯೂ, ನೀಡಿರುವ ಕಾರಣಗಳೂ ತೀರಾ ಆಕ್ಷೇಪಾರ್ಹವೂ, ಅವೈಜ್ಞಾನಿಕವೂ, ಸತ್ಯಕ್ಕೆ ದೂರವಾದವೂ ಆಗಿದ್ದು, ನಾವು ಅದನ್ನು ಬಲವಾಗಿ ಖಂಡಿಸುತ್ತೇವೆ ಮತ್ತು ಸರಕಾರವು ಈ ಕೂಡಲೇ ಈ ಆದೇಶವನ್ನು ಹಿಂಪಡೆದು ಕೊರಗ ಸಮುದಾಯದವರಿಗೆ ದೊರೆಯುತ್ತಿದ್ದ ವೈದ್ಯಕೀಯ ಸೌಲಭ್ಯಗಳೂ ಸೇರಿದಂತೆ ಸಕಲ ಸೌಲಭ್ಯಗಳನ್ನೂ ಹಿಂದಿನಂತೆಯೇ ಮುಂದುವರಿಸಬೇಕೆಂದು ಆಗ್ರಹಿಸುತ್ತೇವೆ ಎಂದು ಡಾ.ಪಿ.ವಿ.ಭಂಡಾರಿ ಹಾಗೂ  ಡಾ.ಶ್ರೀನಿವಾಸ ಕಕ್ಕಿಲ್ಲಾಯ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸದನದಲ್ಲಿ ವಿಷಯ ಪ್ರಸ್ತಾಪಿಸಿದ ರಘುಪತಿ ಭಟ್

ಆರ್ಥಿಕವಾಗಿ ತೀರಾ ಹಿಂದುಳಿದಿರುವ ಪರಿಶಿಷ್ಟ ಪಂಗಡಕ್ಕೆ ಸೇರಿದ ಕೊರಗ ಜನಾಂಗದವರು ತೀವ್ರ ತರಹದ ಕಾಯಿಲೆಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಲ್ಲಿ ಅವರ ವೈದ್ಯಕೀಯ ವೆಚ್ಚವನ್ನು ಈ ಹಿಂದಿನಂತೆಯೇ ಸರಕಾರದ ವತಿಯಿಂದ ಮರುಪಾವತಿಸುವಂತೆ ಶಾಸಕ ಕೆ. ರಘುಪತಿ ಭಟ್ ಬುಧವಾರ ಸದನದಲ್ಲಿ ಗಮನ ಸೆಳೆಯುವ ಸೂಚನೆಯಲ್ಲಿ ವಿಷಯ ಪ್ರಸ್ತಾಪಿಸಿ ಒತ್ತಾಯಿಸಿದರು.

ಶಾಸಕ ರಘುಪತಿ ಭಟ್ ಅವರು ಈ ವಿಷಯಕ್ಕೆ ಮುಖ್ಯಮಂತ್ರಿಯವರೇ ಉತ್ತರಿಸಬೇಕು ಎಂದು ಒತ್ತಾಯಿಸಿದಾಗ, ಈ ಹಿಂದಿನಂತೆಯೇ ವೈದ್ಯಕೀಯ ವೆಚ್ಚ ಮರುಪಾವತಿಸಲು ಆದೇಶಿಸುವಂತೆ ಸೂಚಿಸಿದ್ದು, ಅದನ್ನು ಮುಂದುವರಿ ಸುವುದಾಗಿ  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸದನದಲ್ಲಿ ಭರವಸೆ ನೀಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News