ಇ-ಕೆವೈಸಿಯನ್ನು ಎಲ್ಲಾ ರೈತರು ಮಾಡಿಸಿಕೊಳ್ಳುವುದು ಕಡ್ಡಾಯ: ಮೋಹನ್ ರಾಜ್

Update: 2022-09-14 15:19 GMT

ಬ್ರಹ್ಮಾವರ, ಸೆ.14: ಪ್ರಧಾನಮತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಪರಿಹಾರ ಪಡೆಯಲು ಇ-ಕೆವೈಸಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದ್ದು, ಎಲ್ಲಾ ರೈತರು ತಮ್ಮ ಆಧಾರ್ ಹಾಗೂ ದೂರವಾಣಿ ಸಂಖ್ಯೆ ದಾಖಲಿಸಿ ಗ್ರಾಮ ಒನ್, ಸ್ಮಾರ್ಟ್‌ಫೋನ್‌ಗಳ ಮೂಲಕ ಶೀಘ್ರವಾಗಿ ಇ-ಕೆವೈಸಿ ಮಾಡಿಕೊಳ್ಳ ಬೇಕು ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮೋಹನ್‌ರಾಜ್ ಹೇಳಿದ್ದಾರೆ.

ಮಂದಾರ್ತಿ ಸಮೀಪದ ಕಾಡೂರು ಗ್ರಾಮಪಂಚಾಯತ್‌ನಲ್ಲಿ ಜರಗಿದ ಪ್ರಥಮ ಹಂತದ ಗ್ರಾಮಸಭೆಯಲ್ಲಿ ನೋಡಲ್ ಅಧಿಕಾರಿಯಾಗಿ ಭಾಗವಹಿಸಿ ಅವರು ಮಾತನಾಡುತಿದ್ದರು. ಮನ್‌ರೇಗಾ ಮತ್ತು ಸ್ವಚ್ಚ ಭಾರತ್ ಮಿಷನ್ ಯೋಜನೆಯಡಿ ಕಾಡೂರು ಗ್ರಾಪಂ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ್ದು ಜನರ ಸಹಭಾಗಿತ್ವವೂ ಮಾದರಿಯಾಗಿದೆ ಎಂದರು.

ಶಿಕ್ಷಣ ಇಲಾಖೆಯ ಅಧಿಕಾರಿ ರಾಘವ ಶೆಟ್ಟಿ ಮಾತನಾಡಿ, ಗ್ರಾಪಂ ಮೂಲಕ ಹೊಸತನದ ಕಾರ್ಯಚಟುವಟಿಕೆ ಗಳನ್ನು ಅನುಷ್ಟಾನ ಮಾಡಲು ಅವಕಾಶವಿದ್ದು,  ದೂರದೃಷ್ಟಿ ಯೋಜನೆಯಡಿ ಎಲ್ಲಾ ಇಲಾಖೆಗಳೂ ಸಮನ್ವಯ ದಿಂದ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು.

ಅರಣ್ಯ ಹಾಗೂ ಕಂದಾಯ ಇಲಾಖೆಯ ನಡುವಿನ ಸಮನ್ವಯದ ಕೊರತೆಯಿಂದಾಗಿ ಗ್ರಾಮೀಣ ಪ್ರದೇಶದ ನಾಗರಿಕರಿಗೆ ತೀವ್ರ ಸಮಸ್ಯೆಯಾಗಿದ್ದು ಜಂಟಿ ಸಮೀಕ್ಷೆಯ ಮೂಲಕ ಗಡಿ ಗುರುತು ಮಾಡಿ, ಶಾಶ್ವತ ಪರಿಹಾರಕ್ಕೆ  ನಿರ್ಣಯವಾಗಬೇಕೆಂದು ಗ್ರಾಪಂ ಮಾಜಿ ಅಧ್ಯಕ್ಷ ನಿತ್ಯಾನಂದ ಶೆಟ್ಟಿ ಆಗ್ರಹಿಸಿ ದರು. ಬ್ರಹ್ಮಾವರ ಪೊಲೀಸ್ ಠಾಣೆ ಠಾಣಾಧಿಕಾರಿ ಮುಕ್ತಾ ಮಾತನಾಡಿದರು.

ಕಾಡೂರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹೇಶ್ ಮಾತನಾಡಿ, ನರೇಗಾ ಅಡಿಯಲ್ಲಿ ಕೆರೆ-ಮದಗಗಳ ಹೂಳೆತ್ತುವ ಕಾಮಗಾರಿಗೆ ನಾಗರಿಕರ ಸಹಭಾಗಿತ್ವ ಉತ್ತಮವಾಗಿದ್ದು, ಇನ್ನಷ್ಟು ಸಾಮೂಹಿಕ ಕಾಮಗಾರಿಗಳ ಅನು ಷ್ಠಾನಕ್ಕೆ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.

ಅರಣ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಕೃಷಿ, ತೋಟಗಾರಿಕೆ, ಪಶುಪಾಲನೆ, ಮೆಸ್ಕಾಂ, ಆರೋಗ್ಯ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿ ಗಳು ಇಲಾಖಾ ಮಾಹಿತಿ ನೀಡಿದರು. ಕಾಡೂರು ಗ್ರಾಪಂ ಅಧ್ಯಕ್ಷ ಪಾಂಡುರಂಗ ಶೆಟ್ಟಿ, ಉಪಾಧ್ಯಕ್ಷೆ ಅಮಿತಾ ರಾಜೇಶ್, ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷೆ ವೀಣಾ, ಗ್ರಾಪಂ ಸದಸ್ಯರು, ಇಲಾಖಾಧಿಕಾರಿಗಳು ನಾಗರಿಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News