ಗಾಳಿ-ಮಳೆಗೆ ಉಡುಪಿ ಜಿಲ್ಲೆಯ ಅಲ್ಲಲ್ಲಿ ಅಪಾರ ಹಾನಿ

Update: 2022-09-14 15:34 GMT
ಫೈಲ್‌ ಫೋಟೊ 

ಉಡುಪಿ, ಸೆ.14: ಮಂಗಳವಾರ ಬಲವಾದ ಗಾಳಿಯೊಂದಿಗೆ ಸುರಿದ ಮಳೆಗೆ ಉಡುಪಿ ಜಿಲ್ಲೆಯ ವಿವಿಧೆಡೆಗಳಲ್ಲಿ ಅಪಾರ ಹಾನಿ ಸಂಭವಿಸಿದೆ. ಕಾರ್ಕಳ, ಬ್ರಹ್ಮಾವರ, ಹೆಬ್ರಿ ಹಾಗೂ ಕಾಪು ತಾಲೂಕುಗಳಲ್ಲಿ 10ಕ್ಕೂ ಅಧಿಕ ಮನೆಗಳಿಗೆ ಲಕ್ಷಾಂತರ ರೂ.ಗಳ ನಷ್ಟ ಸಂಭವಿಸಿರುವ ಬಗ್ಗೆ ಜಿಲ್ಲಾಧಿಕಾರಿಗಳ ಕಚೇರಿಗೆ ಮಾಹಿತಿ ಬಂದಿದೆ.

ಬ್ರಹ್ಮಾವರ ತಾಲೂಕು ಗಿಳಿಯಾರು ಗ್ರಾಮದ ರಾಮ ಮರಕಾಲ ಎಂಬವರ  ವಾಸ್ತವ್ಯದ ಪಕ್ಕಾ ಮನೆಯ ಗೋಡೆ ಗಾಳಿ-ಮಳೆಯಿಂದ ಭಾಗಶ: ಕುಸಿದು ಬಿದ್ದಿದ್ದು ಐದು ಲಕ್ಷ ರೂ.ಗಳಿಗೂ ಅಧಿಕ ನಷ್ಟದ ಅಂದಾಜು ಮಾಡಲಾಗಿದೆ. ಹೆಬ್ರಿ ತಾಲೂಕು ಕುಚ್ಚೂರು ಗ್ರಾಮದ ರಾಧಾಕೃಷ್ಣರ ಮನೆ ಗಾಳಿ-ಮಳೆಯಿಂದ ಸಂಪೂರ್ಣ ಹಾನಿಗೊಳಗಾಗಿದ್ದು ಮೂರು ಲಕ್ಷರೂ.ಗಳ ನಷ್ಟದ ಅಂದಾಜು ಮಾಡಲಾಗಿದೆ.

ಕಾರ್ಕಳ ತಾಲೂಕು ದುರ್ಗಾ ಗ್ರಾಮದ ರಿಯಾಝ್ ಎಂಬವರ ಮನೆಯೂ ಗಾಳಿ-ಮಳೆಯಿಂದ ಭಾಗಶ: ಹಾನಿಗೊಂಡಿದ್ದು ಒಂದು ಲಕ್ಷ ರೂ.ನಷ್ಟವಾಗಿರುವ ಬಗ್ಗೆ ಅಂದಾಜಿಸಲಾಗಿದೆ. ಇನ್ನುಳಿದಂತೆ ಹೆಬ್ರಿ ತಾಲೂಕು ಅಲ್ಬಾಡಿಯ ರಾಜು ನಾಯ್ಕರ ಮನೆಗೆ 75000, ದುರ್ಗಾದ ಸದಾಶಿವ ಆಚಾರ್ಯ,ಕಾಪು ತಾಲೂಕು 92 ಹೇರೂರಿನ ಸುಶೀಲ, ಹೆಬ್ರಿ ತಾಲೂಕು ಅಲ್ಬಾಡಿಯ ರಾಮ ನಾಯ್ಕರ ಮನೆಗಳಿಗೆ ತಲಾ 50‌,000ರೂ. ನಷ್ಟವಾಗಿದೆ.

ದುರ್ಗಾದ ಮಹಮ್ಮದ್ ಹುಸೈನ್, ಮುನಾರ್ ಸಾಹೇಬ್ ಮನೆಗಳಿಗೆ ತಲಾ 20 ಸಾವಿರ ರೂ., ಬ್ರಹ್ಮಾವರ ತಾಲೂಕು ಬನ್ನಾಡಿಯ ನಾರಾಯಣ ಆಚಾರಿ ಮನೆಗೆ 10000ರೂ. ಹಾಗೂ ಹಾರಾಡಿಯ ರವಿ ಎಂಬವರ ಮನೆಗೆ 15000 ರೂ.ನಷ್ಟ ಸಂಭವಿಸಿರುವ ಬಗ್ಗೆ ಪ್ರಾಥಮಿಕ ವರದಿಗಳು ಬಂದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News