ಏಶ್ಯಕಪ್‌ನ ಸೋಲು ಪಾಠ ಕಲಿಸೀತೇ?

Update: 2022-09-15 06:16 GMT

ಹದಿನೈದನೇ ಆವೃತ್ತಿಯ ಏಶ್ಯಕಪ್ ಕ್ರಿಕೆಟ್‌ನಲ್ಲಿ ಭಾರತ ಕಪ್ ಜಯಿಸಿ ಹ್ಯಾಟ್ರಿಕ್ ದಾಖಲಿಸುತ್ತದೆ ಎಂಬ ನಿರೀಕ್ಷೆ ಸುಳ್ಳಾಗಿದೆ. ಲಂಕಾ ಮತ್ತು ಪಾಕ್ ವಿರುದ್ಧದ ಸೋಲು ಕಪ್ ಗೆಲ್ಲುವ ಹಾದಿಯನ್ನು ಬಂದ್ ಮಾಡಿತು. ಏಳು ಬಾರಿ ಚಾಂಪಿಯನ್ ಆಗಿದ್ದ ಭಾರತಕ್ಕೆ ಹ್ಯಾಟ್ರಿಕ್ ಕಿರೀಟ ದಕ್ಕಲಿಲ್ಲ.

2022ರಲ್ಲಿ ಶ್ರೀಲಂಕಾದ ವಿಜಯವು ಖಂಡಿತವಾಗಿಯೂ ಈ ವರ್ಷದ ಪ್ರಮುಖ ಕ್ರಿಕೆಟ್ ಮುಖ್ಯಾಂಶಗಳಲ್ಲಿ ಒಂದಾಗಿದೆ. ಆರ್ಥಿಕ ಮತ್ತು ರಾಜಕೀಯವಾಗಿ ಸೊರಗಿರುವ ದ್ವೀಪ ರಾಷ್ಟ್ರ ಲಂಕೆಗೆ ಈ ಕ್ರಿಕೆಟ್ ಗೆಲುವು ಒಂದು ರೀತಿಯ ದಿವ್ಯೌಷಧವೆಂದು ಬಿಂಬಿತವಾಗುತ್ತಿವೆ.

ಶ್ರೀಲಂಕಾ ಗೆಲುವಿನ ಸಂಪೂರ್ಣ ಶ್ರೇಯ ಆಟಗಾರರಿಗೆ ಮತ್ತು ಸಹಾಯಕ ಸಿಬ್ಬಂದಿಗೆ ಸಲ್ಲಬೇಕು. ಪ್ರತಿಭಾವಂತ ಆಟಗಾರರನ್ನು ಹೊಂದಿರುವ ಶ್ರೀಲಂಕಾ ತಂಡ ಸಂಘಟಿತ ಪ್ರಯತ್ನದ ಮೂಲಕ ಗೆಲುವಿನ ಕಿರೀಟ ಧರಿಸಿದೆ. ವನಿಂದು ಹಸರಂಗ, ಭಾನುಕಾ ರಾಜಪಕ್ಸೆ, ಕುಸಲ್ ಮೆಂಡಿಸ್ ಮತ್ತು ಧಸುನ್ ಶನಕ ಲಂಕಾದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

 ಈ ಬಾರಿ ಏಶ್ಯಕಪ್‌ಟೂರ್ನಿ ಪ್ರಾರಂಭವಾದಾಗ ಭಾರತ ಮತ್ತು ಪಾಕಿಸ್ತಾನವು ಪ್ರಮುಖ ಆಕರ್ಷಣೆಯಾಗಿದ್ದರೆ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ತಂಡಗಳಿಗೆ ಏಶ್ಯ ಕಪ್ ಸಿಗುವ ಸಾಧ್ಯತೆ ಇರಲಿಲ್ಲ. ಆದರೆ ಆದದ್ದೇ ಬೇರೆ. ಭಾರತ ತಂಡವು ಪಾಕ್‌ನ್ನು ಮೊದಲ ಪಂದ್ಯದಲ್ಲಿ ಸೋಲಿಸಿ ಕಪ್ ಗೆಲ್ಲುವ ಫೇವರಿಟ್ ತಂಡವಾಗಿ ಕಾಣಿಸಿಕೊಂಡಿತು. ಆದರೆ ಮುಂದೆ ಆಗಿದ್ದು ಈಗ ಇತಿಹಾಸ. ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ತಂಡಗಳು ಭಾರತ ಮತ್ತು ಪಾಕಿಸ್ತಾನಕ್ಕೆ ಹೋಲಿಸಿದರೆ ಉತ್ತಮ ಪ್ರದರ್ಶನ ನೀಡಿವೆ. ಲೀಗ್ ಹಂತದಲ್ಲಿ ಶ್ರೀಲಂಕಾ ಮತ್ತು ಕಳೆದ ಎರಡು ಆವೃತ್ತಿಗಳಲ್ಲಿ ಎರಡನೇ ಸ್ಥಾನ ಪಡೆದಿದ್ದ ಬಾಂಗ್ಲಾವನ್ನು ಮಣಿಸಿ ಕೂಟದಲ್ಲಿ ಹೊಸ ಶಕ್ತಿಯಾಗಿ ಹೊರಹೊಮ್ಮಿದ್ದ ಅಫ್ಘಾನಿಸ್ತಾನವು ಪಾಕ್‌ಗೂ ಬೆದರಿಕೆಯನ್ನೊಡ್ಡಿದೆ. ಅಫ್ಘಾನಿಸ್ತಾನಕ್ಕೆ ಫೈನಲ್ ತಲುಪಲು ಸಾಧ್ಯವಾಗದಿದ್ದರೂ, ಅದು ದೊಡ್ಡ ತಂಡಗಳ ವಿರುದ್ಧ ಉತ್ಸಾಹಭರಿತ ಹೋರಾಟವನ್ನು ನಡೆಸಿತ್ತು. ಲಂಕೆಯ ಜಯ ಅಕ್ಟೋಬರ್‌ನಲ್ಲಿ ನಡೆಯಲಿರುವ ವಿಶ್ವಕಪ್‌ಗೆ ತಯಾರಿ ಎನ್ನುವಂತಿದೆ. ಬಹು-ರಾಷ್ಟ್ರಗಳ ಟ್ವೆಂಟಿ-20 ಪಂದ್ಯಾವಳಿಯಲ್ಲಿ ಭಾರತದ ಸತತ ಎರಡನೇ ಫ್ಲಾಪ್ ಶೋ ಇದಾಗಿದೆ. ಕಳೆದ ವರ್ಷಾಂತ್ಯದಲ್ಲಿ ನಡೆದ ಟ್ವೆಂಟಿ-20 ವಿಶ್ವಕಪ್‌ನಲ್ಲಿ ತಂಡವು ನಾಕೌಟ್ ಹಂತಕ್ಕೂ ಮುನ್ನವೇ ಭಿಯಾನ ಕೊನೆಗೊಳಿಸಿತ್ತು.

ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಮುಖ್ಯವಾಗಿ ದ್ವಿಪಕ್ಷೀಯ ಸರಣಿಯಲ್ಲಿ ಭಾರತದ ದಾಖಲೆಯು ಅತ್ಯುತ್ತಮವಾಗಿದ್ದರೂ, ಬಹು ತಂಡಗಳನ್ನು ಒಳಗೊಂಡ ಪಂದ್ಯಾವಳಿಗಳನ್ನು ಗೆಲ್ಲುವಲ್ಲಿ ವೈಫಲ್ಯ ಕಳವಳಕಾರಿಯಾಗಿದೆ, ಇದು ತಂಡದ ಮಾನಸಿಕ ಸಿದ್ಧತೆಯಲ್ಲಿ ಸ್ಪಷ್ಟವಾದ ದೋಷವನ್ನು ಬಹಿರಂಗಪಡಿಸುತ್ತದೆ.

ಒತ್ತಡದ ಪರಿಸ್ಥಿತಿಗಳಲ್ಲಿ ಧೈರ್ಯವನ್ನು ಹೊಂದಿರುವ ತಂಡವು ಗೆಲ್ಲುವ ಸಾಧ್ಯತೆ ಹೆಚ್ಚು. ಆಟಗಾರರು ಒತ್ತಡವನ್ನು ನಿಭಾಯಿಸಲು ಸಾಧ್ಯವಾಗದಿದ್ದರೆ ಉತ್ತಮ ಪ್ರತಿಭೆಯನ್ನು ಹೊಂದಿರುವ ತಂಡಗಳು ಸೋಲುತ್ತವೆ. ಭಾರತ ತಂಡದ ಸ್ಥಿತಿ ಅದೇ ರೀತಿ ಇದೆ. ಪಂದ್ಯಾವಳಿಗಳನ್ನು ಗೆಲ್ಲಲು ಬ್ಯಾಟಿಂಗ್ ಮತ್ತು ಬೌಲಿಂಗ್ ಫಾರ್ಮ್‌ನಲ್ಲಿ ಚೆನ್ನಾಗಿರುವುದು ಸಾಕಾಗುವುದಿಲ್ಲ. ಆಟಗಾರರು ಮಾನಸಿಕವಾಗಿಯೂ ಗಟ್ಟಿಯಾಗಿರಬೇಕಾಗುತ್ತದೆ. ಸ್ಥಿರತೆ ಮುಖ್ಯವಾಗಿದೆ. ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯದಲ್ಲಿ ಆರಂಭವಾಗಲಿರುವ ಟ್ವೆಂಟಿ-20 ವಿಶ್ವಕಪ್‌ಗೆ ಮುನ್ನ ಮುಖ್ಯ ಕೋಚ್ ಮತ್ತು ನಾಯಕ ರೋಹಿತ್ ಶರ್ಮಾ ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ತಂಡವನ್ನು ವಿಶ್ವಕಪ್‌ಗೆ ಅಣಿಗೊಳಿಸಬೇಕಾಗಿದೆ.

ಫೈನಲ್‌ಗೆ ತಲುಪಲು ಟೀಮ್ ಇಂಡಿಯಾಕ್ಕೆ ಯಾಕೆ ಸಾಧ್ಯವಾಗಲಿಲ್ಲ ಎನ್ನುವುದಕ್ಕೆ ಪ್ರಮುಖವಾಗಿ ನಾನಾ ಕಾರಣಗಳು ನಮಗೆ ಸ್ಪಷ್ಟವಾಗಿ ಗೋಚರಿಸುತ್ತದೆ. ಹೀಗಿದ್ದರೂ, ಕೆಲವು ಕಾರಣಗಳನ್ನು ಸುಲಭವಾಗಿ ನಮಗೆ ಪಟ್ಟಿ ಮಾಡಬಹುದಾಗಿದೆ. ಭಾರತವು ಆಗಸ್ಟ್ 28ರಂದು ಪಾಕಿಸ್ತಾನದ ವಿರುದ್ಧ ಏಶ್ಯಕಪ್ ನಲ್ಲಿ ಅಭಿಯಾನ ಆರಂಭಿಸಿದಾಗ ಟೀಮ್ ಮ್ಯಾನೇಜ್‌ಮೆಂಟ್ ರಿಷಬ್ ಪಂತ್‌ಗಿಂತ ಮುಂಚಿತವಾಗಿ ಅನುಭವಿ ದಿನೇಶ್ ಕಾರ್ತಿಕ್ ಅವರನ್ನು ಆಯ್ಕೆ ಮಾಡಿತು. ಕಾರ್ತಿಕ್ ಹಾಂಕಾಂಗ್ ವಿರುದ್ಧದ ಎರಡನೇ ಲೀಗ್ ಪಂದ್ಯಕ್ಕೆ ತಮ್ಮ ಸ್ಥಾನವನ್ನು ಉಳಿಸಿಕೊಂಡರು ಮತ್ತು ಪಂತ್ ಅವರನ್ನು ಪ್ಲೇಯಿಂಗ್ ಇಲೆವೆನ್‌ಗೆ ಮರಳಿ ಕರೆಸಲಾಯಿತು. ಆದಾಗ್ಯೂ, ಕಾರ್ತಿಕ್ ಪಾಕಿಸ್ತಾನದ ವಿರುದ್ಧ ಕೇವಲ ಒಂದು ಎಸೆತವನ್ನು ಎದುರಿಸಿದರು. ಹಾಂಕಾಂಗ್ ವಿರುದ್ಧ ಬ್ಯಾಟಿಂಗ್ ಮಾಡಲಿಲ್ಲ ಮತ್ತು ಪಾಕಿಸ್ತಾನ ಮತ್ತು ಶ್ರೀಲಂಕಾ ವಿರುದ್ಧದ ನಿರ್ಣಾಯಕ ಸೂಪರ್ ಫೋರ್ ಸ್ಪರ್ಧೆಗಳಿಗೆ, ಅವರನ್ನು ಕೈಬಿಡಲಾಯಿತು. ಆದರೆ ಪಂತ್ ಎರಡು ಪಂದ್ಯಗಳಲ್ಲಿ ಕೇವಲ 14 ಮತ್ತು 17 ರನ್ ಗಳಿಸಿದರು. ಕಾರ್ತಿಕ್ ಫಾರ್ಮ್‌ನಲ್ಲಿದ್ದರೂ, ಅವರನ್ನು ತಂಡದ ಸೇವೆಗೆ ಬಳಸಿಕೊಳ್ಳಲು ಸಾಧ್ಯವಾಗಲಿಲ್ಲ. ಇದಲ್ಲದೆ ಸೂಪರ್ ಫೋರ್ ಹಂತದಲ್ಲಿ 7ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ದೀಪಕ್ ಹೂಡಾಗೆ ಅವಕಾಶ ಕೊಟ್ಟರೂ ಅವರು ವೈಫಲ್ಯ ಅನುಭವಿಸಿದರು.

ಏಶ್ಯಕಪ್‌ನ ಮುಂಚಿತವಾಗಿ, ವೇಗಿಗಳಾದ ಜಸ್ಪ್ರೀತ್ ಬುಮ್ರಾ ಮತ್ತು ಹರ್ಷಲ್ ಪಟೇಲ್ ಅವರು ಗಾಯದ ಕಾರಣದಿಂದ ಪಂದ್ಯಾವಳಿಯಿಂದ ಹೊರಗುಳಿದರು. ಇದು ಭಾರತಕ್ಕೆ ದೊಡ್ಡ ಹೊಡೆತವನ್ನು ನೀಡಿತು. ಟೂರ್ನಿಯ ವೇಳೆ ಅವೇಶ್ ಖಾನ್ ಕೂಡಾ ಗಾಯಗೊಂಡರು. ಇದರಿಂದ ವೇಗದ ಬೌಲಿಂಗ್ ವಿಭಾಗ ಸೊರಗಿತ್ತು. ಉಪನಾಯಕ ಲೋಕೇಶ್ ರಾಹುಲ್ ಪಾಕಿಸ್ತಾನದ ವಿರುದ್ಧ ಸೊನ್ನೆ ಸುತ್ತಿ ಪಂದ್ಯಾವಳಿಯನ್ನು ಪ್ರಾರಂಭಿಸಿದರು. ಈ ಬಲಗೈ ಆಟಗಾರನ ಫಾರ್ಮ್ ಭಾರತಕ್ಕೆ ದೊಡ್ಡ ಚಿಂತೆಯಾಗಿತ್ತು. ನಾಯಕ ರೋಹಿತ್ ಮತ್ತು ರಾಹುಲ್ ತಂಡಕ್ಕೆ ಉತ್ತಮ ಆರಂಭ ನೀಡಿದರೆ ಅರ್ಧದಷ್ಟು ಕೆಲಸ ಮುಗಿದಂತೆ. ಆದಾಗ್ಯೂ, ರಾಹುಲ್ ಅವರ ಪುನರಾವರ್ತಿತ ವೈಫಲ್ಯಗಳೊಂದಿಗೆ, ಸೂಪರ್ ಫೋರ್ ಹಂತದಲ್ಲಿ ಪಾಕಿಸ್ತಾನದ ವಿರುದ್ಧ ಇಬ್ಬರೂ ಅರ್ಧಶತಕದ ಜೊತೆಯಾಟವನ್ನು ನೀಡಿದರು. ನಾಲ್ಕು ಇನಿಂಗ್ಸ್‌ಗಳಲ್ಲಿ ರಾಹುಲ್ ಕೇವಲ 70 ರನ್ ಗಳಿಸಿದರು. ವೇಗಿ ಭುವನೇಶ್ವರ್ ಕುಮಾರ್ ಇನಿಂಗ್ಸ್ ಆರಂಭದಲ್ಲಿ ಆಕರ್ಷಕವಾಗಿದ್ದರೂ ಕೊನೆಯ ಓವರ್‌ಗಳಲ್ಲಿ ದುಬಾರಿಯಾದರು. ಸೂಪರ್ ಫೋರ್ ಹಂತದಲ್ಲಿ ಪಾಕಿಸ್ತಾನಕ್ಕೆ 12 ಎಸೆತಗಳಲ್ಲಿ 26 ರನ್‌ಗಳ ಅಗತ್ಯವಿದ್ದಾಗ, ಭುವನೇಶ್ವರ್ 19 ರನ್‌ಗಳನ್ನು ಸೋರಿಕೆ ಮಾಡಿದ್ದರಿಂದ ಅಂತಿಮ ಓವರ್‌ನಲ್ಲಿ ಅರ್ಶ್‌ದೀಪ್ ಅವರು ಒತ್ತಡಕ್ಕೆ ಸಿಲುಕಿದರು. ಹೀಗಾಗಿ ತಂಡಕ್ಕೆ ಸೋಲು ತಪ್ಪಲಿಲ್ಲ. ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್ ಮತ್ತು ರೋಹಿತ್ ಹೊರತುಪಡಿಸಿ, ಇತರ ಯಾವುದೇ ಭಾರತೀಯ ಬ್ಯಾಟರ್ ಪಂದ್ಯಾವಳಿಯಲ್ಲಿ ಪ್ರಭಾವ ಬೀರಲಿಲ್ಲ. ಭಾರತದ ಮಧ್ಯಮ ಕ್ರಮಾಂಕ ಅಸ್ಥಿರವಾಗಿತ್ತು. ರೋಹಿತ್ ಶರ್ಮಾ ಅವರು ಯುವ ಆಟಗಾರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ತಾನು ನಡೆದದ್ದೇ ಹಾದಿ ಎಂದುಕೊಂಡದ್ದೇ ಸೋಲಿಗೆ ಕಾರಣವಾಯಿತು ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ಮುಂಬರುವ ವಿಶ್ವಕಪ್‌ನ ತಯಾರಿಗೆ ತಂಡಕ್ಕೆ ಏಶ್ಯಕಪ್‌ನಲ್ಲಿ ಸೋಲು ಎಚ್ಚರಿಕೆಯ ಸಂದೇಶವನ್ನು ನೀಡಿದೆ ಎನ್ನಬಹುದು.

Writer - ಇಬ್ರಾಹಿಂ ಅಡ್ಕಸ್ಥಳ

contributor

Editor - ಇಬ್ರಾಹಿಂ ಅಡ್ಕಸ್ಥಳ

contributor

Similar News