ಸುರತ್ಕಲ್ ಟೋಲ್‌ನ ಸಿಬ್ಬಂದಿಗೆ ಉದ್ಯೋಗ: ಕೆಪಿಸಿಸಿ ಸಂಯೋಜಕಿ ಪ್ರತಿಭಾ ಕುಳಾಯಿ ಭರವಸೆ

Update: 2022-09-15 12:31 GMT

ಮಂಗಳೂರು, ಸೆ.15: ಸುರತ್ಕಲ್ ಟೋಲ್ ತೆರವುಗೊಂಡಾಗ ಅಲ್ಲಿ ದುಡಿಯುತ್ತಿರುವ 31 ಮಂದಿ ಯುವಕ ಯವತಿಯರಿಗೆ ಉದ್ಯೋಗ ದೊರಕಿಸಿಕೊಡುವುದಾಗಿ ಕೆಪಿಸಿಸಿ ಸಂಯೋಜಕಿ, ಮನಪಾ ಮಾಜಿ ಸದಸ್ಯೆ ಪ್ರತಿಭಾ ಕುಳಾಯಿ ಭರವಸೆ ನೀಡಿದ್ದಾರೆ.

ಸುದ್ದಿಗೋಷ್ಠಿಲ್ಲಿಂದು ಈ ಘೋಷಣೆ ಮಾಡಿದ ಪ್ರತಿಭಾ ಕುಳಾಯಿ, ಟೋಲ್ ತೆರವುಗೊಂಡರೆ ಅಲ್ಲಿ ದುಡಿಯುತ್ತಿರುವ 31 ಮಂದಿ ನಿರುದ್ಯೋಗಿಗಳಾಗಿ ಅವರ ಕುಟುಂಬದ ಜೀವನ ನಿರ್ವಹಣೆಗೆ ತೊಂದರೆಯಾಗಲಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಅವರ ಶೈಕ್ಷಣಿಕ ಅರ್ಹತೆ, ಆಸಕ್ತಿಗೆ ಅನುಗುಣವಾಗಿ ಸೂಕ್ತ ಉದ್ಯೋಗ ದೊರಕಿಸಲು ತಾನು ಪ್ರಯತ್ನಿಸುವುದಾಗಿ ಹೇಳಿದರು.

ಟೋಲ್ ಗೇಟ್ ತೆರವಿಗೆ ಸಂಬಂಧಿಸಿ ಕೇಂದ್ರ  ಸಚಿವ ನಿತಿನ್ ಗಡ್ಕರಿ, ಸಂಸದ ನಳಿನ್ ಕುಮಾರ್ ಕಟೀಲು ಈಗಾಗಲೇ ಹಲವು ದಿನಾಂಕಗಳನ್ನು ಘೋಷಣೆ ಮಾಡಿದ್ದರೂ ಟೋಲ್ ಮುಚ್ಚಲು ಸಾಧ್ಯವಾಗಿಲ್ಲ. ಇತ್ತೀಚೆಗೆ ನೂರಾರು ಸಮಾನ ಮನಸ್ಕ ಸಂಘಟನೆಗಳು, ವಿವಿಧ ರಾಜಕೀಯ ಪಕ್ಷಗಲು ಸೇರಿ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ನಡೆಸಿರುವ ಹೋರಾಟಕ್ಕೆ ಶೀಘ್ರವೇ ಗೆಲವು ಸಿಗುವ ಭರವಸೆ ಇದೆ ಎಂದರು.

ಇತ್ತೀಚೆಗೆ ಹೋರಾಟದ ಸಂದರ್ಭ ಒಂದಿಬ್ಬರು ಮಹಿಳೆಯರು ಮಾತನಾಡುತ್ತಾ, ನಮ್ಮ ಮಕ್ಕಳು ಟೋಲ್‌ನಲ್ಲಿ ದುಡಿಯುತ್ತಿದ್ದಾರೆ. ಟೋಲ್ ತೆರವು ಆದರೆ, ಅವರ ಕೆಲಸ ಹೋಗಲಿದೆ ಎಂದು ನೋವು ವ್ಯಕ್ತಪಡಿಸಿದ್ದರು. ಹಾಗಾಗಿ ಸಾಮಾಜಿಕ ಜವಾಬ್ದಾರಿಯ ನಿಟ್ಟಿನಲ್ಲಿ ನಾನು ಈ ನಿರ್ಧಾರ ಕೈಗೊಂಡಿದ್ದೇನೆ. ನನ್ನ ಪರಿಚಯ, ಸಂಪರ್ಕದಲ್ಲಿರುವ ಕೆಲವು ಖಾಸಗಿ ಕಂಪನಿಗಳಲ್ಲಿ ಆ ಯುವಕ ಯುವತಿಯರಿಗೆ ಕೆಲಸ ದೊರಕಿಸುವ ನಿಟ್ಟಿನಲ್ಲಿ ನಾನು ಕಾರ್ಯ ಪ್ರವೃತ್ತಳಾಗಿದ್ದೇನೆ. ಮುಂದಿನ ವಾರದಿಂದ ಅವರಿಗೆ ಕೆಲಸ ಕೊಡಿಸುವ ಪ್ರಕ್ರಿಯೆ ನಡೆಯಲಿದೆ ಎಂದರು.

ಮುಂದಿನ ಚುನಾವಣೆಯಲ್ಲಿ ಸೀಟ್‌ಗಾಗಿ ಈ ಪ್ರಕ್ರಿಯೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರತಿಭಾ ಕುಳಾಯಿ, ನಾನು ರಾಜಕೀಯದಲ್ಲಿ ಇನ್ನೂ ಸಕ್ರಿಯಳಾಗಿದ್ದೇನೆ. ಹಾಗಾಗಿ ನಾನು ಎಲ್ಲಾ ಹುದ್ದೆಗಳಿಗೂ ನಾನು ಆಕಾಂಕ್ಷಿಯಾಗಿಯೇ ಇರುತ್ತೇನೆ. ಆದರೆ ಇದು ಸಾಮಾಜಿಕ ಜವಾಬ್ದಾರಿಯಿಂದ ಮಾಡುತ್ತಿರುವ ಕಾರ್ಯ ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News