ಹಾಲು, ಮಜ್ಜಿಗೆಯ ಜಿಎಸ್‌ಟಿ ಬಡವರ ಕಲ್ಯಾಣಕ್ಕೆ ವಿನಿಯೋಗ; ಸದನದಲ್ಲಿ ಶಾಸಕ ಹರೀಶ್ ಕುಮಾರ್ ಪ್ರಶ್ನೆಗೆ ಸಿಎಂ ಉತ್ತರ
Update: 2022-09-15 18:09 IST
ಮಂಗಳೂರು, ಸೆ.15: ರಾಜ್ಯದಲ್ಲಿ ಹಾಲು, ಮಜ್ಜಿಗೆ ಸೇರಿದಂತೆ ದೈನಂದಿನ ಬಳಕೆ ವಸ್ತುಗಳ ಮೇಲೆ ಶೇ. 5ರಷ್ಟು ಜಿಎಸ್‌ಟಿ ವಿಧಿಸುತ್ತಿರುವುದರಿಂದ ಜನ ಸಾಮಾನ್ಯರಿಗೆ ಅಲ್ಪ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಇದನ್ನು ರಾಜ್ಯದ ಅಭಿವೃದ್ಧಿ ಕಾರ್ಯ ಹಾಗೂ ಕಡು ಬಡವರ ಕಲ್ಯಾಣ ಕಾರ್ಯಗಳಿಗೆ ವಿನಿಯೋಗಿಸಲಾಗುವುದು ಎಂದು ಮುಖ್ಯಮಂತ್ರಿ ಉತ್ತರಿಸಿದ್ದಾರೆ.
ವಿಧಾನ ಪರಿಷತ್‌ನ ಕಲಾಪದಲ್ಲಿ ಇಂದು ವಿಧಾನ ಪರಿಷತ್‌ನ ಸದಸ್ಯ ಹರೀಶ್ ಕುಮಾರ್ ಅವರು ಕೇಳಿರುವ ಪ್ರಶ್ನೆಗೆ ಈ ಉತ್ತರ ದೊರಕಿದೆ.
ರಾಜ್ಯದಲ್ಲಿ ಹಾಲು, ಮಜ್ಜಿಗೆ, ಆಸ್ಪತ್ರೆ, ಹೊಟೇಲ್ ರೂಂ ಬಾಡಿಗೆಗೂ ಹೆಚ್ಚುವರಿ ಸರಕು ಸೇವೆ ತರಿಗೆ (ಜಿಎಸ್‌ಟಿ) ವಿಧಿಸಿರುವುದರಿಂದ ಜನ ಸಾಮಾನ್ಯರಿಗೆ ಜೀವನ ನಡೆಸಲು ತೊಂದರೆಯಾಗುತ್ತಿದೆ. ಹೆಚ್ಚುವರಿ ತೆರಿಗೆಯಿಂದಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ತೆರಿಗೆಯನ್ನು ಸಮತೋಲನಗೊಳಿಸುವ ನಿಟ್ಟಿನಲ್ಲಿ ಸರಕಾರ ಕೈಗೊಳ್ಳಲಿರುವ ಕ್ರಮಗಳೇನು ಎಂದು ಹರೀಶ್ ಕುಮಾರ್ ಪ್ರಶ್ನಿಸಿದ್ದರು.