×
Ad

ಸೆ. 29ರಿಂದ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ

Update: 2022-09-15 19:34 IST

ಪುತ್ತೂರು: ತಾಲೂಕು ಮಟ್ಟದ 21ನೇ  ಕನ್ನಡ ಸಾಹಿತ್ಯ ಸಮ್ಮೇಳನ ಬಪ್ಪಳಿಗೆ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಸೆ.29 ಮತ್ತು 30 ರಂದು ನಡೆಯಲಿದ್ದು, ಯುವ ಸಮುದಾಯವನ್ನು ಸಾಹಿತ್ಯದಲ್ಲಿ ತೊಡಗಿಸಿಕೊಳ್ಳುವ ಉದ್ದೇಶದಿಂದ  “ಸಾಹಿತ್ಯ ಪರಿಷತ್ತಿನ ನಡಿಗೆ ಯುವಜನತೆಯ ಕಡೆಗೆ” ಎಂಬ ಘೊಷವಾಕ್ಯದೊಂದಿಗೆ ವಿಶೇಷವಾಗಿ ಸಮ್ಮೇಳನ ನಡೆಯಲಿದೆ ಎಂದು ಕಸಾಪ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ತಿಳಿಸಿದ್ದಾರೆ.

ಅವರು ಗುರುವಾರ ಪುತ್ತೂರು ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಮ್ಮೇಳದನ ಅಂಗವಾಗಿ ವಿದ್ಯಾರ್ಥಿಗಳು ಸಹಿತ ಸಾರ್ವಜನಿಕರಿಗೆ ಕವನ ಹಾಗೂ ಕಥಾ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಅಲ್ಲದೆ ಸಮ್ಮೇಳನದಲ್ಲಿ ವಿಚಾರಗೋಷ್ಠಿಗೆ ಮಂಡನೆ ಅವಕಾಶ ನೀಡಲಾಗಿದ್ದು, ಮುಖ್ಯವಾಗಿ ಯುವ ಸಮುದಾಯಕ್ಕೆ “ನನ್ನ ಮೆಚ್ಚಿನ ಸಾಹಿತ್ಯ” ಎಂಬ ವಿಷಯದಲ್ಲಿ ನಡೆಯಲಿದೆ. ಪಿಯುಸಿ ಹಾಗೂ ಮೇಲ್ಪಟ್ಟ ತರಗತಿ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು ಆರು ಮಂದಿ ವಿದ್ಯಾರ್ಥಿಗಳಿಗೆ ಐದು ನಿಮಿಷಗಳ ಕಾಲ ಮಂಡನೆಗೆ ಅವಕಾಶವಿದೆ. ಅಲ್ಲದೆ ಹೊಸ ಪುಸ್ತಕಗಳ ಬಿಡುಗಡೆಗೆ ಅವಕಾಶವಿದ್ದು ಸೆ.25 ರೊಳಗೆ ಮುಂಚಿತವಾಗಿ ತಾಲೂಕು ಘಟಕದ ಕಾರ್ಯದರ್ಶಿ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಅವರನ್ನು ಸಂಪರ್ಕಿಸಬಹುದು ಎಂದು ಅವರು ತಿಳಿಸಿದರು. ಕವನ ಹಾಗೂ ಕಥೆಯನ್ನು ಸೆ.23 ರೊಳಗೆ ಸ್ಪರ್ಧೆಯ ಸಂಯೋಜಕಿ ಆಶಾ ಬೆಳ್ಳಾರೆ ಅವರನ್ನು ಸಂಪರ್ಕಿಸಬಹುದು ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕಸಾಪ ಘಟಕದ ಗೌರವ ಕಾರ್ಯದರ್ಶಿ ಡಾ.ಪೀಟರ್ ವಿಲ್ಸನ್ ಪ್ರಭಾಕರ್, ನಿಕಟಪೂರ್ವ ಅಧ್ಯಕ್ಷ ಬಿ.ಐತ್ತಪ್ಪ ನಾಯ್ಕ್, ನಿವೃತ್ತ ಪ್ರಾಂಶುಪಾಲ ಮಾಧವ ಭಟ್, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News