ಉಡುಪಿ: 17ಕ್ಕೆ ಸ್ವಚ್ಛ ಸಾಗರ ಸುರಕ್ಷಿತ ಸಾಗರ ಅಭಿಯಾನ

Update: 2022-09-15 14:28 GMT
ಸಾಂದರ್ಭಿಕ ಚಿತ್ರ

ಉಡುಪಿ, ಸೆ.15: ಆಝಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಸಮುದ್ರ ತೀರವನ್ನು ಸ್ವಚ್ಚಗೊಳಿಸುವುದ ರೊಂದಿಗೆ ಜನರಲ್ಲಿ ಸ್ಚಚ್ಛ ಹಾಗೂ ಸುರಕ್ಷಿತ ಸಾಗರದ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಸಾಗರ ಜೀವ ಸಂಪನ್ಮೂಲ ಮತ್ತು ಪರಿಸರ ಜ್ಞಾನ ಕೇಂದ್ರ ಸಂಸ್ದೆಯು ‘ಸ್ವಚ್ಚ ಸಾಗರ ಸುರಕ್ಷಿತ ಸಾಗರ’ ಎಂಬ ನೂತನ ಶೈಲಿಯ 75 ದಿನಗಳ ಸುದೀರ್ಘ ಕಾರ್ಯಕ್ರಮಕ್ಕೆ  ಜುಲೈ 3ರಂದು ಚಾಲನೆ ನೀಡಿದ್ದು, ಸೆಪ್ಟಂಬರ್ 17ರ ಅಂತಾರಾಷ್ಟ್ರೀಯ ಕರಾವಳಿ ಸ್ವಚ್ಛತಾ ದಿನದಂದು ಸಮಾಪನಗೊಳ್ಳಲಿದೆ.

ಸೆ.17ರಂದು ಬೆಳಗ್ಗೆ 7.30ಕ್ಕೆ ಮಲ್ಪೆ ಬೀಚ್‌ನಲ್ಲಿ ನಡೆಯಲಿರುವ ಸ್ಚಚ್ಛ ಸಾಗರ, ಸುರಕ್ಷಿತ ಸಾಗರ ಅಭಿಯಾನ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಉದ್ಘಾಟಿಸಲಿದ್ದು, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಜಿಲ್ಲಾ ಪೊಲೀಸ್ ಅಧೀಕ್ಷಕ ಹಾಕೆ ಅಕ್ಷಯ್ ಮಚ್ಚೀಂದ್ರ, ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್. ಮತ್ತಿತರರು ಉಪಸ್ಥಿತರಿರುವರು.

ನಗರಸಭೆ ಆಯುಕ್ತ ಡಾ.ಉದಯ್‌ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಲಿದ್ದು, ಜಿಲ್ಲಾ ಪ್ರವಾಸೋದ್ಯಮ ಇಲಾಖೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ, ಭಾರತೀಯ ತಟ ರಕ್ಷಣಾ ಪಡೆ, ಕರಾವಳಿ ಕಾವಲು ಪೊಲೀಸ್ ಇಲಾಖೆ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ, ಎನ್.ಎಸ್. ಅಪದಮಿತ್ರ ಸ್ವಯಂ ಸೇವಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿರುವರು.

ಅಭಿಯಾನದಲ್ಲಿ ಶಾಲಾ-ಕಾಲೇಜು, ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳಲ್ಲಿ, ಸಮುದ್ರ ತೀರಗಳಿಗೆ ಭೇಟಿ ನೀಡುವ ಪ್ರವಾಸಿಗರಲ್ಲಿ, ಮೀನುಗಾರ ಸಮುದಾಯಗಳಲ್ಲಿ ಹಾಗೂ ಕರಾವಳಿ ತೀರಗಳಲ್ಲಿ ವ್ಯವಹರಿಸುವ ಮತ್ತು ಸಾರ್ವಜನಿಕರಲ್ಲಿ, ಸಮುದ್ರ ತೀರಗಳಲ್ಲಿ ಎಸೆಯಲ್ಪಡುವ ತ್ಯಾಜ್ಯಗಳಿಂದ  ಸಮುದ್ರ ಪರಿಸರ ವ್ಯವಸ್ಧೆಯ ಮೇಲೆ ಉಂಟಾಗುವ ಅಡ್ಡ ಪರಿಣಾಮಗಳ ಕುರಿತು ಅರಿವು ಮೂಡಿಸಲಾಗುವುದು.

ಸ್ಚಚ್ಛ ಸಾಗರ, ಸುರಕ್ಷಿತ ಸಾಗರ ಅಭಿಯಾನವು ದೇಶದ 7500 ಕಿ.ಮೀ. ವ್ಯಾಪ್ತಿಯ, 75 ಕರಾವಳಿ ಜಿಲ್ಲೆಗಳ, 75 ಪ್ರಮುಖ ಸಮುದ್ರ ತೀರಗಳಲ್ಲಿ, 75 ಸ್ವಯಂಸೇವಕರಿಂದ ಕರಾವಳಿ ತೀರದ ಪ್ರತೀ ಕಿ.ಮೀ. ಒಳಗೊಳ್ಳುವ ನಿಟ್ಟಿನಲ್ಲಿ ಕಾರ್ಯಾಚರಿಸಲಿದ್ದು, ಸ್ವಯಂಸೇವಕರು ಏಕ ಬಳಕೆ ಪ್ಲಾಸ್ಟಿಕ್‌ಗಳನ್ನು ಗುರಿ ಯಾಗಿಸಿ, ಪ್ರತೀ ಮನೆಗಳಲ್ಲಿಯೂ ಇಂತಹ ತ್ಯಾಜ್ಯಗಳನ್ನು ಮೂಲದಿಂದಲೇ ಬೇರ್ಪಡಿಸುವ ಕಾರ್ಯವನ್ನು ನಡೆಸಲಿದ್ದಾರೆ.

ಅಭಿಯಾನದಲ್ಲಿ ಭಾಗವಸಲು ಆಸಕ್ತಿ ಹೊಂದಿರುವವರು ಇಕೋ ಮಿತ್ರ ಆ್ಯಪ್‌ನಲ್ಲಿ- https://ecomitram.page.link/HNN8PWVSbH7kdZpB6 - ಮೂಲಕ ನೊಂದಣಿ ಮಾಡಿಕೊಳ್ಳ ಬಹುದು ಎಂದು ನೆಹರು ಯುವ ಕೇಂದ್ರದ ಜಿಲ್ಲಾ ಯುವಜನ ಅಧಿಕಾರಿಗಳ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News