ವಿಶ್ವದಲ್ಲಿ ಶಾಂತಿ ಸ್ಥಾಪನೆಗಾಗಿ ಸಾಮೂಹಿಕ ಪ್ರಯತ್ನ ಅಗತ್ಯ: ಪ್ರೊ.ನಲಪತ್

Update: 2022-09-15 15:55 GMT

ಮಣಿಪಾಲ, ಸೆ.15: ನಾವಿಂದು ಬದುಕುತ್ತಿರುವ ಪ್ರಪಂಚ, ನಿಜವಾಗಿ ನೈತಿಕ ಹಾಗೂ ಆದರ್ಶದ ಜಗತ್ತಲ್ಲ. ಆದರೆ ಶಾಂತಿಪ್ರಿಯ ನಾಗರಿಕರಾದ ನಾವು ಶಾಂತಿ ಸ್ಥಾಪನೆಗಾಗಿ ಸಾಮೂಹಿಕ ಪ್ರಯತ್ನ ನಡೆಸಲೇಬೇಕಾಗಿದೆ ಎಂದು ಮಾಹೆ ಯುನೆಸ್ಕೋ ಶಾಂತಿಪೀಠದ ಮುಖ್ಯಸ್ಥ ಪ್ರೊ.ಎಂ.ಡಿ.ನಲಪತ್ ಹೇಳಿದ್ದಾರೆ.

ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ)ನ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆ್ಯಂಡ್ ಸಾಯನ್ಸ್ ಬುಧವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.

ಪ್ರಾಕೃತಿಕ ಸಂಪನ್ಮೂಲಗಳ ಮೇಲೆ ಪ್ರಾಬಲ್ಯ ಹಾಗೂ ನಿಯಂತ್ರಣ ಸಾಧಿಸುವ ಪ್ರಯತ್ನಗಳೇ ಈ ಹಿಂದೆಯೂ ಯುದ್ಧಗಳಿಗೆ ಕಾರಣವಾಗಿವೆ. ಮತ್ತು ‘ನೈಜ ಜಗತ್ತು ನೈತಿಕ ಜಗತ್ತಲ್ಲ’. ಆದರೆ ನಾವು ಶಾಂತಿಗಾಗಿ ಶ್ರಮಿಸಬೇಕಾಗಿದೆ ಎಂದರು.

ಅಂತಾರಾಷ್ಟ್ರೀಯ ಶಾಂತಿಯ ಹೊರತಾಗಿ, ಶಾಂತಿಯ ಕಲ್ಪನೆ ಲಿಂಗ, ಪರಿಸರ, ಸಾಮಾಜಿಕ ನ್ಯಾಯ ಮತ್ತಿತರ ಕಲ್ಪನೆಗಳನ್ನು ಒಳಗೊಂಡಿದೆ. ಅಂತಾರಾಷ್ಟ್ರೀಯ ಸಂಬಂಧಗಳಲ್ಲಿ ಬಲಾಢ್ಯ ರಾಷ್ಟ್ರವಾಗಿ ಭಾರತ ಭಾಗವಹಿಸ ಬೇಕು ಎಂದು ಅವರು ಪ್ರತಿಪಾದಿಸಿದರು.

ಭಾರತದಲ್ಲಿ ಧಾರ್ಮಿಕ ಸಹಬಾಳ್ವೆಯ ಅವಶ್ಯಕತೆ ಇದೆ. ಮತ್ತು ಈ ಕಲ್ಪನೆಯು ಯಾವುದೇ ಒಂದು ನಿರ್ದಿಷ್ಟ ಧರ್ಮಕ್ಕೆ ಸೇರಿದ್ದಲ್ಲ. ದೇಶದ ಎಲ್ಲಾ ಧರ್ಮಗಳ ಸಾರವೇ ಶಾಂತಿ ಎಂದ ಪ್ರೊ.ನಲಪತ್, ಭಾರತದ ವಿಭಜ ನೆಯೂ ಸೇರಿದಂತೆ ಗತಕಾಲದ ಹಲವು ನಿರರ್ಥಕ ಸಂಘರ್ಷಗಳ ಉದಾಹರಣೆಗಳನ್ನು ಅವರು ನೀಡಿದರು.
ಮಣಿಪಾಲ ಜಿಸಿಪಿಎಎಸ್‌ನ ಮುಖ್ಯಸ್ಥ ಪ್ರೊ. ವರದೇಶ್ ಹಿರೇಗಂಗೆ ಸಂವಾದವನ್ನು ನಡೆಸಿಕೊಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News