ಮದ್ಯ ವ್ಯಸನಿ ಜನಪ್ರತಿನಿಧಿಗಳ ಆರೋಗ್ಯ ವೆಚ್ಚ ಸರಕಾರ ಭರಿಸುವುದು ಎಷ್ಟು ಸರಿ?

Update: 2022-09-16 04:12 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಲೆತಲಾಂತರಗಳಿಂದ ಬದುಕಿಕೊಂಡು ಬರುತ್ತಿರುವ ಕೊರಗ ಸಮುದಾಯ ಅಳಿವಿನಂಚಿನಲ್ಲಿದೆ ಎಂಬ ಆತಂಕವನ್ನು ಸಾಮಾಜಿಕ ಕಾರ್ಯಕರ್ತರು ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಈ ನೆಲದ ಮೂಲನಿವಾಸಿಗಳು ಎಂದು ಪರಿಗಣಿತರಾಗಿರುವ ಕೊರಗ ಸಮುದಾಯವನ್ನು ಅವರದೇ ನೆಲದಿಂದ ಒಕ್ಕಲೆಬ್ಬಿಸಲು ಸರಕಾರ ಹಲವು ದಶಕಗಳಿಂದ ಕಾರ್ಯಾಚರಣೆ ನಡೆಸುತ್ತಾ ಬಂದಿದೆ. ಅದರಲ್ಲಿ ಸರಕಾರ ಭಾಗಶಃ ಯಶಸ್ವಿಯೂ ಆಗಿದೆ. ಅವರನ್ನು ‘ನಾಗರಿಕರನ್ನಾಗಿಸುವ’ ‘ಮುಖ್ಯವಾಹಿನಿಗೆ ಕರೆತರುವ’ ಹೆಸರಿನಲ್ಲಿ, ಅವರ ಫಲವತ್ತಾದ ನೆಲವನ್ನು ಕಬಳಿಸಿ, ಅವರನ್ನು ಬಂಜರು ಭೂಮಿಗೆ ವರ್ಗಾವಣೆ ಮಾಡಿದ ಆರೋಪಗಳೂ ಸರಕಾರದ ಮೇಲಿವೆ. ಈಗಲೂ ತಮ್ಮದೇ ಆದ ನೆಲದ ಹಕ್ಕು ಪತ್ರಗಳಿಗಾಗಿ ಕಚೇರಿಯಿಂದ ಕಚೇರಿಗೆ ಅಲೆದಾಡುವ ಕೊರಗ ಸಮುದಾಯದ ಜನರು ನಮ್ಮ ನಡುವೆ ಇದ್ದಾರೆ. ಕೊರಗರ ಅಭಿವೃದ್ಧಿಗಾಗಿ ಹತ್ತು ಹಲವು ಯೋಜನೆಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆಯಾದರೂ, ಆ ಯೋಜನೆ ಅರ್ಹ ಫಲಾನುಭವಿಗಳನ್ನು ತಲುಪಿದ್ದು ಕಡಿಮೆ. ಅಳಿದುಳಿದ ಕೊರಗರ ಬದುಕು ಇಂದಿಗೂ ಅಸಹನೀಯ ಸ್ಥಿತಿಯಲ್ಲಿದೆ. ಅಸ್ಪಶ್ಯತೆ, ಅಪೌಷ್ಟಿಕತೆ, ಅಸಮಾನತೆ ಅವರನ್ನು ಈಗಲೂ ಬೆಂಬಿಡದೇ ಕಾಡುತ್ತಿದೆ. ಒಂದೆಡೆ ತಮ್ಮ ಮೂಲ ಕಸುಬುಗಳನ್ನು ಮುಂದುವರಿಸಲಾಗದೆ, ಇನ್ನೊಂದೆಡೆ ಆಧುನಿಕ ಬದುಕಿಗೆ ಒಗ್ಗಿಕೊಳ್ಳಲಾಗದೆ ಅತಂತ್ರ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಎರಡು ದಶಕಗಳವರೆಗೂ ಅಜಲು ಪದ್ಧತಿಯಂತಹ ಅನಿಷ್ಟಗಳ ಜೊತೆಗೆ ಅವರು ಬದುಕು ನಡೆಸಬೇಕಾಗಿತ್ತು. ಅಜಲು ಪದ್ಧತಿಯ ವಿರುದ್ಧ ಸರಕಾರ ಕಾನೂನು ಜಾರಿಗೊಳಿಸಿದೆಯಾದರೂ, ಇಂದಿಗೂ ಕರಾವಳಿಯ ಮೇಲ್‌ಜಾತಿಯ ಜನರು ಕೊರಗರ ಕುರಿತಂತೆ ಹೊಂದಿರುವ ಮನಸ್ಥಿತಿಯಲ್ಲಿ ಯಾವುದೇ ವಿಶೇಷ ವ್ಯತ್ಯಾಸವಾಗಿಲ್ಲ.

ಕೊರಗರ ಜನಸಂಖ್ಯೆ ವರ್ಷದಿಂದ ವರ್ಷಕ್ಕೆ ಇಳಿಮುಖವಾಗುತ್ತಿದೆ ಎನ್ನುವುದು ಇತ್ತೀಚಿನ ಅಂಕಿ ಅಂಶಗಳು ಹೇಳುತ್ತಿವೆ. ಸ್ವಾತಂತ್ರ ಪೂರ್ವದಲ್ಲಿ ಈ ಕೊರಗರ ಜನಸಂಖ್ಯೆ 55,000 ಇದ್ದರೆ, ಸ್ವಾತಂತ್ರಾನಂತರ ನಡೆಸಿದ ಜನಗಣತಿಯಲ್ಲಿ ಇವರ ಸಂಖ್ಯೆ 35,000ಕ್ಕೆ ಇಳಿದಿತ್ತು. 2004ರ ಹೊತ್ತಿಗೆ ಇವರ ಜನಸಂಖ್ಯೆ 16,000ವಿದ್ದು, 2011ಕ್ಕೆ ಇವರ ಸಂಖ್ಯೆ 11,000ಕ್ಕೆ ಕುಸಿದಿದೆ. ಕೊರಗ ಸಮುದಾಯದಲ್ಲಿ ಜನನ ಪ್ರಮಾಣಕ್ಕಿಂತ ಮರಣ ಪ್ರಮಾಣ ಹೆಚ್ಚಿದೆ ಎನ್ನುವುದನ್ನು ಅಂಕಿಅಂಶಗಳು ಬಹಿರಂಗ ಪಡಿಸಿವೆ. ಅಪೌಷ್ಟಿಕತೆ, ಗರ್ಭಿಣಿಯರಲ್ಲಿ ರಕ್ತ ಹೀನತೆ ಮೊದಲಾದ ಅಂಶಗಳು ಇದಕ್ಕೆ ಮುಖ್ಯ ಕಾರಣಗಳಾಗಿವೆ. ಗಿರಿಜನ ಕಲ್ಯಾಣಾಭಿವೃದ್ಧಿ ಯೋಜನೆಯಡಿ ಇವರಿಗೆ ಪೌಷ್ಟಿಕ ಆಹಾರಗಳನ್ನು ವಿತರಿಸಲಾಗುತ್ತಿವೆಯಾದರೂ, ಅದರ ಗುಣಮಟ್ಟಗಳ ಕುರಿತಂತೆ ಭಾರೀ ಟೀಕೆಗಳು ವ್ಯಕ್ತವಾಗಿವೆ. ವಿಪರ್ಯಾಸವೆಂದರೆ, ಕೊರಗರಲ್ಲಿ ಒಂದು ತಲೆಮಾರು ಎಲ್ಲ ಸವಾಲುಗಳನ್ನು ಎದುರಿಸುತ್ತಾ ಶಿಕ್ಷಣ ಕ್ಷೇತ್ರದಲ್ಲಿ ಮುನ್ನುಗ್ಗುತ್ತಿದೆಯಾದರೂ, ಅವರಿಗೆ ಸೂಕ್ತ ಉದ್ಯೋಗಗಳನ್ನು ನೀಡುವಲ್ಲಿ ಸರಕಾರ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ, ಕೊರಗರಿಗಾಗಿ ವಿಶೇಷ ಮೀಸಲಾತಿಯನ್ನು ಒದಗಿಸಬೇಕು ಎಂದು ಕೊರಗ ಮುಖಂಡರು ಈಗಾಗಲೇ ಸರಕಾರದ ಮುಂದೆ ಬೇಡಿಕೆಯನ್ನಿಟ್ಟಿದ್ದಾರೆ. ಕೊರಗರ ಈ ಎಲ್ಲ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ, ಅವರ ಏಳಿಗೆಗಾಗಿ ಇನ್ನಷ್ಟು ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದ್ದ ಸರಕಾರ, ಇದೀಗ ಕೊರಗರ ಆರೋಗ್ಯಕ್ಕಾಗಿ ಮೀಸಲಿಟ್ಟ ವೈದ್ಯಕೀಯ ವೆಚ್ಚವನ್ನು ಹಿಂದೆಗೆಯಲು ಮುಂದಾಗಿದೆ. ‘ಮದ್ಯಪಾನ ಮತ್ತು ಇತರ ದುಶ್ಚಟಗಳ ಕಾರಣಗಳಿಂದ ತೀವ್ರತರ ಕಾಯಿಲೆಗಳಿಂದ ಕೊರಗ ಸಮುದಾಯ ಬಳಲುತ್ತಿದ್ದು, ಇನ್ನು ಮುಂದೆ ಅವರಿಗೆ ಯಾವುದೇ ವೈದ್ಯಕೀಯ ವೆಚ್ಚ ಮರು ಪಾವತಿಗೆ ಅವಕಾಶವಿಲ್ಲ’ ಎಂಬ ಆದೇಶವನ್ನು ಆಗಸ್ಟ್ 17ರಂದು ಸಮಾಜ ಕಲ್ಯಾಣ ಇಲಾಖೆ ಹೊರಡಿಸಿದೆ. ಇದರ ವಿರುದ್ಧ ಕೊರಗ ಸಮುದಾಯದ ಮುಖಂಡರು ಈಗಾಗಲೇ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಈ ಆದೇಶ ಕೊರಗರ ಬದುಕಿನ ಕುರಿತಂತೆ ಸರಕಾರ ಹೊಂದಿರುವ ಮನಸ್ಥಿತಿಯನ್ನು ಎತ್ತಿ ಹಿಡಿದಿದೆ. ಕೊರಗರ ಇಂದಿನ ದಯನೀಯ ಸ್ಥಿತಿಗತಿಯ ಹೊಣೆಗಾರಿಕೆಗಳಿಂದ ಸರಕಾರ ಈ ಮೂಲಕ ಜಾರಿಕೊಳ್ಳಲು ಮುಂದಾಗಿದೆ. ಕೊರಗರು ಗಂಭೀರ ಕಾಯಿಲೆಗಳಿಂದ ನರಳುವುದಕ್ಕೆ ಕಾರಣ, ಮದ್ಯ ಸೇವನೆ ಎಂದು ಹೇಳಿ ಅವರ ವೈದ್ಯಕೀಯ ವೆಚ್ಚಗಳನ್ನು ಹಿಂದೆಗೆದುಕೊಳ್ಳಲು ಹೊರಟಿರುವ ಸರಕಾರ, ನಾಳೆ ಅವರ ಬಡತನ, ಅಪೌಷ್ಟಿಕತೆಗಳಿಗೂ ಇದೇ ಕಾರಣವನ್ನು ಮುಂದೊಡ್ಡಿ, ಇನ್ನುಳಿದ ಯೋಜನೆಗಳನ್ನೂ ಹಿಂದೆಗೆದುಕೊಳ್ಳಬಹುದು. ಆದುದರಿಂದ, ಈ ಆದೇಶ ಸಣ್ಣದೊಂದು ಪ್ರಯೋಗ. ಇದರಲ್ಲಿ ಯಶಸ್ವಿಯಾದರೆ, ಕೊರಗರು ಮಾತ್ರವಲ್ಲ, ದಲಿತ ಸಮುದಾಯದ ಬಡತನ, ಅನಾರೋಗ್ಯ, ಅನಕ್ಷರತೆ ಎಲ್ಲದಕ್ಕೂ ಮದ್ಯ ಸೇವನೆಯ ಚಟವನ್ನೇ ಹೊಣೆ ಮಾಡಿ, ಸರಕಾರದ ಯೋಜನೆಗಳನ್ನು ಒಂದೊಂದಾಗಿ ಹಿಂದೆಗೆದುಕೊಳ್ಳುವ ಸಾಧ್ಯತೆಗಳು ಕಾಣುತ್ತಿವೆ. ಕೊರಗರ ಮೇಲಿರುವ ಈ ಆರೋಪಗಳಿಗೆ ಯಾವುದೇ ಆಧಾರವಿಲ್ಲ ಮಾತ್ರವಲ್ಲ, ಇಂತಹ ಆರೋಪಗಳ ಹಿಂದೆ ಪೂರ್ವಾಗ್ರಹ ಪೀಡಿತ ಮನಸ್ಥಿತಿ ಕೆಲಸ ಮಾಡಿದೆ. ಕೆಳ ಜಾತಿಯ ಜನರ ಕುರಿತಂತೆ ಮೇಲ್‌ಜಾತಿಯ ಜನರು ಹೊಂದಿರುವ ಕೀಳಭಿಪ್ರಾಯಗಳೇ ಇಂತಹ ಆದೇಶವೊಂದನ್ನು ಹೊರಡಿಸಲು ಮುಖ್ಯ ಕಾರಣವಾಗಿದೆ.

ಇಷ್ಟಕ್ಕೂ ಈ ರಾಜ್ಯದಲ್ಲಿ ಮದ್ಯ ಸೇವನೆಯ ಚಟವನ್ನು ಹೊಂದಿರುವವರು ಕೊರಗರು ಮಾತ್ರ ಅಲ್ಲ. ಎಲ್ಲ ಸಮುದಾಯದೊಳಗೂ ಮದ್ಯ ಸೇವಿಸುವವರಿದ್ದಾರೆ. ಸರಕಾರವೇ ಮುಂದೆ ನಿಂತು ಮದ್ಯ ಸೇವನೆಗೆ ಪ್ರೋತ್ಸಾಹವನ್ನು ನೀಡುತ್ತಾ ಬಂದಿದೆ. ‘ಸರಕಾರ ನಡೆಯುತ್ತಿರುವುದೇ ಅಬಕಾರಿ ಹಣದಿಂದ’ ಎನ್ನುವುದನ್ನು ಪರೋಕ್ಷವಾಗಿ ಒಪ್ಪಿಕೊಂಡಿದೆ. ಒಂದು ವೇಳೆ ಮದ್ಯ ಸೇವಿಸುವವರಿಗೆ ಚಿಕಿತ್ಸಾ ವೆಚ್ಚ ನಿರಾಕರಿಸುವುದಾದರೆ ಮೊತ್ತ ಮೊದಲು ಜನಪ್ರತಿನಿಧಿಗಳಿಗೆ ನೀಡುವ ಆರೋಗ್ಯ ವೆಚ್ಚವನ್ನು ನಿರಾಕರಿಸಬೇಕು. ಈ ಹಿಂದೊಮ್ಮೆ ಅತಿ ಕುಡಿತದಿಂದಲೇ ತಮ್ಮ ಆರೋಗ್ಯವನ್ನು ಕೆಡಿಸಿಕೊಂಡ ಖ್ಯಾತ ರಾಜಕಾರಣಿಯೊಬ್ಬರನ್ನು ಉಳಿಸುವುದಕ್ಕಾಗಿ ಅವರನ್ನು ವಿದೇಶಕ್ಕೂ ಕಳುಹಿಸಲಾಗಿತ್ತು. ಅವರ ಲಕ್ಷಾಂತರ ರೂಪಾಯಿ ವೆಚ್ಚವನ್ನು ಸರಕಾರದ ಖಜಾನೆಯಿಂದಲೇ ಭರಿಸಲಾಯಿತು. ಇಂದು ಬಹುಸಂಖ್ಯಾತ ಜನಪ್ರತಿನಿಧಿಗಳು ಕುಡಿತದ ಕಾರಣದಿಂದಲೇ ತಮ್ಮ ಆರೋಗ್ಯವನ್ನು ಕೆಡಿಸಿಕೊಳ್ಳುತ್ತಿದ್ದಾರೆ ಮತ್ತು ಅವರ ಅನಾರೋಗ್ಯ ಚಿಕಿತ್ಸೆಗಾಗಿ ಸರಕಾರದ ಬೊಕ್ಕಸದಿಂದಲೇ ಹಣವನ್ನು ವೆಚ್ಚ ಮಾಡಲಾಗುತ್ತದೆ. ಮದ್ಯ ಸೇವನೆಯನ್ನು ಮುಂದೊಡ್ಡಿ ಕೊರಗರ ಚಿಕಿತ್ಸಾ ವೆಚ್ಚವನ್ನು ನಿರಾಕರಿಸುವುದಾದರೆ, ಕುಡಿತದ ಹವ್ಯಾಸವನ್ನು ಹೊಂದಿರುವ ಯಾವುದೇ ಜನಪ್ರತಿನಿಧಿಗಳ ಆರೋಗ್ಯ ವೆಚ್ಚವನ್ನು ಸರಕಾರ ಭರಿಸಬಾರದು. ಇದಕ್ಕೆ ಸರಕಾರ ಸಿದ್ಧವಿದೆಯೆ? ಸಿದ್ಧವಿಲ್ಲ ಎಂದಾದರೆ ತಕ್ಷಣ ಕೊರಗರ ವೈದ್ಯಕೀಯ ವೆಚ್ಚಕ್ಕೆ ಸಂಬಂಧಿಸಿ ನೀಡಿರುವ ಆದೇಶವನ್ನು ಹಿಂದೆಗೆದುಕೊಳ್ಳಬೇಕು. ಅಷ್ಟೇ ಅಲ್ಲ, ಇಂತಹ ಆದೇಶವನ್ನು ಹೊರಡಿಸಿದ ಅಧಿಕಾರಿಯ ವಿರುದ್ಧ ಜನಾಂಗೀಯ ನಿಂದನೆಯ ಕೇಸು ದಾಖಲಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News