×
Ad

ಸೆ.21ರಂದು ಬೆಂಗಳೂರಿನಲ್ಲಿ ಕಾರ್ಮಿಕರ ರ‍್ಯಾಲಿಗೆ ದ.ಕ.ದಿಂದ 500 ಮಂದಿ

Update: 2022-09-16 15:15 IST

ಮಂಗಳೂರು, ಸೆ. 16: ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿ ಸೆ.21ರಂದು ಬೆಂಗಳೂರಿನಲ್ಲಿ ಕಾರ್ಮಿಕರ ರ‍್ಯಾಲಿ ಆಯೋಜಿಸಲಾಗಿದ್ದು, ರಾಜ್ಯದ ವಿವಿಧೆಡೆಯ ಸಾವಿರಾರು ಕಾರ್ಮಿಕರು ಭಾಗವಹಿಸಲಿದ್ದಾರೆ. ದ.ಕ. ಜಿಲ್ಲೆಯಿಂದಲೂ 500ಕ್ಕೂ ಅಧಿಕ ಮಂದಿ ತೆರಳಲಿದ್ದಾರೆ ಎಂದು ಭಾರತೀಯ ಮಜ್ದೂರ್ ಸಂಘ ಕರ್ನಾಟಕದ ಮಾಜಿ ಅಧ್ಯಕ್ಷ ಕೆ.ವಿಶ್ವನಾಥ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಅಧಿಕಾರಿಗಳು, ಆಡಳಿತ ವ್ಯವಸ್ಥೆ ತೆಗೆದುಕೊಳ್ಳುವ ಕೆಲವೊಂದು ನಿರ್ಧಾರಗಳಿಂದ ಕಾರ್ಮಿಕರಿಗೆ ಸಮಸ್ಯೆಯಾಗುತ್ತಿದೆ. ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಮಂಡಳಿ, ಕಾರ್ಮಿಕ ಸಚಿವರಿಗೆ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಮಂಡಳಿಯಲ್ಲಿ ಸುಮಾರು 7 ಸಾವಿರ ಕೋಟಿಗೂ ಹೆಚ್ಚು ಹಣವಿದ್ದು, ಅದನ್ನು ಅನಗತ್ಯವಾಗಿ ಖರ್ಚು ಮಾಡುವ ಬದಲು ಕಾರ್ಮಿಕರಿಗೆ ಉಪಯೋಗವಾಗುವ ಯೋಜನೆಗಳನ್ನು ಜಾರಿಗೊಳಿಸಬೇಕು ಎಂದು ಅವರು ಆಗ್ರಹಿಸಿದರು.

ರಾಜ್ಯ ಉಪಾಧ್ಯಕ್ಷ ಜಯರಾಮ ಸಾಲ್ಯಾನ್ ಮಾತನಾಡಿ, ಕೋವಿಡ್ ಸಮಯದಲ್ಲಿ ಮಂಡಳಿಯಿಂದ ಘೋಷಿಸಲಾದ ಹಣ, ಬ್ಯಾಂಕ್ ವಿಲೀನ ಕಾರಣದಿಂದ ಉಂಟಾದ ಆಧಾರ್ ಲಿಂಕ್ ಸಮಸ್ಯೆಯಿಂದ ಬಹುತೇಕ ಕಟ್ಟಡ ಕಾರ್ಮಿಕರಿಗೆ ತಲುಪಿಲ್ಲ. ಮಕ್ಕಳು ಸ್ಕಾಲರ್ ಷಿಪ್ ಪಡೆಯುವಲ್ಲಿಯೂ ಇದೇ ತೊಂದರೆ ಕಾಡುತ್ತಿದೆ. ಜಿಲ್ಲಾಧಿಕಾರಿ, ಲೀಡ್ ಬ್ಯಾಂಕ್ ಅಧಿಕಾರಿಗಳನ್ನು ಭೇಟಿಯಾದರೂ ಪರಿಹಾರವಾಗಿಲ್ಲ. ಬ್ಯಾಂಕ್ ತಾಂತ್ರಿಕ ದೋಷದಿಂದ ಉಂಟಾದ ನಷ್ಟವನ್ನು ಬ್ಯಾಂಕ್‌ಗಳೇ ಕಾರ್ಮಿಕರಿಗೆ ನೀಡಬೇಕು. ಕಾರ್ಮಿಕ ಮಂಡಳಿಯಿಂದ ಅನಗತ್ಯ ಹೆಲ್ತ್ ಕ್ಯಾಂಪ್ ಆಯೋಜಿಸುವ ಬದಲು ನೋಂದಾಯಿತ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸ ಅಥವಾ ಸಂಪೂರ್ಣ ಚಿಕಿತ್ಸಾ ಮೊತ್ತದ ಮರು ಪಾವತಿ ವ್ಯವಸ್ಥೆ ಜಾರಿಯಾಗಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಗೋಪಾಲಕೃಷ್ಣ, ಪ್ರಮುಖರಾದ ಭಗವಾನ್ ದಾಸ್, ಕುಮಾರನಾಥ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News