×
Ad

ಲೇಡಿಹಿಲ್ ನಗರ ಆರೋಗ್ಯ ಕೇಂದ್ರದ ಅವ್ಯವಸ್ಥೆ ಸರಿಪಡಿಸದಿದ್ದರೆ ಮೇಯರ್ ಕಚೇರಿಗೆ ಮುತ್ತಿಗೆ: ಬಜಾಲ್

Update: 2022-09-16 15:20 IST

ಮಂಗಳೂರು, ಸೆ.16: ಲೇಡಿಹಿಲ್ ನಗರ ಆರೋಗ್ಯ ಕೇಂದ್ರದಲ್ಲಿ ಸಣ್ಣ ಪುಟ್ಟ ರೋಗಗಳಿಗೂ ಚಿಕಿತ್ಸೆ ಸಿಗುತ್ತಿಲ್ಲ. ಅಗತ್ಯ ಜ್ವರಗಳಿಗೆ ನೀಡುವಂತಹ ಮಾತ್ರೆಗಳು ಕೂಡಾ ಕಳೆದ ಎರಡು ತಿಂಗಳುಗಳಿಂದ ಸರಬರಾಜು ಮಾಡದ ಮಂಗಳೂರು ಮಹಾನಗರ ಪಾಲಿಕೆ ಬಿಜೆಪಿ ಆಡಳಿತ ನಗರದ ಜನರ ಆರೋಗ್ಯ ಕಾಳಜಿಯನ್ನು ಸಂಪೂರ್ಣವಾಗಿ ಕಡೆಗಣಿಸಿವೆ. ಇಂತಹ ಸಮಸ್ಯೆಗಳನ್ನು ಬಗೆಹರಿಸದಿದ್ದಲ್ಲಿ ಮುಂದಿನ ದಿನ ಮೇಯರ್ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಸಿಪಿಐಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುನೀಲ್ ಕುಮಾರ್ ಬಜಾಲ್ ಎಚ್ಚರಿಸಿದ್ದಾರೆ.

ಲೇಡಿಹಿಲ್ ನಗರ ಆರೋಗ್ಯ ಕೇಂದ್ರದ ಮೂಲಭೂತ ಸೌಕರ್ಯಗಳ ಸಹಿತ ಮೇಲ್ದರ್ಜೆಗೇರಿಸಲು ಒತ್ತಾಯಿಸಿ ಹಾಗೂ ಖಾಲಿ ಇರುವ ನಗರ ಆರೋಗ್ಯಾಧಿಕಾರಿ ಹುದ್ದೆಯನ್ನು ಭರ್ತಿಗೊಳಿಸಲು ಆಗ್ರಹಿಸಿ ಲೇಡಿಹಿಲ್ ನಗರ ಆರೋಗ್ಯ ಕೇಂದ್ರದ ಮುಂಭಾಗ ಇಂದು ನಡೆದ ಧರಣಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಮಂಗಳೂರು ಮಹಾನಗರ ಪಾಲಿಕೆಯ ನಗರ ಆರೋಗ್ಯ ಕೇಂದ್ರವನ್ನು ಸಂಪೂರ್ಣವಾಗಿ ಖಾಸಗಿ ಮೆಡಿಕಲ್ ಕಾಲೇಜುಗಳಿಗೆ ನಡೆಸಲು ಗುತ್ತಿಗೆ ನೀಡುವ ಮೂಲಕ ಖಾಸಗಿ ಲಾಭಿಗೆ ಮಣಿದಿದೆ. ನಗರದ ಜನರ ಆರೋಗ್ಯ ಕಾಳಜಿ ವಹಿಸಬೇಕಾಗಿದ್ದ ನಗರ ಆರೋಗ್ಯ ಕೇಂದ್ರ ಇಂದು ನರಕ ಆರೋಗ್ಯ ಕೇಂದ್ರವಾಗಿ ಪರಿವರ್ತನೆಗೊಂಡಿದೆ ಎಂದು ಅವರು ಟೀಕಿಸಿದರು.

ಧರಣಿಯನ್ನು ಉದ್ದೇಶಿಸಿ ಮಾತನಾಡಿದ ಸಂತೋಷ್ ಕುಮಾರ್ ಬಜಾಲ್, ಲೇಡಿಹಿಲ್ ನಗರ ಆರೋಗ್ಯ ಕೇಂದ್ರಕ್ಕೆ ಅದರದೇ ಆದ ಹಿನ್ನಲೆ ಇದೆ. ಹಿಂದೆ ಇದು ಸರಕಾರಿ ಹೆರಿಗೆ ಆಸ್ಪತ್ರೆಯಾಗಿ ಹೆಸರುವಾಸಿಯಾಗಿತ್ತು. ಆದರೆ ಇಂದು ಯಾವುದೇ ಮೂಲಭೂತ ಸೌಕರ್ಯಗಳಿಲ್ಲದೆ ಸಣ್ಣಪುಟ್ಟ ರೋಗಗಳಿಗೂ ಚಿಕಿತ್ಸೆಗಳು ಸರಿಯಾಗಿ ಸಿಗದಂತಾಗಿದೆ. ಮಂಗಳೂರು ನಗರ ಪಾಲಿಕೆಯ ಬಿಜೆಪಿ ಆಡಳಿತ ಸಂಪೂರ್ಣವಾಗಿ ಕಡೆಗಣಿಸಿವೆ ಎಂದು ಆರೋಪಿಸಿದರು.

ನಗರ ಪಾಲಿಕೆ ಅಡಿಯಲ್ಲಿರುವ 5 ಆರೋಗ್ಯ ಕೇಂದ್ರವನ್ನು ನಗರದ ವಿವಿಧ ಖಾಸಗಿ ಮೆಡಿಕಲ್ ಕಾಲೇಜುಗಳಿಗೆ ನಡೆಸಲು ಗುತ್ತಿಗೆ ನೀಡುವ ಮೂಲಕ ಖಾಸಗೀ ಮೆಡಿಕಲ್ ಲಾಬಿಗೆ ಬಲಿಯಾಗಿದೆ. ಇನ್ನು ರಾಷ್ಟೀಯ ನಗರ ಆರೋಗ್ಯ ಅಭಿಯಾನದಡಿಯಲ್ಲಿ ಆರೋಗ್ಯ ಇಲಾಖೆ ನಡೆಸುವ 10 ನಗರ ಆರೋಗ್ಯ ಕೇಂದ್ರದಲ್ಲೂ ವೈದ್ಯರು ಸಹಿತ ಹಲವಾರು ಗಂಭೀರ ಸಮಸ್ಯೆಗಳಿವೆ ಎಂದರು.

ಡಿವೈಎಫ್‌ಐ ಜಿಲ್ಲಾಧ್ಯಕ್ಷರಾದ ಬಿ.ಕೆ.ಇಮ್ತಿಯಾಝ್ ಮಾತನಾಡಿ ಲೇಡಿಹಿಲ್ ವೃತ್ತ ನಾರಾಯಣ ಗುರು ವೃತ್ತ ಆಗಬೇಕೆಂಬ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಮಂತ್ರಿ ಸುನೀಲ್ ಕುಮಾರ್ ಸಹಿತ ಎಲ್ಲಾ ಶಾಸಕರು ಈ ಪ್ರದೇಶಕ್ಕೆ ಭೇಟಿ ನೀಡುವಾಗ ಅವ್ಯವಸ್ಥೆಯಿಂದ ಕೂಡಿರುವ ಈ ಆರೋಗ್ಯ ಕೇಂದ್ರ ಕಾಣಲಿಲ್ಲವೇ ಎಂದು ಪ್ರಶ್ನಿಸಿದರು. ಧರಣಿಯನ್ನು ಬೆಂಬಲಿಸಿ ಸಾಮರಸ್ಯ ಮಂಗಳೂರು ಇದರ ಸಂಚಾಲಕಿ ಮಂಜುಳಾ ನಾಯಕ್ ಮಾತನಾಡಿದರು.

ಧರಣಿ ಸ್ಥಳಕ್ಕೆ ಆಗಮಿಸಿದ ನಗರ ಪಾಲಿಕೆ ಸೀನಿಯರ್ ಹೆಲ್ತ್ ಇನ್ಸ್‌ಪೆಕ್ಟರ್ ಅರುಣ್ ಬೇಡಿಕೆಗಳ ಮನವಿ ಸ್ವೀಕರಿಸಿದರು.

ಧರಣಿಯಲ್ಲಿ ಸಿಪಿಐಎಂ ನಗರ ಸಮಿತಿಯ ಮುಖಂಡರಾದ ಲೋಕೇಶ್ ಎಂ, ಭಾರತೀ ಬೋಳಾರ, ಸಾದಿಕ್ ಕಣ್ಣೂರು, ನೌಶದ್ ಬೆಂಗರೆ, ದಲಿತ ಹಕ್ಕುಗಳ ಸಮಿತಿ ಮುಖಂಡರಾದ ತಿಮ್ಮಯ್ಯ ಕೊಂಚಾಡಿ, ಕೃಷ್ಣ ತಣ್ಣೀರುಬಾವಿ, ರಾಧಾಕೃಷ್ಣ, ಡಿವೈಎಫ್‌ಐ ಮುಖಂಡರಾದ ಜಗದೀಶ್ ಬಜಾಲ್, ಮಾಧುರಿ ಬೋಳಾರ, ವಿದ್ಯಾರ್ಥಿ ಮುಖಂಡರಾದ ರೇವಂತ್ ಕದ್ರಿ, ಶಾಹಿದ್, ಸಮಝ್ ಮುಂತಾದವರು ಉಪಸ್ಥಿತರಿದ್ದರು.

ಸಿಪಿಎಂ ನಗರ ಸಮಿತಿಯ ಮುಖಂಡರಾದ ಯೋಗೀಶ್ ಜಪ್ಪಿನಮೊಗರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News