ಲಡಾಖ್ ಬಿಕ್ಕಟ್ಟಿನ ತಾಣದಲ್ಲಿ ಚೀನಾ ಬೃಹತ್ ನೆಲೆ,ಹೋರಾಟ ಸ್ಥಾನಗಳನ್ನು ಹೊಂದಿತ್ತು: ನೂತನ ಉಪಗ್ರಹ ಚಿತ್ರಗಳಿಂದ ಬಹಿರಂಗ

Update: 2022-09-17 15:38 GMT
photo : NDTV

ಹೊಸದಿಲ್ಲಿ,ಸೆ.17: ಚೀನಿ ಸೈನಿಕರು ಪೂರ್ವ ಲಡಾಖ್‌ನ ಗೋಗ್ರಾ-ಹಾಟ್ ಸ್ಪ್ರಿಂಗ್ಸ್‌ನ ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ)ಯಲ್ಲಿ ತಾವು ಆಕ್ರಮಿಸಿಕೊಂಡಿದ್ದ ಪ್ರದೇಶದಿಂದ ಮೂರು ಕಿ.ಮೀ.ನಷ್ಟು ಹಿಂದಕ್ಕೆ ಸರಿದಿರುವುದನ್ನು ನೂತನ ಉಪಗ್ರಹ ಚಿತ್ರಗಳು ತೋರಿಸಿವೆ. ಈ ಚಿತ್ರಗಳು ತನಗೆ ಲಭ್ಯವಾಗಿವೆ ಆಂಗ್ಲ ಸುದ್ದಿವಾಹಿನಿ ಎನ್‌ಡಿಟಿವಿ ತಿಳಿಸಿದೆ. ಇದು ಭಾರತ ಮತ್ತು ಚೀನಾಗಳ ಪರಸ್ಪರ ಸೇನಾ ವಾಪಸಾತಿ ಪ್ರಕ್ರಿಯೆಯ ಭಾಗವಾಗಿದ್ದು,2020ರಲ್ಲಿ ಗಸ್ತು ತಿರುಗಲು ಭಾರತಿಯ ಸೇನೆಯು ಬಳಸುತ್ತಿದ್ದ ಪ್ರದೇಶದ ಸಮೀಪದ ಎಲ್‌ಎಸಿಯಲ್ಲಿದ್ದ ತನ್ನ ಪ್ರಮುಖ ನೆಲೆಯನ್ನು ಚೀನಾ ತೆರವುಗೊಳಿಸಿದೆ.

ಉಪಗ್ರಹ ಚಿತ್ರಣ ತಜ್ಞ ಮ್ಯಾಕ್ಸರ್‌ನಿಂದ ಲಭ್ಯವಾಗಿರುವ ಬಿಕ್ಕಟ್ಟಿಗೆ ಮೊದಲಿನ ಮತ್ತು ನಂತರ ಚಿತ್ರಗಳು ಕೇವಲ ಚೀನಿ ಸ್ಥಾನಗಳ ಮೇಲೆ ಗಮನವನ್ನು ಕೇಂದ್ರೀಕರಿಸಿವೆ,ಒಪ್ಪಂದದಂತೆ ಉಭಯ ದೇಶಗಳ ಸೇನೆಗಳ ನಡುವೆ ಸೃಷ್ಟಿಸಲಾದ ಮೀಸಲು ವಲಯ ಅಥವಾ ನೋ-ಮ್ಯಾನ್ಸ್ ಲ್ಯಾಂಡ್(ಉಭಯ ದೇಶಗಳಿಗೆ ಸೇರದ ಸ್ಥಳ)ನ ವ್ಯಾಪ್ತಿಯನ್ನು ಅವು ತೋರಿಸಿಲ್ಲ. ವಿಶ್ವಾಸ ನಿರ್ಮಾಣ ಕ್ರಮವಾಗಿ ಈ ವಲಯದಲ್ಲಿ ಗಸ್ತು ನಡೆಸಲು ಅನುಮತಿ ನೀಡಲಾಗಿಲ್ಲ.

2022,ಆ.20ರ ವಾಪಸಾತಿಗೆ ಮೊದಲಿನ ಚಿತ್ರವು 2020ರಲ್ಲಿ ಲಡಾಖ್‌ನಲ್ಲಿ ಚೀನಿ ಅತಿಕ್ರಮಣಕ್ಕೆ ಮುನ್ನ ಭಾರತೀಯ ಸೇನೆಯು ಗಸ್ತು ತಿರುಗುತ್ತಿದ್ದ ಪ್ರದೇಶದ ಸಮೀಪ ಚೀನಿ ಸೇನೆಯು ಬೃಹತ್ ಕಟ್ಟಡವನ್ನು ನಿರ್ಮಿಸಿದ್ದನ್ನು ತೋರಿಸಿದೆ. ಕಟ್ಟಡದ ಸುತ್ತ ಕಂದಕಗಳಿದ್ದು,ಇವುಗಳನ್ನು ಪದಾತಿ ಸೈನಿಕರಿಗಾಗಿ ಮತ್ತು ಮಾರ್ಟರ್ ದಾಳಿಗಳನ್ನು ನಡೆಸಲು ನಿರ್ಮಿಸಿದ್ದಂತೆ ಕಂಡು ಬರುತ್ತಿದೆ.ಸೆ.15ರ ಚಿತ್ರವೊಂದು ಚೀನಿಯರು ಈ ಕಟ್ಟಡವನ್ನು ನೆಲಸಮಗೊಳಿಸಿದ್ದನ್ನು ಮತ್ತು ಉತ್ತರದಲ್ಲಿಯ ತಾತ್ಕಾಲಿಕ ನೆಲೆಯಂತೆ ಕಂಡುಬಂದಿರುವ ಸ್ಥಳಕ್ಕೆ ಅವಶೇಷಗಳನ್ನು ಸಾಗಿಸಿರುವುದನ್ನು ತೋರಿಸಿದೆ.

ಇನ್ನೊಂದು ಚಿತ್ರವು ಚೀನಿಯರು ತೆರವುಗೊಳಿಸಿರುವ ನಿವೇಶನದಲ್ಲಿ ಉಭಯ ದೇಶಗಳ ನಡುವಿನ ಸೇನಾ ವಾಪಸಾತಿ ಒಪ್ಪಂದಕ್ಕೆ ಅನುಗುಣವಾಗಿ ಭೂಸ್ವರೂಪವನ್ನು ಮರುಸ್ಥಾಪಿಸಿದ್ದನ್ನು ತೋರಿಸಿದೆ.

ಭಾರತೀಯ ಸೇನೆಯು ಭಾರತೀಯ ಭೂಪ್ರದೇಶದಲ್ಲಿಯ ತನ್ನ ಸ್ವಂತ ನೆಲೆಗಳನ್ನು ತೆರವುಗೊಳಿಸುವುದೂ ಒಪ್ಪಂದದ ಭಾಗವಾಗಿದೆ ಎಂದು ಲಡಾಖ್‌ನ ಸ್ಥಳೀಯ ಕೌನ್ಸಿಲರ್‌ಗಳು ಹೇಳಿದ್ದಾರೆ. ಈ ಬಗ್ಗೆ ವಿವರಗಳನ್ನು ದಿಲ್ಲಿಯಲ್ಲಿನ ಸೇನೆ ಅಧಿಕಾರಿಗಳು ದೃಢಪಡಿಸಿಲ್ಲ.

‘ನಮ್ಮ ಪಡೆಗಳು ಗಸ್ತು ಕೇಂದ್ರ 15 (ಪಿಪಿ-15)ರಿಂದ ಮಾತ್ರವಲ್ಲ,ಕಳೆದ 50 ವರ್ಷಗಳಿಂಲೂ ನಾವು ಹೊಂದಿದ್ದ ಪಿಪಿ-16ರಿಂದಲೂ ಹಿಂದಕ್ಕೆ ಸರಿದಿವೆ’ ಎಂದು ಹೇಳಿದ ಲಡಾಖ್‌ನ ಚುಷುಲ್ ಪ್ರದೇಶದ ಕೌನ್ಸಿಲರ್ ಕೊಂಚಾಕ್ ಸ್ಟಾಂಝಿನ್ ಅವರು,‘ಇದು ಬೃಹತ್ ಹಿನ್ನಡೆಯಾಗಿದೆ. ಪ್ರದೇಶದಲ್ಲಿಯ ಅಲೆಮಾರಿ ಪಶುಪಾಲಕರು ಬಳಸುತ್ತಿದ್ದ ನಮ್ಮ ಹುಲ್ಲುಗಾವಲುಗಳು ಈಗ ಮೀಸಲು ವಲಯವಾಗಿವೆ. ಅದು ಚಳಿಗಾಲದಲ್ಲಿ ಮುಖ್ಯ ಹುಲ್ಲುಗಾವಲು ಆಗಿತ್ತು ’ ಎಂದು ತಿಳಿಸಿದರು.

ವಾಪಸಾತಿ ಒಪ್ಪಂದಕ್ಕೆ ಅನುಗುಣವಾಗಿ ಉಭಯ ದೇಶಗಳು ಬಿಕ್ಕಟ್ಟು ಸೃಷ್ಟಿಯಾಗಿದ್ದ ಪ್ರದೇಶದಲ್ಲಿಯ ತಮ್ಮ ನೆಲೆಗಳನ್ನು ತೆರವುಗೊಳಿಸಿರುವುದನ್ನು ಉಪಗ್ರಹ ಚಿತ್ರಗಳು ದೃಢಪಡಿಸಿವೆ.

ಚೀನಿ ಸೈನಿಕರು ಎಲ್‌ಎಸಿಯಾಚೆಯ ತಮ್ಮ ನೆಲೆಗಳಿಗೆ ಮರಳುವಂತೆ ಮಾಡಲು ಪರಸ್ಪರ ವಾಪಸಾತಿ ಮತ್ತು ಮೀಸಲು ವಲಯಗಳ ಸೃಷ್ಟಿ ಏಕೈಕ ಮಾರ್ಗವಾಗಿತ್ತು ಎನ್ನುವುದು ಸಾಬೀತಾಗಿದೆ. ಇದರಿಂದ ಚೀನಿಯರು ಅತಿಕ್ರಮಣ ಮಾಡಿದ್ದ ನಾಲ್ಕು ಪ್ರದೇಶಗಳಲ್ಲಿಯ ಬಿಕ್ಕಟ್ಟು ಬಗೆಹರಿದಿದೆಯಾದರೂ,ಈ ಮೀಸಲು ವಲಯಗಳನ್ನು ಭಾರತೀಯ ಭೂಪ್ರದೇಶದೊಳಗೇ ಸೃಷ್ಟಿಸಲಾಗಿದೆ ಎನ್ನುವುದು ಸ್ಪಷ್ಟವಾಗಿದೆ. ಅಂದರೆ ಭಾರತೀಯ ಸೇನೆ ಅಥವಾ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಇನ್ನು ಮುಂದೆ ಈ ಪ್ರದೇಶಗಳಲ್ಲಿ ಗಸ್ತು ನಡೆಸುವಂತಿಲ್ಲ.

ಗೋಗ್ರಾದ ಉತ್ತರಕ್ಕಿರುವ ಡೆಸ್ಪಾಂಗ್ ಬಯಲು ಪ್ರದೇಶದಲ್ಲಿ ಭಾರತೀಯ ಗಸ್ತು ನೆಲೆಗಳಿಗೆ ತಡೆಯೊಡ್ಡುವುದನ್ನು ಚೀನಿ ಸೇನೆಯು ಮುಂದುವರಿಸಿದೆ ಎನ್ನಲಾಗಿದೆ. ಸೇನಾ ವಾಪಸಾತಿ ಮಾತುಕತೆಗಳು ಈವರೆಗೆ ಇಲ್ಲಿ ಯಾವುದೇ ಪ್ರಗತಿಯನ್ನು ಸಾಧಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News