ಎಸ್‌ಸಿಒ ಅಧ್ಯಕ್ಷತೆಯನ್ನು ವಹಿಸಿಕೊಂಡ ಭಾರತ

Update: 2022-09-17 16:55 GMT

ಸಮರಕಂದ್ (ಉಝ್ಬೆಕಿಸ್ತಾನ್),ಸೆ.17: ಎಂಟು ಸದಸ್ಯ ದೇಶಗಳನ್ನು ಹೊಂದಿರುವ ಶಾಂಘೈ ಸಹಕಾರ ಸಂಘಟನೆ (ಎಸ್‌ಸಿಒ)ಯ ಆವರ್ತನ ಅಧ್ಯಕ್ಷತೆಯನ್ನು ಉಝ್ಬೆಕಿಸ್ತಾನವು ಶುಕ್ರವಾರ ಇಲ್ಲಿ ಭಾರತಕ್ಕೆ ಹಸ್ತಾಂತರಿಸಿದೆ. ಭಾರತದ ಅಧಿಕಾರಾವಧಿ ಒಂದು ವರ್ಷವಾಗಿದ್ದು,ಪ್ರತಿವರ್ಷ ಸರದಿಯಂತೆ ಅಧ್ಯಕ್ಷತೆ ಸದಸ್ಯ ದೇಶಗಳ ನಡುವೆ ಬದಲಾಗುತ್ತಿರುತ್ತದೆ.

ಇಲ್ಲಿ ನಡೆದ 22ನೇ ಎಸ್‌ಸಿಒ ಶೃಂಗಸಭೆಯ ಅಧ್ಯಕ್ಷತೆಯನ್ನು ಉಝ್ಬೆಕ್ ಅಧ್ಯಕ್ಷ ಶವ್ಕಾತ್ ಮಿರ್ಝಿಯೊಯೆವ್ ವಹಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಶೃಂಗಸಭೆಯಲ್ಲಿ ಭಾಗವಹಿಸಿದ್ದರು.

‘ಎಸ್‌ಸಿಒ ಅಧ್ಯಕ್ಷನಾಗಿ ಭಾರತವು ಮುಂದಿನ ಶೃಂಗಸಭೆಯನ್ನು 2023ರಲ್ಲಿ ಆಯೋಜಿಸಲಿದೆ. ಈ ಜವಾಬ್ದಾರಿಯುತ ಅಭಿಯಾನದ ಅನುಷ್ಠಾನಕ್ಕಾಗಿ ನಮ್ಮ ವ್ಯೆಹಾತ್ಮಕ ಪಾಲುದಾರ ದೇಶವಾಗಿರುವ ಭಾರತಕ್ಕೆ ನೆರವಾಗಲು ನಮ್ಮ ಅತ್ಯುತ್ತಮ ಪ್ರಯತ್ನವನ್ನು ಮಾಡುತ್ತೇವೆ ’ಎಂದು ಉಝ್ಬೆಕ್ ವಿದೇಶಾಂಗ ಸಚಿವ ವ್ಲಾದಿಮಿರ್ ನೊರೊವ್ ಟ್ವೀಟಿಸಿದ್ದಾರೆ.

ರಶ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್,ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ಇರಾನ್ ಅಧ್ಯಕ್ಷ ಇಬ್ರಾಹೀಂ ರಯೀಸಿ,ಪಾಕಿಸ್ತಾನದ ಪ್ರಧಾನಿ ಶೆಹಬಾಝ್ ಶರೀಫ್ ಮತ್ತಿತರ ಮಧ್ಯ ಏಶ್ಯ ರಾಷ್ಟ್ರಗಳ ನಾಯಕರೂ ಶೃಂಗಸಭೆಯಲ್ಲಿ ಭಾಗವಹಿಸಿದ್ದರು.

ಬೀಜಿಂಗ್‌ನಲ್ಲಿ ಮುಖ್ಯಕಚೇರಿಯನ್ನು ಹೊಂದಿರುವ ಎಸ್‌ಸಿಒದ ಆವರ್ತನ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದಕ್ಕಾಗಿ ಕ್ಸಿ ಜಿನ್‌ಪಿಂಗ್ ಅವರು ಭಾರತವನ್ನು ಅಭಿನಂದಿಸಿದ್ದಾರೆ.

ಭಾರತ,ಚೀನಾ,ಕಝಕಸ್ತಾನ್,ಕಿರ್ಗಿಸ್ತಾನ್,ರಶ್ಯಾ,ತಜಿಕಿಸ್ತಾನ್,ಉಝ್ಬೆಕಿಸ್ತಾನ್ ಮತ್ತು ಪಾಕಿಸ್ತಾನ್ ಎಸ್‌ಸಿಒ ಪೂರ್ಣ ಸದಸ್ಯ ದೇಶಗಳಾಗಿವೆ. ಸಮರಕಂದ್ ಶೃಂಗಸಭೆಯಲ್ಲಿ ಇರಾನ್ ಎಸ್‌ಸಿಒದ ಖಾಯಂ ಸದಸ್ಯನಾಗಿ ಪ್ರವೇಶವನ್ನು ಪಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News