ಜಪಾನ್‌ಗೆ ಅಪ್ಪಳಿಸಿದ ಚಂಡಮಾರುತ: ಜನಜೀವನ ಅಸ್ತವ್ಯಸ್ತ, ಸಾವಿರಾರು ಜನರ ಸ್ಥಳಾಂತರ

Update: 2022-09-18 17:51 GMT
PHOTO: PTI

ಟೋಕಿಯೊ, ಸೆ.18: ಗಂಟೆಗೆ 230 ಕಿ.ಮೀ ವೇಗದ ಗಾಳಿಯೊಂದಿಗೆ ‘ನನ್ಮದೋಲ್’ ಚಂಡಮಾರುತ ರವಿವಾರ ಜಪಾನ್‌ನ ನೈಋತ್ಯ ಪ್ರಾಂತಕ್ಕೆ ಅಪ್ಪಳಿಸಿದ್ದು ರಸ್ತೆ, ರೈಲು ಮತ್ತು ವಿಮಾನ ಸಂಚಾರ ಅಸ್ತವ್ಯಸ್ತಗೊಂಡಿದೆ. ಸಾವಿರಾರು ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನೈಋತ್ಯ ಪ್ರಾಂಯದ ಇಝುಮಿ ನಗರಕ್ಕೆ ಸ್ಥಳೀಯ ಕಾಲಮಾನ ರವಿವಾರ ಸಂಜೆ 7 ಗಂಟೆಗೆ ಚಂಡಮಾರುತ ಅಪ್ಪಳಿಸಿದೆ. ಸೋಮವಾರ ಇನ್ನಷ್ಟು ಬಿರುಗಾಳಿ ಸಹಿತ ಮಳೆಯಾಗಲಿದ್ದು ಮಂಗಳವಾರದ ವೇಳೆ ಚಂಡಮಾರುವು ಟೋಕಿಯೊ ನಗರ ಸಮೀಪಿಸಲಿದೆ ಎಂದು ಜಪಾನ್‌ನ ಹವಾಮಾನ ಶಾಸ್ತ್ರ ಇಲಾಖೆ ಹೇಳಿದೆ. ಕ್ರಮೇಣ ವೇಗ ಹೆಚ್ಚಿಸಿಕೊಳ್ಳುತ್ತಿರುವ ಚಂಡಮಾರುತದಿಂದಾಗಿ ನೈಋತ್ಯದ ಕ್ಯುಷು ಪ್ರಾಂತದಲ್ಲಿ 24 ಗಂಟೆಯೊಳಗೆ 500 ಮಿಮೀಯಷ್ಟು ದಾಖಲೆ ಪ್ರಮಾಣದ ಮಳೆ ಸುರಿದಿದೆ. ಸುಂಟರಗಾಳಿಯ ಜತೆ ಭಾರೀ ಮಳೆ ಸುರಿಯುವ ವಿಶೇಷ ಎಚ್ಚರಿಕೆಯನ್ನು ಸ್ಥಳೀಯ ಆಡಳಿತ ಜಾರಿಗೊಳಿಸಿದ್ದು ಕನಿಷ್ಟ 20,000 ಜನರನ್ನು ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ. ಸುಂಟರಗಾಳಿಯಿಂದ ರಕ್ಷಣೆ ಪಡೆಯಲು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಗೊಳ್ಳುವಂತೆ 7 ಮಿಲಿಯನ್ ಜನತೆಗೆ ಸೂಚಿಸಲಾಗಿದೆ.

ಅಪಾಯದ ಸ್ಥಳದಿಂದ ದೂರ ಇರುವಂತೆ ಮತ್ತು ಅಪಾಯದ ಬಗ್ಗೆ ಮುನ್ಸೂಚನೆ ದೊರೆತೊಡನೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳುವಂತೆ ಪ್ರಧಾನಿ ಫುಮಿಯೊ ಕಿಷಿಡಾ ಜನತೆಗೆ ಮನವಿ ಮಾಡಿದ್ದಾರೆ. ರೈಲು, ವಿಮಾನ, ವಾಹನ ಸಂಚಾರ ಮತ್ತು ದೋಣಿಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಮಿಯಾಝಕಿ ಮತ್ತು ಕಗೋಷಿಮಾ ಪ್ರಾಂತದಲ್ಲಿ ಸುಮಾರು 10,000 ಜನರನ್ನು ಸ್ಥಳಾಂತರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News