ಬ್ರಿಟನ್:‌ ಮುಸ್ಲಿಮ್ ಬಾಹುಳ್ಯದ ಪ್ರದೇಶದಲ್ಲಿ ಹಿಂದುತ್ವವಾದಿಗಳ ಧಿಡೀರ್‌ ಮೆರವಣಿಗೆ- ಪರಿಸ್ಥಿತಿ ಉದ್ವಿಗ್ನ

Update: 2022-09-18 18:27 GMT
photo- twitter

ಲಂಡನ್: ಬ್ರಿಟನ್‌ನ ಪೂರ್ವ ಲೀಸೆಸ್ಟರ್‌ನಲ್ಲಿ ನೂರಾರು ಮಂದಿ ಹಿಂದುತ್ವವಾದಿಗಳು ʼಜೈ ಶ್ರೀ ರಾಮ್ʼ ಎಂದು ಘೋಷಣೆ ಕೂಗುತ್ತಾ ಮುಸ್ಲಿಮ್ ಬಾಹುಳ್ಯವಿರುವ ಪ್ರದೇಶದಲ್ಲಿ ಮೆರವಣಿಗೆ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗುತ್ತಿದೆ. ಇದರೊಂದಿಗೆ ಕಳೆದೊಂದು ವಾರದಿಂದ ಶಾಂತಿ ನೆಲೆಸಿದ್ದ ಲಿಸೇಸ್ಟರ್‌ ಪಟ್ಟಣದಲ್ಲಿ ಮತ್ತೆ ಉದ್ವಿಗ್ನತೆ ಹೆಚಾಗಿದೆ ಎಂದು ವರದಿಯಾಗಿದೆ. 

ಮುಸ್ಲಿಮ್ ಬಾಹುಳ್ಯದ ಬೀದಿಯಲ್ಲಿ ಹಿಂದುತ್ವವಾದಿಗಳಿಂದ ದಿಢೀರ್ ಮೆರವಣಿಗೆ ನಡೆಸಿ ಪ್ರಚೋದನಕಾರಿ ಘೋಷಣೆ ಬಳಿಕ ಅಲ್ಲಲ್ಲಿ ಹಿಂಸಾಚಾರ ನಡೆದಿದ್ದು ಪರಿಸ್ಥಿತಿ ಕೈ ಮೀರಿದ ಹಂತಕ್ಕೆ ತಲುಪಿತ್ತು.  ಕಾನೂನು ಬಾಹಿರವಾಗಿ ಹಿಂದುತ್ವವಾದಿಗಳು ನಡೆಸಿದ ಈ ಮೆರವಣಿಗೆಯು ಪ್ರದೇಶದಲ್ಲಿ ಘರ್ಷಣೆಗೆ ಕಾರಣವಾಯಿತು ಎಂದು ಬಿಬಿಸಿ ವರದಿ ಮಾಡಿದೆ, ಪೊಲೀಸರು ಮತ್ತು ಸ್ಥಳೀಯ ಪ್ರದೇಶದ ಸಮುದಾಯದ ಮುಖಂಡರು ಶಾಂತಿ ಪರಿಪಾಲನೆಗಾಗಿ ಕರೆ ನೀಡಿದ್ದಾರೆ.

2022 ರ ಏಷ್ಯಾ ಕಪ್ ಪಂದ್ಯಾವಳಿಯ ಭಾಗವಾಗಿ ಆಗಸ್ಟ್ 28 ರಂದು ನಡೆದ ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ಪಂದ್ಯದ ನಂತರ ಹಿಂಸಾಚಾರವು ಪ್ರಾರಂಭವಾಯಿತು ಎಂದು ಹೇಳಲಾಗಿದೆ.
 
18 ಸೆಪ್ಟೆಂಬರ್ ವರೆಗೆ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಒಟ್ಟು 27 ಜನರನ್ನು ಬಂಧಿಸಲಾಗಿದೆ ಎಂದು ಸ್ಥಳೀಯ ಸುದ್ದಿ ಔಟ್ಲೆಟ್ ಲೀಸೆಸ್ಟರ್ ಲೈವ್ ವರದಿ ಮಾಡಿದೆ, ಇದರ ಬಳಿಕ ಆ ಪ್ರದೇಶದಲ್ಲಿ ಪೊಲೀಸರು ಮತ್ತು ಸಮುದಾಯದ ಮುಖಂಡರ ನಡುವೆ ತುರ್ತು ಸಭೆ ನಡೆಸಲಾಗಿದೆ.

ಉಭಯ ಸಮುದಾಯದ ಮುಖಂಡರು ಶಾಂತವಾಗಿರಲು ಹಾಗೂ ನೆರೆದಿದ್ದ ಜನರನ್ನು ಮನೆಗೆ ಹೋಗಲು ಒಟ್ಟಾಗಿ ಕರೆ ನೀಡಿದ್ದಾರೆ.

ಪೂರ್ವ ಲೀಸೆಸ್ಟರ್‌ನ ಕೆಲವು ಭಾಗಗಳಲ್ಲಿ ನಿನ್ನೆ ಸಂಜೆ (ಶನಿವಾರ 17 ಸೆಪ್ಟೆಂಬರ್) ಇಂದು ಬೆಳಗ್ಗೆಯಿಂದ (ರವಿವಾರ) ಯುವಕರ ಗುಂಪುಗಳು ಯೋಜಿತವಲ್ಲದ ಪ್ರತಿಭಟನೆಯನ್ನು ಪ್ರಾರಂಭಿಸಿದ ನಂತರ ದೊಡ್ಡ ಜನಸಮೂಹವು ರೂಪುಗೊಂಡ ಬಳಿಕ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ, ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಹೆಚ್ಚುವರಿ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಲಗುತ್ತಿದೆ ಎಂದು ಲೀಸೆಸ್ಟರ್‌ನ ಪೊಲೀಸರು ತಿಳಿಸಿದ್ದಾರೆ.

ಇಸ್ಲಾಮೋಫೋಬಿಯಾದ ಪರಿಣಾಮ: ಸ್ಥಳೀಯ ಸಂಸದೆ ಪತ್ರ

ಸೆಪ್ಟೆಂಬರ್ 1 ರಂದು, ಈಸ್ಟ್ ಲೀಸೆಸ್ಟರ್ ಸಂಸದೆ ಕ್ಲೌಡಿಯಾ ವೆಬ್ಬೆ ಅವರು ಶಾಫ್ಟ್ಸ್‌ಬರಿ ಅವೆನ್ಯೂದಲ್ಲಿ ಹಿಂಸಾಚಾರ ಭುಗಿಲೆದ್ದಿರುವ ಬಗ್ಗೆ ಪೊಲೀಸರಿಗೆ ಪತ್ರ ಬರೆದರು, ಮತ್ತಷ್ಟು ಹಿಂಸಾಚಾರವನ್ನು ತಡೆಗಟ್ಟಲು ಸಮುದಾಯದೊಂದಿಗೆ ತೊಡಗಿಸಿಕೊಳ್ಳುವಲ್ಲಿ ಪೊಲೀಸರ ಕ್ರಮಗಳನ್ನು ಶ್ಲಾಘಿಸಿದ್ದರು.

"ಲೀಸೆಸ್ಟರ್‌ಶೈರ್ ಪೊಲೀಸರು ಈ ಘಟನೆಯನ್ನು ದ್ವೇಷದ ಅಪರಾಧವೆಂದು ಪರಿಗಣಿಸುತ್ತಿದ್ದಾರೆ. ಬೆಲ್‌ಗ್ರೇವ್ ಪ್ರದೇಶದಲ್ಲಿ ಹೆಚ್ಚುವರಿ ಗಸ್ತು ಒದಗಿಸುವುದರೊಂದಿಗೆ, ಘಟನೆಯ ಸಂದರ್ಭದಲ್ಲಿ ಜನಾಂಗೀಯವಾದ ಘೋಷಣೆ ಮತ್ತು ಹಿಂಸಾಚಾರಕ್ಕೆ ಯಾರು ಜವಾಬ್ದಾರರು ಎಂಬುದನ್ನು ಕಂಡುಹಿಡಿಯಲು ತನಿಖೆ ನಡೆಸುತ್ತಿದ್ದಾರೆ ಎಂದು ನನಗೆ ಸಂತೋಷವಾಗಿದೆ" ಎಂದು ಸಂಸದೆ ಪತ್ರದಲ್ಲಿ ಹೇಳಿದ್ದಾರೆ.

"ಹಿಂಸಾಚಾರವು ರಾಷ್ಟ್ರೀಯವಾದಿ ಭಾವನೆಗಳಿಂದ ಪ್ರೇರೇಪಿಸಲ್ಪಟ್ಟಿದೆ. ಇದು ಪ್ರತ್ಯೇಕವಾದ ಘಟನೆಗಳು ಎನ್ನುವುದಕ್ಕಿಂತ ಹೆಚ್ಚಾಗಿ ಲೀಸೆಸ್ಟರ್‌ನ ಸಮುದಾಯಗಳ ಕೆಲವು ಭಾಗಗಳಲ್ಲಿ ನೆಲೆಸಿರುವ ಇಸ್ಲಾಮೋಫೋಬಿಯಾದ ಪರಿಣಾಮವಾಗಿದೆ" ಎಂದು ಸಂಸದೆ ನಂಬಿದ್ದಾರೆ.

 ಕ್ಲೌಡಿಯಾ ವೆಬ್ಬೆ ಅವರು ಈ ಹಿಂದೆ ಹೋರಾಟಗಾರರಾದ ನೋದೀಪ್‌ ಕೌರ್‌, ದಿಶಾ ರವಿ ಬಂಧನದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಅಲ್ಲದೆ, ಕೃಷಿ ಕಾನೂನು ಹಿಂಪಡೆಯುವಂತೆ ಆಗ್ರಹಿಸಿ ನಡೆಯುತ್ತಿದ್ದ ರೈತರ ಹೋರಾಟಕ್ಕೂ ಬೆಂಬಲವನ್ನು ಸೂಚಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News