ರಿಯಾಯಿತಿ ದರದ ರಷ್ಯನ್ ಕಚ್ಚಾ ತೈಲ; ಭಾರತಕ್ಕೆ 35 ಸಾವಿರ ಕೋಟಿ ರೂ. ಲಾಭ: ವರದಿ

Update: 2022-09-19 12:26 GMT

ಹೊಸದಿಲ್ಲಿ: ರಷ್ಯಾ ಹಾಗೂ ಉಕ್ರೇನ್ ನಡುವಿನ ಸಂಘರ್ಷ ಆರಂಭವಾದ ಬಳಿಕ ಅಂದರೆ ಕಳೆದ ಫೆಬ್ರುವರಿ ಯಿಂದ ರಷ್ಯಾದಿಂದ ರಿಯಾಯಿತಿ ದರದಲ್ಲಿ ಕಚ್ಚಾ ತೈಲ ಆಮದು ಮಾಡಿಕೊಳ್ಳಲು ಆರಂಭಿಸಿದ ಭಾರತಕ್ಕೆ ಇದುವರೆಗೆ ಸುಮಾರು 35 ಸಾವಿರ ಕೋಟಿ ರೂ. ಲಾಭವಾಗಿದೆ ಎಂದು ಉನ್ನತ ಮೂಲಗಳು ಹೇಳಿವೆ.

ರಷ್ಯಾದ ಸಾಂಪ್ರದಾಯಿಕ ತೈಲ ಖರೀದಿದಾರರು, ಉಕ್ರೇನ್ ಸಂಘರ್ಷದ ಬಳಿಕ ರಷ್ಯಾದಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳುವುದನ್ನು ಸ್ಥಗಿತಗೊಳಿಸಿದ ಸಂದರ್ಭದಲ್ಲಿ ರಿಯಾಯಿತಿ ದರದಲ್ಲಿ ಕಚ್ಚಾತೈಲ ಪೂರೈಸಲು ರಷ್ಯಾ ಮುಂದಾಗಿತ್ತು. ಅಭಿವೃದ್ಧಿ ಹೊಂದಿದ ದೇಶಗಳ ವಿರೋಧದ ನಡುವೆಯೂ ಭಾರತ, ರಷ್ಯಾದಿಂದ ಕಚ್ಚಾತೈಲ ಆಮದು ಮಾಡಿಕೊಳ್ಳಲು ನಿರ್ಧರಿಸಿತ್ತು.

ಉಕ್ರೇನ್ ಸಂಘರ್ಷದ ಬಳಿಕ ಭಾರತ, ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವ ದೇಶಗಳ ಪೈಕಿ ಚೀನಾ ಹೊರತುಪಡಿಸಿದರೆ ಅತಿದೊಡ್ಡ ಖರೀದಿದಾರ ಎನಿಸಿಕೊಂಡಿತ್ತು. ಯುದ್ಧಕ್ಕೆ ಮೊದಲು ಭಾರತದ ಒಟ್ಟು ತೈಲ ಆಮದಿನ ಪೈಕಿ ರಷ್ಯಾದಿಂದ ಆಮದು ಪ್ರಮಾಣ ಶೇಕಡ 1ರಷ್ಟು ಇದ್ದರೆ, ಇದೀಗ ಈ ಪ್ರಮಾಣ ಶೇಕಡ 12ನ್ನು ತಲುಪಿದೆ. ಅಂತೆಯೇ ಸೌದಿ ಅರೇಬಿಯಾ ಹೊರತುಪಡಿಸಿದರೆ ಭಾರತಕ್ಕೆ ಅತಿಹೆಚ್ಚು ಕಚ್ಚಾ ತೈಲ ಪೂರೈಸುವ ಎರಡನೇ ದೇಶವಾಗಿ ರಷ್ಯಾ ಹೊರಹೊಮ್ಮಿತ್ತು. ಕಳೆದ ತಿಂಗಳು ರಿಯಾದ್ ಈ ಸ್ಥಾನವನ್ನು ಮರಳಿ ಪಡೆದಿದ್ದು, ಸದ್ಯಕ್ಕೆ ರಷ್ಯಾ ಮೂರನೇ ಸ್ಥಾನದಲ್ಲಿದೆ ಎಂದು ರಾಯ್ಟರ್ ಸುದ್ದಿಸಂಸ್ಥೆ ವರದಿ ಮಾಡಿದೆ.

ರಷ್ಯಾದಿಂದ ಭಾರತ ಆಮದು ಮಾಡಿಕೊಳ್ಳುತ್ತಿದ್ದ ಕಚ್ಚಾ ತೈಲದ ಮೌಲ್ಯ 1.3 ಶತಕೋಟಿ ಡಾಲರ್‌ ನಿಂದ ಎಂಟು ಪಟ್ಟು ಹೆಚ್ಚಿ 11.2 ಶತಕೋಟಿ ಡಾಲರ್ ಆಗಿದೆ. ಭಾರತ ತನ್ನ ತೈಲ ಬೇಡಿಕೆಯ ಶೇಕಡ 83ರಷ್ಟನ್ನು ಆಮದು ಮಾಡಿಕೊಳ್ಳಬೇಕಿರುವುದರಿಂದ ಭಾರತಕ್ಕೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ತೈಲ ಬೆಲೆ ಪ್ರಮುಖವಾಗುತ್ತದೆ ಎಂದು timesofindia.com ವರದಿ ಮಾಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News