ಬಿಜೆಪಿ ತನ್ನ ಸ್ವಾರ್ಥ ರಾಜಕೀಯಕ್ಕಾಗಿ ದೇಶವನ್ನು ಛಿದ್ರಗೊಳಿಸಿದೆ : ಸುಧೀರ್ ಮರೋಳಿ ಆರೋಪ
ಕಾಪು, ಸೆ.19: ಬಿಜೆಪಿ ತನ್ನ ಸ್ವಾರ್ಥ ರಾಜಕೀಯಕ್ಕಾಗಿ ದೇಶವನ್ನು ಛಿದ್ರಗೊಳಿಸಿ ದೇಶವಾಸಿಗಳ ಬದುಕನ್ನು ಸಂಕಷ್ಟಕ್ಕೆ ದೂಡಿದೆ. ಕಾಂಗ್ರೆಸ್ ಕಷ್ಟಪಟ್ಟು ಕಟ್ಟಿದ ದೇಶವನ್ನು ಒಡೆಯಲು ನಾವು ಅವಕಾಶ ನೀಡಬಾರದು. ಕಾಂಗ್ರೆಸ್ ಹೋರಾಟ ಕೇವಲ ಚುನಾವಣೆಗೆೆ ಸೀಮಿತವಾಗದೆ ಸ್ವಸ್ಥ ಸಮಾಜ ಸದೃಢ ದೇಶ ನಿರ್ಮಾಣದ ಗುರಿ ಹೊಂದಿದೆ ಎಂದು ಕಾಂಗ್ರೆಸ್ ಮುಖಂಡ, ಹಿರಿಯ ನ್ಯಾಯವಾದಿ ಸುಧೀರ್ ಕುಮಾರ್ ಮರೋಳಿ ಹೇಳಿದ್ದಾರೆ.
ಕಟಪಾಡಿ ಗ್ರಾಪಂ ಉಪಾಧ್ಯಕ್ಷ ಎ.ಆರ್.ಅಬೂಬಕ್ಕರ್ ಅವರ ಮೂಡಬೆಟ್ಟು ಸರಕಾರಿಗುಡ್ಡೆಯ ತೋಟದ ಮನೆಯಲ್ಲಿ ಸೋಮವಾರ ನಡೆದ ಕಟಪಾಡಿ, ಕೋಟೆ-ಮಟ್ಟು, ಇನ್ನಂಜೆ ಮತ್ತು ಕುರ್ಕಾಲು ಗ್ರಾಮಗಳ ಗ್ರಾಮೀಣ ಕಾಂಗ್ರೆಸ್ ಸಮಿತಿಗಳ ಚಿಂತನ ಮಂಥನ ಶಿಬಿರದಲ್ಲಿ ಅವರು ಮಾತನಾಡುತಿದ್ದರು.
ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ಮತಧರ್ಮದ ಹೆಸರಿನಲ್ಲಿ ದೇಶವನ್ನು ಒಡೆಯುತ್ತಿರುವ ಬಿಜೆಪಿಯನ್ನು ಸಮರ್ಥವಾಗಿ ಎದುರಿಸಿ ದೇಶದ ಜಾತ್ಯಾತೀತತೆಯನ್ನು, ಸೌಹಾರ್ದತೆಯನ್ನು, ಸಂವಿದಾನದ ಮೌಲ್ಯ ಗಳನ್ನು ಮರುಸ್ಥಾಪಿಸಲು ಕಾಂಗ್ರೆಸ್ ಮರಳಿ ಅಧಿಕಾರಕ್ಕೆ ಬರುವುದು ಅಗತ್ಯ ವಾಗಿದೆ. ಬಿಜೆಪಿಯ ಜನವಿರೋಧಿ ನಡೆ, ಅನೈತಿಕ ರಾಜಕೀಯ, ಭ್ರಷ್ಟಾಚಾರ, ಬೆಲೆಯೇರಿಕೆ, ಕಾಂಗ್ರೆಸ್ ನೀಡಿದ್ದ ಜನಪರ ಸವಲತ್ತುಗಳ ಕಸಿದುಕೊಳ್ಳುವ ಹುನ್ನಾರವನ್ನು ಬಯಲು ಮಾಡಬೇಕು ಎಂದರು.
ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಪ್ರಶಾಂತ್ ಜತ್ತನ್ನ, ಕಾಪು ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ಜಿತೇಂದ್ರ ಪುರ್ತಾದೋ, ಕೋಟೆ ಗ್ರಾಪಂ ಅಧ್ಯಕ್ಷ ಕಿಶೋರ್ ಕುಮಾರ್ ಅಂಬಾಡಿ, ಉಪಾಧ್ಯಕ್ಷೆ ಪ್ರಮೀಳಾ ಜತ್ತನ್ನ, ಕಟಪಾಡಿ ಗ್ರಾಪಂ ಅಧ್ಯಕ್ಷೆ ಇಂದಿರಾ ಎಸ್.ಆಚಾರ್ಯ, ಉಪಾಧ್ಯಕ್ಷ ಎ.ಆರ್.ಅಬೂಬಕ್ಕರ್, ಕುರ್ಕಾಲು ಗ್ರಾಪಂ ಅಧ್ಯಕ್ಷ ಮಹೇಶ್ ಶೆಟ್ಟಿ, ಉಪಾಧ್ಯಕ್ಷೆ ಮಾರ್ಗರೇಟ್ ಸೀಮಾ ಡಿಸೋಜ, ಕಾಪು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಂತಲತಾ ಶೆಟ್ಟಿ, ಅಲ್ಪಸಂಖ್ಯಾತ ವರ್ಗಗಳ ಅಧ್ಯಕ್ಷ ಸರ್ಫುದ್ಧೀನ್, ಯುವ ಕಾಂಗ್ರೆಸ್ ಅಧ್ಯಕ್ಷ ರಮೀಝ್ ಹುಸೈನ್, ಕುರ್ಕಾಲು ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಸುರೇಶ್ ಪೂಜಾರಿ, ಇನ್ನಂಜೆ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಶೆಟ್ಟಿ ಪಾಂಗಾಳ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡರನ್ನು ಸನ್ಮಾನಿಸಲಾಯಿತು. ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವಿನಯ ಬಲ್ಲಾಳ್ ಪ್ರಾಸ್ತಾವಿಕವಾಗಿ ಮಾತನಾಡಿ ದರು. ಕಟಪಾಡಿ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಶ್ರೀಕರ ಅಂಚನ್ ಸ್ವಾಗತಿಸಿದರು. ಕಟಪಾಡಿ ಗ್ರಾಪಂ ಸದಸ್ಯೆ ಮಾಜಿ ಉಪಾಧ್ಯಕ್ಷೆ ಪ್ರಭಾ ಬಿ.ಶೆಟ್ಟಿ ವಂದಿಸಿದರು. ಕಟಪಾಡಿ ಗ್ರಾಪಂ ಸದಸ್ಯ ಪ್ರಭಾಕರ ಪಾಲನ್ ಕಾರ್ಯಕ್ರಮ ನಿರೂಪಿಸಿದರು.