ಈ.ಡಿ., ಸಿಬಿಐ ವಿರುದ್ಧ ನಿರ್ಣಯ ಅಂಗೀಕರಿಸಿದ ಪಶ್ಚಿಮ ಬಂಗಾಳ ಸರಕಾರ

Update: 2022-09-19 18:13 GMT

ಕೋಲ್ಕತಾ, ಸೆ. 19: ಜಾರಿ ನಿರ್ದೇಶನಾಲಯ (ಈ.ಡಿ.), ಸಿಬಿಐ ಹಾಗೂ ಇತರ ಕೇಂದ್ರ ತನಿಖಾ ಸಂಸ್ಥೆಗಳ ವಿರುದ್ಧ ಪಶ್ಚಿಮಬಂಗಾಳ ಸರಕಾರ ಸೋಮವಾರ ವಿಧಾನ ಸಭೆಯಲ್ಲಿ ನಿರ್ಣಯ ಅಂಗೀಕರಿಸಿದೆ. ಇದರೊಂದಿಗೆ ಪಶ್ಚಿಮಬಂಗಾಳ ಈ ರೀತಿ ನಿರ್ಣಯ ಅಂಗೀಕರಿಸಿದ  ಮೊದಲ ರಾಜ್ಯವಾಗಿದೆ.

ಶಾಲಾ ನೇಮಕಾತಿ ಹಗರಣ, ಜಾನುವಾರು ಸಾಗಾಟ ಹಾಗೂ ಕಲ್ಲಿದ್ದಲು ಕಳ್ಳತನ ಸೇರಿದಂತೆ ರಾಜ್ಯದ ಪ್ರಮುಖ ಪ್ರಕರಣಗಳನ್ನು ಕೇಂದ್ರದ ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿರುವ ಸಂದರ್ಭ ಪಶ್ಚಿಮಬಂಗಾಳ ಸರಕಾರ ಈ ನಿರ್ಧಾರ ತೆಗೆದುಕೊಂಡಿದೆ.

ಕೇಂದ್ರದ ತನಿಖಾ ಸಂಸ್ಥೆಗಳು ಪಶ್ಚಿಮಬಂಗಾಳದ ಆಡಳಿತಾರೂಢ ಪಕ್ಷದ ನಾಯಕರನ್ನು ಆಯ್ದು ಗುರಿ ಮಾಡುತ್ತಿದೆ ಹಾಗೂ ಭೀತಿಯ ವಾತಾವರಣವನ್ನು ಸೃಷ್ಟಿಸುತ್ತಿದೆ ಎಂಬ ನಿರ್ಣಯವನ್ನು ಟಿಎಂಸಿ ಶಾಸಕರಾದ ನಿರ್ಮಲಾ ಘೋಷ್ ಹಾಗೂ ತಾಪಸ್ ರಾಯ್ ಅವರು ಮಂಡಿಸಿದರು.

2021 ವಿಧಾನ ಸಭೆ ಚುನಾವಣೆ ನಡೆದ ಕೂಡಲೇ ನಾರಾದ ಕುಟುಕು ಕಾರ್ಯಾಚರಣೆಗೆ ಸಂಬಂಧಿಸಿ ಸಿಬಿಐ ಸಚಿವ ಫಿರ್ಹಾದ್ ಹಕೀಮ್ ಹಾಗೂ ಸುಬ್ರತಾ ಮುಖರ್ಜಿ ಅವರನ್ನು ಬಂಧಿಸಿತ್ತು ಎಂದು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ. ಚಿಟ್ ಫಂಡ್ ಹಗರಣದಲ್ಲಿ ಬಿಜೆಪಿ ನಾಯಕರ ಹೆಸರು ಇದ್ದ ಹೊರತಾಗಿಯೂ ತನಿಖಾ ಸಂಸ್ಥೆಗಳು ಇದನ್ನು ಕಡೆಗಣಿಸಿದವು ಹಾಗೂ ಪ್ರಕರಣದ ಒಂದು ಆಯಾಮದಲ್ಲಿ ಮಾತ್ರ ತನಿಖೆ ನಡೆಸಿತು ಎಂದು ನಿರ್ಣಯ ಹೇಳಿದೆ.

ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರಕಾರವನ್ನು ಉರುಳಿಸುವಲ್ಲಿ ಪಿತೂರಿ   ಹಾಗೂ ಭಯದ ವಾತಾವರಣ ಸೃಷ್ಟಿಸುವಲ್ಲಿ ಕೇಂದ್ರದ ತನಿಖಾ ಸಂಸ್ಥೆಗಳು ಭಾಗಿಯಾಗಿವೆ ಎಂದು ನಿರ್ಣಯದಲ್ಲಿ ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News