ಈ.ಡಿ.ಯಿಂದ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ವಿಚಾರಣೆ

Update: 2022-09-19 18:12 GMT

ಹೊಸದಿಲ್ಲಿ, ಸೆ. 19: ಆದಾಯ ಮೀರಿ ಆಸ್ತಿ ಗಳಿಕೆ ಆರೋಪದ ಪ್ರಕರಣದಲ್ಲಿ ವಿಚಾರಣೆ ಎದುರಿಸಲು ಕಾಂಗ್ರೆಸ್‌ನ ಕರ್ನಾಟಕ ಘಟಕದ ವರಿಷ್ಠ ಡಿ.ಕೆ. ಶಿವಕುಮಾರ್ ಅವರು ಸೋಮವಾರ ದಿಲ್ಲಿಯಲ್ಲಿರುವ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾದರು.

ಆದರೆ, ಯಾವ ಪ್ರಕರಣಕ್ಕೆ ಸಂಬಂಧಿಸಿ ಸಮನ್ಸ್ ನೀಡಲಾಗಿದೆ ಎಂದು ಜಾರಿ ನಿರ್ದೇಶನಾಲಯ ನಿರ್ದಿಷ್ಟಪಡಿಸಿಲ್ಲ ಎಂದು ಕಾಂಗ್ರೆಸ್ ಸಂಸದ ಹಾಗೂ ಶಿವಕುಮಾರ್ ಅವರ ಸಹೋದರ ಡಿ.ಕೆ. ಸುರೇಶ್ ತಿಳಿಸಿದ್ದಾರೆ.

‘‘ಅವರು ಯಾವ ಪ್ರಕರಣಕ್ಕೆ ಸಂಬಂಧಿಸಿ ಸಮನ್ಸ್ ನೀಡಿದ್ದಾರೆ ಎಂಬುದು ತಿಳಿದಿಲ್ಲ. ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದು ರಾಜಕೀಯ ದ್ವೇಷ. ಕರ್ನಾಟಕದಲ್ಲಿ ವಿಧಾನ ಸಭೆ ಚುನಾವಣೆ ನಡೆಯಲು ಇನ್ನು 6 ತಿಂಗಳು ಇದೆ. ಅವರು (ಬಿಜೆಪಿ) ಪ್ರತಿಪಕ್ಷವನ್ನು ಬೆದರಿಸಲು ಬಯಸುತ್ತಿದ್ದಾರೆ. ಬಿಜೆಪಿಯ ಕಚೇರಿ ಜಾರಿ ನಿರ್ದೇಶನಾಲಯದ ಕಚೇರಿ’’ ಎಂದು ಅವರು ಹೇಳಿದರು.

74.93 ಕೋ. ರೂ. ಮೌಲ್ಯದ ಅಕ್ರಮ ಆಸ್ತಿ ಹೊಂದಿದ್ದ ಆರೋಪದಲ್ಲಿ ಶಿವಕುಮಾರ್ ವಿರುದ್ಧ ಸಿಬಿಐ 2020ರಲ್ಲಿ ಪ್ರಕರಣ ದಾಖಲಿಸಿತ್ತು. 2020 ಅಕ್ಟೋಬರ್‌ನಲ್ಲಿ ಸಿಬಿಐ 14 ಸ್ಥಳಗಳಲ್ಲಿ ದಾಳಿ ನಡೆಸಿತ್ತು. ಈ ಸಂದರ್ಭ 57 ಲಕ್ಷ ರೂ. ನಗದು ಪತ್ತೆಯಾಗಿದೆ ಎಂದು ಅದು ತಿಳಿಸಿತ್ತು.

ಕಳೆದ ವಾರ ಟ್ವೀಟ್‌ನಲ್ಲಿ ಡಿ.ಕೆ. ಶಿವಕುಮಾರ್, ಕರ್ನಾಟಕದಲ್ಲಿ ವಿಧಾನ ಸಭೆ ಅಧಿವೇಶನ ನಡೆಯುತ್ತಿರುವಾಗ ಹಾಗೂ ಕಾಂಗ್ರೆಸ್ ಭಾರತ್ ಜೋಡೊ ಯಾತ್ರೆ ನಡೆಸುತ್ತಿರುವಾಗ ಸಿಬಿಐ ಯಾಕೆ ಸಮನ್ಸ್ ನೀಡಿದೆ ಎಂದು ಪ್ರಶ್ನಿಸಿದ್ದಾರೆ. 

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ 3,570 ಕಿ.ಮೀ. ಉದ್ದದ ‘ಭಾರತ್ ಜೋಡೊ ಯಾತ್ರೆ’ ಪ್ರಸ್ತುತ ಕೇರಳದಲ್ಲಿದೆ. ಈ ಯಾತ್ರೆ ಅಕ್ಟೋಬರ್ 1ರಂದು ಕರ್ನಾಟಕಕ್ಕೆ ತಲುಪಲಿದೆ.

2019ರಲ್ಲಿ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಶಿವ ಕುಮಾರ್ ಅವರನ್ನು ಬಂಧಿಸಿತ್ತು. ತೆರಿಗೆ ವಂಚನೆ ಹಾಗೂ ಕೋಟಿ ರೂಪಾಯಿ ಮೌಲ್ಯದ ಹವಾಲ ವ್ಯವಹಾರದಲ್ಲಿ ಭಾಗಿಯಾದ್ದಾರೆ ಎಂದು ಆರೋಪಿಸಿ ಆದಾಯ ತೆರಿಗೆ ಇಲಾಖೆ ದೂರು ದಾಖಲಿಸಿದ ಬಳಿಕ ಸಿಬಿಐ ಶಿವಕುಮಾರ್ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿ 2019 ಅಕ್ಟೋಬರ್ 23ರಂದು ದಿಲ್ಲಿ ಉಚ್ಚ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News