ಮುಖ್ಯಮಂತ್ರಿ ಬೊಮ್ಮಾಯಿ, ಸಚಿವ ಸುನಿಲ್ ಕುಮಾರ್‌ರಿಂದ ಬಿಲ್ಲವ ಸಮುದಾಯಕ್ಕೆ ವಂಚನೆ: ಪ್ರಣವಾನಂದ ಸ್ವಾಮೀಜಿ ಆರೋಪ

Update: 2022-09-20 09:48 GMT
ಪ್ರಣವಾನಂದ ಸ್ವಾಮೀಜಿ

ಮಂಗಳೂರು, ಸೆ.20: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಚಿವ ಸುನಿಲ್ ಕುಮಾರ್‌ರವರು ಷಡ್ಯಂತ್ರ ಮಾಡಿಕೊಂಡು ಈಡಿಗ ಬಿಲ್ಲವ ಸಮುದಾಯದ ದಾರಿ ತಪ್ಪಿಸುತ್ತಿದ್ದಾರೆ ಎಂದು ಕಲಬುರಗಿ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿಪೀಠದ ಪ್ರಣವಾನಂದ ಸ್ವಾಮೀಜಿ ಆರೋಪಿಸಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡುತ್ತಾ ಈ ಆರೋಪ ಮಾಡಿದ ಪ್ರಣವಾನಂದ ಸ್ವಾಮೀಜಿ, 500 ಕೋಟಿ ರೂ. ಅನುದಾನ ನೀಡಿ ನಿಗಮ ಮಂಡಳಿ ಘೋಷಣೆ ಮಾಡುವಂತೆ ನಾವು ಬೇಡಿಕೆ ಇರಿಸಿದ್ದೇವೆ. ಆದರೆ, ಮುಖ್ಯಮಂತ್ರಿ ಹಾಗೂ ಸುನಿಲ್‌ಕುಮಾರ್‌ರವರು ಐದು ದಿನಗಳ ಹಿಂದೆ ಬೆಂಗಳೂರಿನಲ್ಲಿ ಈಡಿಗ ಸಮುದಾಯದ ಕಾರ್ಯಕ್ರಮಕ್ಕೆ ತೆರಳಿ ಅಲ್ಲಿ ಸಮುದಾಯ ಭವನಕ್ಕೆ ಐದು ಕೋಟಿ ರೂ. ನೀಡುವುದಾಗಿ ಹೇಳಿದ್ದಾರೆ. ನಿಗಮ ಘೋಷಣೆ ಮಾಡಲು ಆಗುವುದಿಲ್ಲ ಎಂದು ಮುಖ್ಯಮಂತ್ರಿ ಹೇಳಿಕೆ ನೀಡಿದ್ದಾರೆ. ಇದು ಈಡಿಗ, ಬಿಲ್ಲವ ಸಮುದಾಯಕ್ಕೆ ಮಾಡಿರುವ ವಂಚನೆ ಎಂದರು.

14 ಜಾತಿಗಳಿಗೆ ಈಗಾಗಲೇ ರಾಜ್ಯದಲ್ಲಿ ನಿಗಮ ಮಂಡಳಿ ಘೋಷಣೆಯಾಗಿದೆ. ಮುಖ್ಯಮಂತ್ರಿಗೆ ತಾಕತ್ತಿದ್ದರೆ, ಈ ನಿಗಮ ಮಂಡಳಿಗಳ ಬಗ್ಗೆ ಸ್ಪಷ್ಟನೆ ನೀಡಲಿ. ಒಂದು ತಿಂಗಳೊಳಗೆ ಮರಾಠ ಸಮುದಾಯಕ್ಕೂ 100 ಕೋಟಿರೂ. ನೀಡಿ ನಿಗಮ ಘೋಷಣೆ ಮಾಡಿದ್ದಾರೆ. ಆದರೆ ಈಡಿಗ ಮತ್ತು ಬಿಲ್ಲವ ಸಮುದಾಯಕ್ಕೆ ಯಾಕೆ ನಿಗಮ ಮಂಡಳಿ ಘೋಷಣೆ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಲಿ ಎಂದು ಅವರು ಹೇಳಿದರು.

ಸಚಿವ ಸುನಿಲ್ ಕುಮಾರ್ ಸಮುದಾಯವನ್ನು ಸಂಪೂರ್ಣವಾಗಿ ದಾರಿ ತಪ್ಪಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮಕ್ಕೆ ಬಿಲ್ಲವ ಸಮುದಾಯದ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಉಮಾನಾಥ ಕೋಟ್ಯಾನ್ ಹೋಗಿಲ್ಲ, ಹಾಲಪ್ಪ ಹೊರತುಪಡಿಸಿ ಸಮುದಾಯದ ಶಾಸಕರೂ ಹೋಗಿಲ್ಲ. ಹಾಗಾಗಿ ಸುನಿಲ್ ಕುಮಾರ್ ಸ್ವಾರ್ಥಕ್ಕಾಗಿ, ರಾಜಕೀಯ ಲಾಭಕ್ಕಾಗಿ ಬಿಲ್ಲವ ಸಮುದಾಯವನ್ನು ಬಲಿ ಕೊಡುತ್ತಿದ್ದಾರೆ. ಹಾಗಾಗಿ ಈ ವಿಷಯದಲ್ಲಿ ಯಾವುದೇ ರಾಜೀ ಇಲ್ಲ.ಮಂಗಳೂರಿನಿಂದ ಆರಂಭಿಸಿ ಬಿಲ್ಲವ ಸಮುದಾಯದ ಪ್ರತಿ ಮನೆಗೆ ಭೇಟಿ ನೀಡಿ ಮುಂಬರುವ ಚುನಾವಣೆಯಲ್ಲಿ ತಕ್ಕ ಪಾಠವನ್ನು ಈ ಸರಕಾರಕ್ಕೆ ಕಲಿಸಲು ನಿರ್ಧರಿಸಲಾಗಿದೆ ಎಂದು ಸ್ವಾಮೀಜಿ ಹೇಳಿದರು.

ಮುಂಬರುವ ಚುನಾವಣೆಯಲ್ಲಿ ಸಮುದಾಯವನ್ನು ರಾಜಕೀಯವಾಗಿ ಜಾಗೃತಿಗೊಳಿಸುವ ಕೆಲಸ ಮಾಡಲಾಗುವುದು. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷ ದ.ಕ. ಜಿಲ್ಲೆಯಲ್ಲಿ ಕನಿಷ್ಠ ತಲಾ ಮೂರು ಸೀಟುಗಳನ್ನು ಬಿಲ್ಲವರಿಗೆ ನೀಡಬೇಕು. ಸಂಸತ್ ಕ್ಷೇತ್ರದಲ್ಲಿ ಜಿಲ್ಲೆಯಲ್ಲಿ ಐದು ಲಕ್ಷ 30 ಸಾವಿರದಷ್ಟು ಮತಗಳು ಬಿಲ್ಲವ ಸಮುದಾಯದಲ್ಲಿದೆ. ಹಾಗಾಗಿ ಇಲ್ಲಿನ ಸಂಸದರು ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್‌ರವರು ಈ ಬಗ್ಗೆ ನೆನಪಿಡಬೇಕು. ಬಿಲ್ಲವ ಸಮುದಾಯವನ್ನು ರಾಜಕೀಯವಾಗಿ ಬಳಸಿಕೊಂಡು ಈ ರೀತಿ ಅನ್ಯಾಯವಾಗುವುದನ್ನು ಸಹಿಸುವುದಿಲ್ಲ ಎಂದರು.

'ಪ್ರವೀಣ್ ನೆಟ್ಟಾರು ಪತ್ನಿಗೆ ಸಿಎಂ ಕಚೇರಿಯಲ್ಲಿ ಕೆಲಸ ಕೊಡುವ ಬದಲು ಖಾಯಂ ಉದ್ಯೋಗ ನೀಡಬೇಕು. ನಾರಾಯಣ ಗುರುಗಳ ಹೆಸರನ್ನು ಮೆಟ್ರೋ, ಬಸ್ ತಂಗುದಾಣಕ್ಕೆ ಇಡುವ ಬದಲು ವಿಧಾನಸಭೆಯ ಅಂಗಣದಲ್ಲಿ ಅವರ ಮೂರ್ತಿಯನ್ನು ಪ್ರತಿಷ್ಠಾಪಿಸಬೇಕು. ಬಿಜೆಪಿ ಸರಕಾರದ ಬ್ರಾಹ್ಮಣಶಾಹಿ ನೇತಾರರ ದಾಸರಾಗಿ ನಮ್ಮ ಸಮುದಾಯದ ನಾಯಕರು ಕೆಲಸ ಮಾಡುತ್ತಿದ್ದಾರೆ. ಹಿಂದುಳಿದ ಸಮುದಾಯದ ನಾಯಕರಾಗಿರುವ ಸುನಿಲ್ ಕುಮಾರ್‌ಗೆ 500 ಕೋಟಿರೂ. ಅನುದಾನದಲ್ಲಿ ನಿಗಮ ಮಂಡಳಿ ಮಾಡಿಸಲು ಯಾಕೆ ಆಗುತ್ತಿಲ್ಲ. ಕೋಟ ಶ್ರೀನಿವಾಸ ಪೂಜಾರಿಯವರು ಸರಳ ಸಜ್ಜನಿಕೆಯ ವ್ಯಕ್ತಿಯಾಗಿ ವೌನವಾಗಿದ್ದಾರೆ. ದೇಶ ಧರ್ಮ ಹೆಸರಿನಲ್ಲಿ 18ರಷ್ಟು ಮಂದಿ ಬಿಲ್ಲವ ಸಮುದಾಯದವರು ಬಲಿಯಾಗಿದ್ದಾರೆ. ಇದಕ್ಕೆ ಕಾರಣ ಯಾರು? ಬಿಲ್ಲವ ಸಮುದಾಯ ಕೋಟಾ ಬೇಕು, ಬಿಲ್ಲವ ಸಮುದಾಯ ಓಟು ಬೇಕು ಆದರೆ ಬಿಲ್ಲವರು ಬೇಡ ಎಂಬ ಧೋರಣೆ ರಾಜಕೀಯ ನಾಯಕರದ್ದಾಗಿದೆ. ಸ್ವತಂತ್ರ ಭಾರತದಲ್ಲಿ ಹಿಂದುಳಿದ ವರ್ಗದ ಸಮುದಾಯದ ಮಂದಿ ಅತಂತ್ರರಾಗಿ ಬದುಕುತ್ತಿದ್ದಾರೆ. ಆದ್ದರಿಂದ ನಾನು ಮುಂದಿನ ದಿನಗಳಲ್ಲಿ ಬಿಲ್ಲವ ನಾಯಕರ ಜತೆ ಚರ್ಚಿಸಿ ಕುದ್ರೋಳಿ ದೇವಸ್ಥಾನ ಅಥವಾ ಗೆಜ್ಜೆಗಿರಿ ಕ್ಷೇತ್ರ ಅಥವಾ ಶಕ್ತಿಪೀಠದಿಂದ ವಿಧಾನಸಭೆಗೆ ಪಾದಯಾತ್ರೆ ಮಾಡುವ ಬಗ್ಗೆ 15 ದಿನಗಳಲ್ಲಿ ನಿರ್ಧರಿಸಲಿದ್ದೇನೆ. ಅಲ್ಲದೆ ದ.ಕ.ಜಿಲ್ಲೆಯ ಎಲ್ಲಾ ಬಿಲ್ಲವ ಸಂಘಟನೆಗಳ ಮೂಲಕ ಬೃಹತ್ ಹೋರಾಟ ನಡೆಸಲಿದ್ದೇವೆ' ಎಂದು ಅವರು ಹೇಳಿದರು.

'ಬಿಲ್ಲವ, ಈಡಿಗ ಸಮುದಾಯದ ಕುಲಕಸುಬು ದ.ಕ. ಮತ್ತು ಉಡುಪಿಯಲ್ಲಿದೆ. ರಾಜ್ಯಾದ್ಯಂತ ಇತರ ಜಿಲ್ಲೆಗಳಲ್ಲಿ ಬಂದ್ ಆಗಿದೆ. ವೈನ್‌ಶಾಪ್ ಬಾರ್ ನಮ್ಮದಲ್ಲ. ಆದರೆ, 13 ಸಾವಿರ ಬಾರ್ ವೈನ್‌ಶಾಪ್ ಪರವಾನಿಗೆಯಲ್ಲಿ 3000 ಪರವಾನಿಗೆ ನಮ್ಮ ಸಮುದಾಯದವರದ್ದು. ರಾಜ್ಯಾದ್ಯಂತ ಶೇಂದಿಗೆ ಸಮುದಾಯದವರಿಗೆ ಅನುಮತಿ ನೀಡಬೇಕು. ಒಂದು ವೇಳೆ ಶೇಂದಿ ಬೇಡವೆಂದಾದಲ್ಲಿ, ಸರಕಾರಕ್ಕೆ ತಾಕತ್ತಿದ್ದರೆ 13 ಸಾವಿರ ಬಾರ್, ವೈನ್ ಶಾಪ್, ಗುಟ್ಕ ಪಾನ್, ಪಬ್ ಬಂದ್ ಮಾಡಬೇಕು. ಇತರ ಎಲ್ಲಾ ಸಮುದಾಯದವರು ಅವರ ಕುಲಕಸುಬನ್ನು ಮಾಡುತ್ತಿರುವಾಗ ಬಿಲ್ಲವ, ಈಡಿಗ ಸಮುದಾಯದ ಆರ್ಥಿಕ ಶಕ್ತಿಯನ್ನು ಕುಗ್ಗಿಸಲು ಶೇಂದಿಯನ್ನು ನಿಲ್ಲಿಸಲಾಗಿದೆ' ಎಂದು ಆರೋಪಿಸಿದರು.

''2023ರಲ್ಲಿ ರಾಜ್ಯದ ಸಿಎಂ ಬಿಲ್ಲವ, ಈಡಿಗ ಸಮುದಾಯದವರೇ ಆಗಲಿದ್ದಾರೆ ಎಂಬುದಕ್ಕೆ ಯಾವುದೇ ಅನುಮಾನವಿಲ್ಲ. ಈಗಲೂ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಬಿಲ್ಲವ ಸಮುದಾಯಕ್ಕೆ ಹಕ್ಕು ಇದೆ. ಬಿಜೆಪಿ ಸರಕಾರ ಬಿಲ್ಲವ ಸಮುದಾಯಕ್ಕೆ ಮೂಗಿಗೆ ತುಪ್ಪ ಸವರುವ ಕಾರ್ಯ ಮಾಡಿದ್ದೇ ಆದಲ್ಲಿ ಚುನಾವಣೆಯ ಸಂದರ್ಭದಲ್ಲಿ ಈ ಸಮುದಾಯ ತಕ್ಕ ಪಾಠ ಕಲಿಸಲಿದೆ''

- ಪ್ರಣವಾನಂದ ಸ್ವಾಮೀಜಿ 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News