ಸುಸ್ಥಿರ ಘನತ್ಯಾಜ್ಯ ನಿರ್ವಹಣೆ ಅಧ್ಯಯನಕ್ಕೆ ಮಂಗಳೂರು ಆಯ್ಕೆ: ಮನಪಾ ಆಯುಕ್ತ ಅಕ್ಷಯ್ ಶ್ರೀಧರ್
ಮಂಗಳೂರು, ಸೆ.20: ಸುಸ್ಥಿರ ಘನತ್ಯಾಜ್ಯ ನಿರ್ವಹಣೆ ಕುರಿತಂತೆ ಅಧ್ಯಯನ ನಡೆಸಲು ರಾಜ್ಯ ಸರಕಾರ ಪ್ರಾಯೋಗಿಕವಾಗಿ ಮಂಗಳೂರು ನಗರವನ್ನು ಆಯ್ಕೆ ಮಾಡಿದೆ ಎಂದು ಮನಪಾ ಆಯುಕ್ತ ಅಕ್ಷಯ್ ಶ್ರೀಧರ್ ಹೇಳಿದ್ದಾರೆ.
ಘನತ್ಯಾಜ್ಯ ವಸ್ತು ನಿರ್ವಹಣೆಯನ್ನು ಸುಧಾರಿಸುವ ತಂತ್ರಗಳು ಮತ್ತು ಕ್ರಿಯಾ ಯೋಜನೆ ತಯಾರಿಸುವ ಕುರಿತು ಮಂಗಳೂರು ಮಹಾನಗರ ಪಾಲಿಕೆ, ಕೆಯುಐಡಿಎಫ್ಸಿ, ವಿಶ್ವ ಬ್ಯಾಂಕ್ ವತಿಯಿಂದ ಮಂಗಳೂರು ಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಈ ಯೋಜನೆಗೆಂದು ಮಂಗಳೂರು ಮತ್ತು ಕೋಲಾರ ನಗರವನ್ನು ರಾಜ್ಯ ಸರಕಾರ ಆಯ್ಕೆ ಮಾಡಿದೆ ಎಂದರು.
ಮನೆಗಳಿಂದ ಕಸ ಸಂಗ್ರಹಣೆಗೆ ಖಾಸಗಿ ಸಂಸ್ಥೆಗೆ ಒಂದು ವರ್ಷ ವಿಸ್ತರಣೆ ನೀಡಲಾಗಿದೆ. ಹೊಸ ಡಿಪಿಆರ್‌ಗೆ ಸರಕಾರದ ಮಟ್ಟದಲ್ಲಿ ಅನುಮೋದನೆ ಪಡೆದು ಸದ್ಯದಲ್ಲೇ ಟೆಂಡರ್ ಕರೆಯಲಾಗುವುದು. ಸ್ವಚ್ಛ ಭಾರತ್ ಮಿಷನ್‌ನಡಿ ಈಗಾಗಲೇ ಯಂತ್ರೋಪಕರಣ ಖರೀದಿ ಮಾಡಲಾಗಿದೆ. ಮಂಗಳೂರಿನಲ್ಲಿ ಈ ಹಿಂದೆ ಪೌರಕಾರ್ಮಿಕರ ಸಂಖ್ಯೆ ಕಡಿಮೆ ಇತ್ತು. ಇದೀಗ 111 ಮಂದಿಯನ್ನು ನೇಮಕ ಮಾಡಲಾಗಿದ್ದು, ಸದ್ಯ 300 ಮಂದಿ ಖಾಯಂ ಪೌರಕಾರ್ಮಿಕರಿದ್ದಾರೆ ಎಂದು ಅಕ್ಷಯ್ ಶ್ರೀಧರ್ ವಿವರಿಸಿದರು.
ಘನತ್ಯಾಜ್ಯ ನಿರ್ವಹಣೆಯ ಕುರಿತಂತೆ ಪಾಲಿಕೆ ಪ್ರತಿಪಕ್ಷ ನಾಯಕ ನವೀನ್ ಡಿಸೋಜಾ ಮಾತನಾಡಿ, ನಗರದ ಮನೆಗಳಿಂದ ನಡೆಯುತ್ತಿರುವ ಕಸ ಸಂಗ್ರಹ ವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸಬೇಕು ಎಂದರು.
ಪಾಲಿಕೆ ಸದಸ್ಯ ಸುಧೀರ್ ಶೆಟ್ಟಿ ಕಣ್ಣೂರು ಮಾತನಾಡಿ, ನಗರದಲ್ಲಿ ಘನತ್ಯಾಜ್ಯ ನಿರ್ವಹಣೆ ಸವಾಲಾಗಿ ಪರಿಣಮಿಸಿದೆ. ಆರಂಭಿಕ ಹಂತದಲ್ಲಿ ನಿರ್ವಹಣೆ ಉತ್ತಮವಾಗಿದ್ದರೂ ಬಳಿಕ ಸಮಸ್ಯೆ ಉಂಟಾಯಿತು. ಪ್ರತೀ ವರ್ಷ ಸ್ವಚ್ಛತೆಯ ಹೆಸರಿನಲ್ಲಿ ಇಂಧೋರ್ ನಗರ ಗುರುತಿಸಿಕೊಳ್ಳುತ್ತಿದ್ದು, ಅಲ್ಲಿ ಯಾವ ರೀತಿ ಕಸ ಸಂಸ್ಕರಣೆ ಮಾಡಲಾಗುತ್ತದೆ ಎಂಬ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಸ್ಟಡೀ ಟೂರ್ ಮಾಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕ್ರೆಡಾಯ್ ಅಧ್ಯಕ್ಷ ಪುಷ್ಪರಾಜ್ ಜೈನ್ ಮಾತನಾಡಿ, ಮಂಗಳೂರು ನಗರ ಅಭಿವೃದ್ಧಿಯಾಗುತ್ತಿದ್ದು, ನಗರವನ್ನು ಸ್ವಚ್ಛವಾಗಿಡುವುದು ಅತೀ ಮುಖ್ಯ ಎಂದರು. ಕ್ಯಾಟರಿಂಗ್ ಎಸೋಸಿಯೇಶನ್ ಪ್ರಮುಖರಾದ ರಾಜೇಶ್ ಮಾತನಾಡಿ, ಪ್ರತೀ ಮನೆಗಳಲ್ಲಿಯೂ ಘನತ್ಯಾಜ್ಯ ನಿರ್ವಹಣೆ ಸಮರ್ಪಕವಾಗಿ ನಡೆದರೆ ಸಮಸ್ಯೆ ಉಂಟಾಗದು ಎಂದು ಹೇಳಿದರು.
ಪಾಲಿಕೆ ಸದಸ್ಯರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಮಾತನಾಡಿದರು. ವೇದಿಕೆಯಲ್ಲಿ ಮನಪಾ ಮಾಜಿ ಮೇಯರ್‌ಗಳಾದ ಪ್ರೇಮಾನಂದ ಶೆಟ್ಟಿ, ಭಾಸ್ಕರ್ ಕೆ., ಪಾಲಿಕೆ ಉಪ ಆಯುಕ್ತ ರವಿಕುಮಾರ್ ಉಪಸ್ಥಿತರಿದ್ದರು.
ವಿವಿಧ ಸಂಘ-ಸಂಸ್ಥೆ ಪ್ರಮುಖರು, ಪಾಲಿಕೆ ಸದಸ್ಯರು, ಪಾಲಿಕೆ ಅಧಿಕಾರಿಗಳು, ನಾಗರಿಕರು ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು. ನಿರಂಜನ್ ನಿರೂಪಿಸಿದರು. ಶಿವಲಿಂಗ ಸ್ವಾಗತಿಸಿದರು.