ಮಂಗಳೂರು: 33 ಸಾವಿರ ಪೌರಕಾರ್ಮಿಕರ ಖಾಯಂ ಮಾಡಲು ಆಗ್ರಹ
ಮಂಗಳೂರು, ಸೆ. 20: ಸಚಿವ ಸಂಪುಟ ಸಭೆಯಲ್ಲಿ ಕೇವಲ 11 ಸಾವಿರ ಪೌರ ಕಾರ್ಮಿಕರನ್ನು ಖಾಯಂ ಮಾಡಲು ತೀರ್ಮಾನಿಸಿರುವುದು ಸಮಸ್ತ ಪೌರ ಕಾರ್ಮಿಕರಿಗೆ ಮಾಡಿರುವ ಅನ್ಯಾಯ. ರಾಜ್ಯದಲ್ಲಿ 33 ಸಾವಿರ ಪೌರ ಕಾರ್ಮಿಕರು 20 ವರ್ಷಗಳಿಂದ ಖಾಯಂಗಾಗಿ ಕಾಯುತ್ತಿದ್ದಾರೆ. ಅವರನ್ನು ಕೂಡ ಖಾಯಂ ಮಾಡಬೇಕು ಎಂದು ರಾಜ್ಯ ಪೌರಕಾರ್ಮಿಕರ ಮಹಾಸಂಘ ಸರ್ಕಾರವನ್ನು ಒತ್ತಾಯಿಸಿದೆ.
ರಾಜ್ಯ ಪೌರಕಾರ್ಮಿಕರ ಸಂಘದ ಅಧ್ಯಕ್ಷ ನಾರಾಯಣ ಮೈಸೂರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುಖ್ಯಮಂತ್ರಿ ಅವರು ಜು.1ರಂದು ಪೌರಕಾರ್ಮಿಕ ಮುಖಂಡರಿಗೆ ಬರವಣಿಗೆಯಲ್ಲಿ ನೀಡಿರುವ ಭರವಸೆಗೆ ವಿರುದ್ಧವಾಗಿದೆ. ಇದು ಪೌರಕಾರ್ಮಿಕರಿಗೆ ಮಾಡಿದ ಅನ್ಯಾಯ. ಬೇಡಿಕೆ ಈಡೇರದಿದ್ದರೆ ಮತ್ತೆ ಪ್ರತಿಭಟನೆ ನಡೆಸಲಾಗುವುದು ಎಂದವರು ಹೇಳಿದರು.
ರಾಜ್ಯದ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿರುವ ನೇರ ವೇತನ ಪಾವತಿ ಮತ್ತು ಗುತ್ತಿಗೆ ಪೌರಕಾರ್ಮಿಕರು, ಗುತ್ತಿಗೆ ಆಧಾರದ ಒಳಚರಂಡಿ ಕಾರ್ಮಿಕರು, ಲೋಡರ್ಸ್, ಕಸದ ವಾಹನ ಚಾಲಕರು ಮತ್ತು ಕ್ಲೀನರ್ಸ್ ಕಳೆದ 10-20 ವರ್ಷಗಳಿಂದ ಗುತ್ತಿಗೆ ಎಂಬ ಸರ್ಕಾರಿ ಗುಲಾಮತನದಲ್ಲಿ ಕಾರ್ಯನಿರ್ವಹಿಸಿ ಶೋಷಣೆಗೊಳಗಾಗಿದ್ದಾರೆ.
ತಮ್ಮ ಆರೋಗ್ಯದ ಬಗ್ಗೆ ಚಿಂತಿಸದೆ ಸಾರ್ವಜನಿಕರ ಆರೋಗ್ಯ ಕಾಪಾಡಲು ಕರೊನಾದಂತಹ ಸಾಂಕ್ರಾಮಿಕ ರೋಗ ಮತ್ತು ಲಾಕ್‌ಡೌನ್‌ನಂತಹ ತುರ್ತು ಸಂದರ್ಭಗಳಲ್ಲಿಯೂ ನಿರಂತರವಾಗಿ ಕಸ, ತೆರೆದ ಚರಂಡಿ ಸ್ವಚ್ಛಗೊಳಿಸಿ ಸಾರ್ವಜನಿಕರನ್ನು ರಕ್ಷಿಸಿದ್ದಾರೆ. ಆದರೆ ಸರ್ಕಾರಗಳು ಈ ಕಾರ್ಮಿಕರನ್ನು ಕಾನೂನು ಬಾಹಿರ ಗುತ್ತಿಗೆ ಪದ್ಧತಿ ಅಥವಾ ನೇರ ಪಾವತಿ ಎಂಬ ಇನ್ನೊಂದು ರೀತಿಯ ಗುತ್ತಿಗೆ ಜಾರಿ ಮಾಡಿ ಯಾವುದೇ ಸೂಕ್ತ ಸಾಮಾಜಿಕ ಭದ್ರತೆ ನೀಡದೆ ಪ.ಜಾತಿ ಮತ್ತು ಪಂಗಡದ ಸ್ವಚ್ಛತಾ ಕಾರ್ಮಿಕರನ್ನು ವಂಚಿಸುತ್ತಿದ್ದಾರೆ ಎಂದರು.
ರಾಜ್ಯ ಸಂಚಾಲಕ ಡಾ.ಬಿ.ಕೆ.ಓಬಳೇಶ, ಸಂಘಟನಾ ಕಾರ್ಯದರ್ಶಿ ದಾಸ್, ಜಿಲ್ಲಾ ಅಧ್ಯಕ್ಷ ಅನಿಲ್ ಕುಮಾರ್, ಕಾರ್ಯದರ್ಶಿ ಎಸ್.ಪಿ.ಆನಂದ ಉಪಸ್ಥಿತರಿದ್ದರು.