×
Ad

ಸರಕಾರಿ ಯೋಜನೆಗಳ ಅರ್ಜಿಗಳನ್ನು ಸಕಾರಣವಿಲ್ಲದೇ ತಿರಸ್ಕರಿಸಬೇಡಿ: ಬ್ಯಾಂಕ್ ಅಧಿಕಾರಿಗಳಿಗೆ ಸಿಇಓ ಪ್ರಸನ್ನ ಸೂಚನೆ

Update: 2022-09-20 18:59 IST

ಉಡುಪಿ, ಸೆ.20: ಜಿಲ್ಲೆಯ ಬ್ಯಾಂಕ್ ಶಾಖೆಗಳಿಗೆ ವಿವಿಧ ಇಲಾಖೆಗಳ ಮೂಲಕ ಸಲ್ಲಿಕೆಯಾಗುವ ಸರಕಾರಿ ಯೋಜನೆಗಳ ಫಲಾನುಭವಿಗಳ ಅರ್ಜಿ ಗಳನ್ನು ಬಲವಾದ ಕಾರಣವಿಲ್ಲದೇ ತಿರಸ್ಕರಿಸದಂತೆ, ಶೀಘ್ರವಾಗಿ ಅವುಗಳನ್ನು ಆದ್ಯತೆ ಮೇಲೆ ವಿಲೇವಾರಿ ಮಾಡಿ ನಿಗದಿತ ಸಾಲ ವಿತರಿಸುವಂತೆ ಎಲ್ಲಾ ಬ್ಯಾಂಕ್ ಅಧಿಕಾರಿಗಳಿಗೆ  ಉಡುಪಿ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್. ಸೂಚನೆ ನೀಡಿದ್ದಾರೆ.

ಮಂಗಳವಾರ ಮಣಿಪಾಲದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ  ನಡೆದ ಜಿಲ್ಲಾ ಮಟ್ಟದ ಬ್ಯಾಂಕ್‌ಗಳ ಪರಿಶೀಲನಾ ಸಮಿತಿಯ ಸಭೆಯ (ಡಿಎಲ್‌ಆರ್) ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು. ಜಿಲ್ಲೆಯ ಬ್ಯಾಂಕುಗಳು ಕೇಂದ್ರ ಹಾಗೂ ರಾಜ್ಯ ಸರಕಾರ ಪ್ರಾಯೋಜಿತ ಯೋಜನೆಗಳ ಫಲಾನುಭವಿಗಳಿಗೆ ಹೆಚ್ಚು ಮುತುವರ್ಜಿಯಿಂದ ಆರ್ಥಿಕ ನೆರವು, ಸಾಲ ನೀಡಲು ಮುಂದಾಗ ಬೇಕು ಎಂದವರು ಕರೆ ನೀಡಿದ್ದಾರೆ.

ವಿವಿಧ ಇಲಾಖೆಗಳ ಮೂಲಕ ಸರಕಾರಿ ಯೋಜನೆಗಳ ಫಲಾನುಭವಿಗಳು ಸಲ್ಲಿಸುವ ಅರ್ಜಿಗಳನ್ನು ಸಣ್ಣಪುಟ್ಟ ಕಾರಣಗಳಿಗೆ ತಿರಸ್ಕರಿಸದೇ, ಅವುಗಳನ್ನು ಪುನರ್‌ಪರಿಶೀಲನೆ ನಡೆಸಿ, ಸಂಬಂಧಿತ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಹಾಗೂ ಸೂಕ್ತ ದಾಖಲೆಗಳ ಅಗತ್ಯವಿದ್ದಲ್ಲಿ ಫಲಾನುಭವಿಗಳಿಂದ ಪಡೆದು ಸಾಲವನ್ನು ಮಂಜೂರು ಮಾಡುವ ಮೂಲಕ ಬ್ಯಾಂಕ್ ಸಹ ತನ್ನ ನಿಗದಿತ ಸಾಲ ಮತ್ತು ಠೇವಣಿ ಅನುಪಾತದ ಗುರಿ ಸಾಧಿಸುವಂತೆ ಮತ್ತು ಸರಕಾರದ ಯೋಜನೆಗಳೂ ಗುರಿ ತಲುಪುವಂತೆ ಸಹಕರಿಸಬೇಕು ಎಂದರು.

ಇದೇ ವೇಳೆ ಉಡುಪಿಯ ಲೀಡ್ ಬ್ಯಾಂಕ್ (ಕೆನರಾ) ಮ್ಯಾನೇಜರ್ ಪಿ.ಎಂ.ಪಿಂಜಾರ ಮಾತನಾಡಿ, ೨ ಲಕ್ಷ ರೂ.ಗಿಂತ ಅಧಿಕ  ಮೊತ್ತದ ಯಾವುದೇ ಸಾಲವನ್ನು ಬ್ಯಾಂಕ್ ಮೆನೇಜರ್ ಹಂತದಲ್ಲಿ ತಿರಸ್ಕರಿಸಲು ಸಾಧ್ಯವಿಲ್ಲ. ಅದನ್ನು ಸಂಬಂಧಿಸಿದ ಬ್ಯಾಂಕ್‌ನ ಪ್ರಾದೇಶಿಕ ಮೆನೇಜರ್ ಮಾತ್ರ ತಿರಸ್ಕರಿಸಬಹುದು ಎಂದರು.

ಮುಖ್ಯವಾಗಿ ಕೃಷಿ ಇಲಾಖೆಯ ಮೂಲಕ ಸಲ್ಲಿಕೆಯಾಗುತ್ತಿರುವ ರೈತರ ಸಾಲದ ಅರ್ಜಿಗಳನ್ನು ಬ್ಯಾಂಕ್‌ಗಳು ಅಕಾರಣವಾಗಿ ತಿರಸ್ಕರಿಸುತ್ತಿರುವುದು ಹಾಗು ನಿಗದಿತ ಅವಧಿಗಿಂತ ಹೆಚ್ಚುಕಾಲ ಅರ್ಜಿಗಳನ್ನು ವಿಲೇವಾರಿ ಮಾಡದೇ ಇರಿಸಿಕೊಳ್ಳುತ್ತಿರುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸಿಇಓ,  ರೈತರ ಆದಾಯ ವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ರೈತರು ಮತ್ತು ಕೃಷಿಯ ಅಭಿವೃಧ್ದಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಬ್ಯಾಂಕ್‌ಗಳು ಈ ಯೋಜನೆಗಳ ಪ್ರಗತಿಗೆ ಅಗತ್ಯ ಆರ್ಥಿಕ ಸೌಲಭ್ಯಗಳನ್ನು ಮಂಜೂರು ಮಾಡುವುದರ ಜೊತೆಗೆ, ರೈತರನ್ನು ಅನಗತ್ಯವಾಗಿ ಪದೇಪದೇ ಬ್ಯಾಂಕ್‌ಗಳಿಗೆ ಅಲೆದಾಡಿಸದೇ, ಅವರ ಅರ್ಜಿಗಳನ್ನು ಶೀಘ್ರವೇ ವಿಲೇವಾರಿ ಮಾಡುವ ಮೂಲಕ ರೈತ ಸ್ನೇಹಿಯಾಗಿ ಕಾರ್ಯನಿರ್ವಹಿಸಬೇಕು ಎಂದರು.

ವಸೂಲಿ ಏಜೆಂಟ್‌ರಿಂದ ಬೆದರಿಕೆ ಸಲ್ಲ: ಸಭೆಯಲ್ಲಿ ರಿಸರ್ವ್ ಬ್ಯಾಂಕ್‌ನ ಪ್ರತಿನಿಧಿಯಾಗಿ ಉಪಸ್ಥಿತರಿದ್ದ ಆರ್‌ಬಿಐನ ಅಧಿಕಾರಿ ಹಾಗೂ ಜಿಲ್ಲಾ ಲೀಡ್ ನೋಡೆಲ್ ಅಧಿಕಾರಿ ತನು ನಂಜಪ್ಪ, ಮಾತನಾಡಿ, ರಾಷ್ಟ್ರೀಕೃತ ಹಾಗೂ ಖಾಸಗಿ ಬ್ಯಾಂಕ್‌ಗಳು, ಸಹಕಾರಿ ಸೊಸೈಟಿಗಳು ಹಾಗೂ ಹಣಕಾಸು ಸಂಸ್ಥೆಗಳು, ಸಾಲ ವಸೂಲಾತಿಗಾಗಿ ನೇಮಿಸಿಕೊಂಡಿರುವ ವಸೂಲಿ ಏಜೆಂಟ್ (ರಿಕವರಿ ಏಜೆಂಟ್)ಗಳು ಗ್ರಾಹಕರಿಗೆ ಅನಗತ್ಯ ಕಿರುಕುಳ, ಬೆದರಿಕೆ, ಹಿಂಸೆ ಮಾಡದೇ, ಅಶ್ಲೀಲ ಮೆಸೇಜ್ ಕಳುಹಿಸುವುದು, ಸಾಮಾಜಿಕ ಜಾಲ ತಾಣದಲ್ಲಿ ನಿಂದನೆ ಮಾಡುವುದರ ವಿರುದ್ದ ರಿಸರ್ವ್ ಬ್ಯಾಂಕ್ ಕಠಿಣ ಕ್ರಮಗಳನ್ನು ಕೈಗೊಳ್ಳಲಿದೆ. ವಸೂಲಿ ಏಜೆಂಟ್‌ಗಳು ಸಂಜೆ 7 ಗಂಟೆಯ ನಂತರ ಯಾವುದೇ ಕಾರಣಕ್ಕೂ ಗ್ರಾಹಕರನ್ನು ಸಂಪರ್ಕಿಸಬಾರದು ಎಂದು ಬ್ಯಾಂಕ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ತ್ರೈಮಾಸಿಕ ವರದಿ:  ಸಭೆಗೆ ಕಳೆದ ತ್ರೈಮಾಸಿಕದ ವರದಿ ಮಂಡಿಸಿದ ಕೆನರಾ ಬ್ಯಾಂಕ್ ಪ್ರಾದೇಶಿಕ ಮೆನೇಜರ್ ಲೀನಾ ಪಿಂಟೋ, ಜೂನ್ ಅಂತ್ಯಕ್ಕೆ ಠೇವಣಿ ಸಂಗ್ರಹ 32,440 ಕೋಟಿ ರೂ.ಗಳಿಗೆ ಏರಿ ಶೇ.11.95ರ ಏರಿಕೆ ಕಂಡರೆ, ಇದೇ ಅವಧಿಯಲ್ಲಿ ಸಾಲ ವಿತರಣೆಯಲ್ಲೂ 2602 ಕೋಟಿ ರೂ.ಏರಿಕೆಯಾಗಿ ವಾರ್ಷಿಕ ಸಾಧನೆ ಶೇ.19.64 ಆಗಿದೆ ಎಂದರು.

ಈ ಅವಧಿಯಲ್ಲಿ ಜಿಲ್ಲೆಯ ಠೇವಣಿ ಮತ್ತು ಸಾಲದ ಅನುಪಾತ ಪ್ರಗತಿ ತೋರಿಸಿದ್ದು, ಅದು ಶೇ. 48.85ಕ್ಕೇರಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಈಅನುಪಾತ ಶೇ. 45.71 ಆಗಿದ್ದರೆ, ಹಿಂದಿನ ತ್ರೈಮಾಸಿಕದಲ್ಲಿ ಇದು ಶೇ.47.25 ಇತ್ತು.  ಜಿಲ್ಲೆಯ ಬ್ಯಾಂಕ್ ಶಾಖೆಗಳು ಇನ್ನು ಹೆಚ್ಚು ಮುತುವರ್ಜಿಯಿಂದ ಕೆಲಸ ಮಾಡಿ  ಸಾಲ-ಠೇವಣಿ ಅನುಪಾತ ಶೇ.50ಕ್ಕೇರುವ ಗುರಿ ಸಾಧಿಸಲು ನೆರವಾಗಬೇಕು ಎಂದು ಲೀನಾ ಪಿಂಟೊ ತಿಳಿಸಿದರು.

ಕಳೆದ ಮೂರು ತಿಂಗಳ ಅವಧಿಯಲ್ಲಿ ಬ್ಯಾಂಕುಗಳ ಕೃಷಿ ಕ್ಷೇತ್ರಕ್ಕೆ 589.68 ಕೋಟಿ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ವಲಯಕ್ಕೆ 501.10 ಕೋಟಿ, ಶೈಕ್ಷಣಿಕ ವಲಯಕ್ಕೆ 12.96 ಕೋಟಿ ಹಾಗೂ ವಸತಿ ವಲಯಕ್ಕೆ 93.55 ಕೋಟಿ ಸಾಲ ವಿತರಿಸಲಾಗಿದೆ. ಒಟ್ಟಾರೆಯಾಗಿ ಆದ್ಯತಾ ವಲಯಕ್ಕೆ 1276.75, ಆದ್ಯತೇತರ ವಲಯಕ್ಕೆ 1202.56 ಕೋಟಿ ರೂ.ಸಾಲ ವಿತರಿಸಲಾಗಿದೆ ಎಂದರು.

ಸಭೆಯಲ್ಲಿ ನಬಾರ್ಡ್ ಬ್ಯಾಂಕಿನ ಪ್ರಾದೇಶಿಕ ಉಪ ಪ್ರಬಂದಕಿ ಸಂಗೀತಾ ಕರ್ತಾ, ಯೂನಿಯನ್ ಬ್ಯಾಂಕ್‌ನ ಪ್ರಾದೇಶಿಕ ಮೆನೇಜರ್ ಡಾ.ವಾಸಪ್ಪ, ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಬ್ಯಾಂಕ್‌ಗಳ ಮೇನೇಜರ್ ಗಳು ಉಪಸ್ಥಿತರಿದ್ದರು.

10 ರೂ. ನಾಣ್ಯಗಳ ಚಲಾವಣೆಗೆ ನಿರ್ಬಂಧವಿಲ್ಲ

ರಾಜ್ಯದಲ್ಲಿ ಅದರಲ್ಲೂ ವಿಶೇಷವಾಗಿ ಕರಾವಳಿ ಜಿಲ್ಲೆಗಳಲ್ಲಿ 10ರೂ. ನಾಣ್ಯಗಳ ಚಲಾವಣೆಗೆ ಸಂಬಂಧಿಸಿದಂತೆ ನೆಗೆಟಿವ್ ಪ್ರಚಾರ ಜೋರಾಗಿ ನಡೆದಿದೆ. ಇದರಿಂದ 10ರೂ. ನಾಣ್ಯ ಚಲಾವಣೆಯಲ್ಲೇ ಇಲ್ಲ. ಹೊಟೇಲ್, ಬಸ್ಸು, ಅಂಗಡಿ, ವ್ಯಾಪಾರದಲ್ಲಿ ಇವುಗಳನ್ನು ಯಾರೂ ಸ್ವೀಕರಿಸುತ್ತಿಲ್ಲ. ಇದು ತಪ್ಪು ಮಾಹಿತಿ. 10ರೂ. ನಾಣ್ಯದ ಚಲಾವಣೆಗೆ ಯಾವುದೇ ನಿರ್ಬಂಧವಿಲ್ಲ ಎಂದು ರಿಸರ್ವ್ ಬ್ಯಾಂಕ್ ಅಧಿಕಾರಿ ತನು ನಂಜಪ್ಪ ಸ್ಪಷ್ಟಪಡಿಸಿದರು.

ಸಾರ್ವಜನಿಕ ವ್ಯವಹಾರದಲ್ಲಿ 10 ರೂ.ಗಳ ಕಾಯಿನ್ ಬಳಕೆಯನ್ನು ರಿಸರ್ವ್  ಬ್ಯಾಂಕು ಎಲ್ಲೂ ನಿರ್ಬಂಧಿಸಿಲ್ಲ. ಸಾರ್ವಜನಿಕರು ಯಾವುದೇ ವದಂತಿ, ಗಾಳಿಮಾತುಗಳನ್ನು ನಂಬದೇ ತಮ್ಮ ದಿನನಿತ್ಯದ ವ್ಯವಹಾರದಲ್ಲಿ 10 ರೂ. ನಾಣ್ಯ ವನ್ನು ಚಲಾವಣೆಗೆ ಬಳಸುವಂತೆ ತಿಳಿಸಿದ ಅವರು, 10ರೂ.ನಾಣ್ಯದ ಫೇಕ್ ನಾಣ್ಯ (ನಕಲಿ) ಮಾಡಲು ಸಾಧ್ಯವಿಲ್ಲ. ಏಕೆಂದರೆ ಅದಕ್ಕೆ ಮುಖಬೆಲೆಗಿಂತ ಹೆಚ್ಚು ಖರ್ಚಾಗುತ್ತದೆ ಎಂದರು.

ಜಿಲ್ಲೆಯ ಕೆಲವು ಬ್ಯಾಂಕ್ ಶಾಖೆಗಳಲ್ಲಿ 10 ಲಕ್ಷ ರೂ., 3ಲಕ್ಷ ರೂ.ಗಳ ನಾಣ್ಯ ಸಂಗ್ರಹದಲ್ಲಿವೆ ಎಂದು ಯೂನಿಯನ್ ಬ್ಯಾಂಕಿನ ಅಧಿಕಾರಿ ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News