ಸೆ.26ರಿಂದ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಉಚಿತ ಶ್ರವಣ ಸಾಧನ ವಿತರಣೆ ಶಿಬಿರ
ಮಂಗಳೂರು, ಸೆ. 20: ಫಾದರ್ ಮುಲ್ಲರ್ ಕಾಲೇಜು ವಾಕ್- ಶ್ರವಣ ವಿಭಾಗದ ವತಿಯಿಂದ ಅಂತಾರಾಷ್ಟ್ರೀಯ ಶ್ರವಣ ನ್ಯೂನ್ಯತೆಯುಳ್ಳವರ ವಾರದ ಅಂಗವಾಗಿ ಕೇಂದ್ರ ಸರಕಾರದ ಎಡಿಐಪಿ ಯೋಜನೆಯಡಿ ಉಚಿತ ಶ್ರವಣ ಸಾಧನಗಳ ವಿತರಣೆ ಶಿಬಿರ ಸೆ. 26ರಿಂದ 28ರವರೆಗೆ ಆಯೋಜಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಫಾದರ್ ಮುಲ್ಲರ್ ಕಾಲೇಜಿನ ಪ್ರೊ. ಅಖಿಲೇಶ್ ಪಿಎಂ, ಶಿಬಿರವು ಆಸ್ಪತ್ರೆಯ ಹೊರ ರೋಗಿ ವಿಭಾಗದಲ್ಲಿ ಈ ಮೂರು ದಿನಗಳಲ್ಲಿ ನಡೆಯಲಿದೆ ಎಂದರು.
ಸರಕಾರಿ ಆಸ್ಪತ್ರೆಗಳ ಮೂಲಕ ಕೇಂದ್ರ ಸರಕಾರದ ಯೋಜನೆಯಡಿ ಶ್ರವಣ ಸಾಧನಗಳ ವಿತರಣೆ ಈಗಾಗಲೇ ನಡೆಯುತ್ತಿದ್ದು, ಖಾಸಗಿ ಆಸ್ಪತ್ರೆಗಳ ಮೂಲಕ ಉಚಿತವಾಗಿ ಅರ್ಹರಿಗೆ ಶ್ರವಣ ಸಾಧನ ಸಲಕರಣೆಗಳನ್ನು ವಿತರಿಸುವ ಅವಕಾಶ ಫಾದರ್ ಮುಲ್ಲರ್ ಸಂಸ್ಥೆಗೆ ಲಭಿಸಿದೆ. ಈಗಾಗಲೇ 150 ಸಾಧನಗಳು ಬಂದಿರುವುದಾಗಿ ಹೇಳಿದರು. ಶಿಬಿರದಲ್ಲಿ ಶೇ. 40ಕ್ಕಿಂದ ಅಧಿಕ ಶ್ರವಣ ದೋಷವುಳ್ಳ ಬಿಪಿಎಲ್ ಕಾರ್ಡುದಾರರಿಗೆ ಈ ಉಚಿತ ಸಲಕರಣೆ ತಪಾಸಣೆಯ ಬಳಿಕ ನೀಡಲಾಗುವುದು. ಕಳೆದ ಮೂರು ವರ್ಷಗಳಲ್ಲಿ ಸರಕಾರದಿಂದ ನೆರವು ಅಥವಾ ಈ ಸೌಲಭ್ಯವನ್ನು ಉಚಿತವಾಗಿ ಪಡೆದಿರದವರಿಗೆ ಶಿಬಿರದಲ್ಲಿ ಸ್ಥಳದಲ್ಲೇ ವಿತರಿಸಲಾಗುವುದು ಎಂದು ಪ್ರೊ. ಅಖಿಲೇಶ್ ತಿಳಿಸಿದರು.
ಸೆ. 26ರಂದು ಬೆಳಗ್ಗೆ 10 ಗಂಟೆಗೆ ಶಿಬಿರ ಉದ್ಘಾಟನೆಗೊಳ್ಳಲಿದ್ದು, ಶಾಸಕ ವೇದವ್ಯಾಸ ಕಾಮತ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಮುಂಬೈ ಐಜ್ನಿಹ್ ನಿರ್ದೇಶಕ ಡಾ. ಅರುಣ್ ಬಾಂಕ್ ಗೌರವ ಅಥಿತಿಯಾಗಿ ಭಾಗವಹಿಸಲಿದ್ದಾರೆ ಎಂದರು.
ಅರ್ಹರು, ವಾಕ್ ಶ್ರವಣ ದೋಷದ ಬಗ್ಗೆ ಪ್ರಮಾಣ ಪತ್ರ, ಇತ್ತೀಚಿನ ಎರಡು ಭಾವಚಿತ್ರಗಳು, ಆಧಾರ್ ಕಾರ್ಡ್ ಪ್ರತಿ, ಬಿಪಿಎಲ್ ಕಾರ್ಡ್ ಹಾಗೂ ಆದಾಯಪ್ರಮಾಣ ಪತ್ರದೊಂದಿಗೆ ಶಿಬಿರಕ್ಕೆ ಭೇಟಿ ನೀಡಬಹುದು ಎಂದರು.
ಫಾದರ್ ಮುಲ್ಲರ್ ಚಾರಿಟೆಬಲ್ ಸಂಸ್ಥೆಯ ನಿರ್ದೇಶಕ ರೆ.ಫಾ. ರಿಚರ್ಡ್ ಅಲೋಶಿಯಸ್ ಕುವೆಲ್ಲೋ ಮಾತನಾಡಿ, ಉಚಿತ ಶ್ರವಣ ಸಾಧನ ವಿತರಣಾ ಶಿಬಿರದ ಜತೆಯಲ್ಲಿ ಹಿರಿಯರಿಗೆ ಉಚಿತ ಶ್ರವಣ ಪರೀಕ್ಷೆ, ಶ್ರವಣ ಸಾಧನಗಳ ಉಚಿತ ಪ್ರಯೋಗ, ಸಬ್ಸಿಡಿ ದರದಲ್ಲಿ ಶ್ರವಣ ಸಾಧನಗಳ ವಿತರಣೆಯೂ ನಡೆಯಲಿದೆ ಎಂದರು.
ಈ ಸಂದರ್ಭದಲ್ಲಿ ಶಿಬಿರದ ಆಹ್ವಾನ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.
ಗೋಷ್ಠಿಯಲ್ಲಿ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿಗಳಾದ ರೆ.ಫಾ. ನೆಲ್ಸನ್ ಧೀರಜ್ ಪಾಯಸ್, ರೆ.ಫಾ. ಜಾರ್ಜ್ ಜೀವನ್ ಸಿಕ್ವೇರಾ, ವೈದ್ಯಕೀಯ ಅಧೀಕ್ಷರಾದ ಡಾ. ಉದಯ ಕುಮಾರ್ ಕೆ. ಮೊದಲಾದವರು ಉಪಸ್ಥಿತರಿದ್ದರು.
"ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಫಾದರ್ ಮುಲ್ಲರ್ ಆಸ್ಪತ್ರೆಯ ವತಿಯಿಂದ ಆಗಸ್ಟ್ 15ರಿಂದ 31ರವರೆಗೆ ರೋಗಿಗಳಿಗೆ ವಿವಿಧ ರೀತಿಯ ಚಿಕಿತ್ಸೆಯಲ್ಲಿ ಸುಮಾರು 1.8 ಕೋಟಿ ರೂ.ಗಳ ರಿಯಾಯಿತಿಯನ್ನು ಒದಗಿಸಲಾಗಿದೆ. ರೋಗಿಗಳ ಅನುಕೂಲಕ್ಕಾಗಿ ಆಸ್ಪತ್ರೆಯಲ್ಲಿ ಮುಂಗಡ ನೋಂದಾವಣೆಯೊಂದಿಗೆ ಸಂಜೆ ಕ್ಲಿನಿಕ್‌ಗಳ ವ್ಯವಸ್ಥೆಯನ್ನು ಆರಂಭಿಸಲಾಗಿದೆ".
ರೆ.ಫಾ. ರಿಚರ್ಡ್ ಅಲೋಶಿಯಸ್ ಕುವೆಲ್ಲೋ, ನಿರ್ದೇಶಕರು, ಫಾದರ್ ಮುಲ್ಲರ್ ಚಾರಿಟೆಬಲ್ ಸಂಸ್ಥೆ.
24ರಂದು ಸ್ಕಿಲ್ ಎಜುಕಾನ್ 2020 ಉದ್ಘಾಟನೆ
ಫಾದರ್ ಮುಲ್ಲರ್ ಮೆಡಿಕಲ್ ಎಜುಕೇಶನ್ ಘಟಕ ಮತ್ತು ಫಾದರ್ ಮುಲ್ಲರ್ ಸಿಮ್ಯುಲೇಶನ್ ಆ್ಯಂಡ್ ಸ್ಕಿಲ್ ಸೆಂಟರ್ ವತಿಯಿಂದ ಸೆ. 24ರಂದು ಸ್ಕಿಲ್ ಎಜುಕಾನ್ 2022 ಕಾರ್ಯಾಗಾರ ಉದ್ಘಾಟನೆಗೊಳ್ಳಲಿದೆ. ಬೆಳಗ್ಗೆ 9.30ಕ್ಕೆ ಮುಂಬೈಯ ಸೇತ್ ಜಿ.ಎಸ್. ಮೆಜಿಕಲ್ ಕಾಲೇಜಿನ ಪ್ರಮುಖರಾದ ಡಾ. ಅವಿನಾಶ್ ನಿವೃಟ್ಟಿ ಸುಪೆ ಭಾಗವಹಿಸಲಿದ್ದು, ಫಾದರ್ ಮುಲ್ಲರ್ ಚಾರಿಟೆಬಲ್ ಸಂಸ್ಥೆಯ ನಿರ್ದೇಶಕ ರೆ. ಫಾ. ರಿಚರ್ಡ್ ಅಲೋಶಿಯಸ್ ಕುವೆಲ್ಲೋ ಅಧ್ಯಕ್ಷತೆ ವಹಿಸಲಿದ್ದಾರೆ.