ಮಂಗಳೂರು: ಚಿನ್ನದ ಸರ ಸುಲಿಗೆ ಪ್ರಕರಣದ ಆರೋಪಿಗೆ ಜೈಲು ಶಿಕ್ಷೆ, ದಂಡ

Update: 2022-09-20 15:54 GMT

ಮಂಗಳೂರು, ಸೆ.20: ಆರು ವರ್ಷದ ಹಿಂದೆ ವಾಯುವಿಹಾರ ಮಾಡುತ್ತಿದ್ದ ಮಹಿಳೆಯ ಕತ್ತಿನಿಂದ ಚಿನ್ನದ ಸರವನ್ನು ಸುಲಿಗೆಗೈದಿದ್ದ ಆರೋಪಿಗೆ ಎರಡನೆ ಸಿಜೆಎಂ ನ್ಯಾಯಾಲಯವು 3.6 ವರ್ಷ ಜೈಲು ಶಿಕ್ಷೆ ಮತ್ತು 10 ಸಾವಿರ ರೂ. ದಂಡ ಪಾವತಿಸಲು ಆದೇಶಿಸಿದೆ.

ಕದ್ರಿ ಕಂಬಳ ರಸ್ತೆಯ ಅನುರಾಧಾ ಎಸ್.ರಾವ್ ಎಂಬವರು 2016ರ ಅಕ್ಟೋಬರ್ 6ರಂದು ಮುಂಜಾನೆ ವಾಯು ವಿಹಾರ ಮಾಡುತ್ತಿದ್ದರು. ಈ ಸಂದರ್ಭ ಆರೋಪಿ ನಿಝಾರ್ ಕೆ. ಎಂಬಾತ ಅನುರಾಧಾ ಅವರ ಕತ್ತಿನಲ್ಲಿದ್ದ 35 ಸಾವಿರ ರೂ. ಮೌಲ್ಯದ ಚಿನ್ನದ ಸರವನ್ನು ಕಿತ್ತು ಪರಾರಿಯಾಗಿದ್ದ.

ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದ ಕದ್ರಿ ಪೊಲೀಸರು ಆರೋಪಿ ನಿಝಾರ್ ಮತ್ತು ಆತನನ್ನು ಸ್ಕೂಟರ್‌ನಲ್ಲಿ ಕರೆದೊಯ್ದ ಜುರೈಸ್ ಕೆ.ಎಂ. ಹಾಗೂ ಚಿನ್ನಾಭರಣವನ್ನು ಖರೀದಿಸಿದ ಬೆಳ್ಳಾರೆಯ ಕಾಮಧೇನು ಜುವೆಲ್ಲರ್ಸ್‌ನ ಮಾಲಕಿ ತಾರಾಕುಮಾರಿಯ ವಿರುದ್ಧ ಪ್ರಕರಣ ದಾಖಲಿಸಿದ್ದರು.

ಜಿಲ್ಲಾ ಎರಡನೆ ಸಿಜೆಎಂ ನ್ಯಾಯಾಲಯದ ನ್ಯಾಯಾಧೀಶ ಮಧುಕರ ಪಿ. ಭಾಗವತ್ ಆರೋಪಿ ನಿಝಾರ್‌ಗೆ 3 ವರ್ಷ 6 ತಿಂಗಳು ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ಮತ್ತು ದಂಡ ತೆರಲು ತಪ್ಪಿದರೆ 2 ತಿಂಗಳು ಹೆಚ್ಚುವರಿಯಾಗಿ ಜೈಲು ಶಿಕ್ಷೆ ಅನುಭವಿಸುವಂತೆ ಸೋಮವಾರ ಆದೇಶಿಸಿದ್ದಾರೆ. ಅಲ್ಲದೆ ಸೂಕ್ತ ಸಾಕ್ಷಿಗಳ ಕೊರತೆಯಿಂದ ಜುರೈಸ್ ಕೆ.ಎಂ. ಮತ್ತು ತಾರಾ ಕುಮಾರಿಯನ್ನು ಖುಲಾಸೆಗೊಳಿಸಿದ್ದಾರೆ. ಫಿರ್ಯಾದಿದಾರರ ಪರವಾಗಿ ಸರಕಾರಿ ಅಭಿಯೋಜಕ ಮೋಹನ್ ಕುಮಾರ್ ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News