ಉಕ್ರೇನ್‌ಗೆ ನಿರಂತರ ಬೆಂಬಲ: ಬ್ರಿಟನ್ ಪ್ರಧಾನಿ ಘೋಷಣೆ

Update: 2022-09-20 18:37 GMT

ಲಂಡನ್, ಸೆ.20: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನುದ್ದೇಶಿಸಿ ಮಾತನಾಡಲಿರುವ ಬ್ರಿಟನ್‌ನ ನೂತನ ಪ್ರಧಾನಿ ಲಿರ್ ಟ್ರಸ್ ಉಕ್ರೇನ್‌ಗೆ ಬ್ರಿಟನ್ ಘೋಷಿಸಿರುವ 2.6 ಶತಕೋಟಿ ಡಾಲರ್ ಮೊತ್ತದ ಬೆಂಬಲವನ್ನು ಪುನರುಚ್ಚರಿಸಲಿದ್ದಾರೆ ಎಂದು ಬ್ರಿಟನ್ ಸರಕಾರದ ಮೂಲಗಳು ಹೇಳಿವೆ. ಇದೇ ವೇಳೆ, ರಶ್ಯದ ಆಕ್ರಮಣಕ್ಕೆ ಗುರಿಯಾಗಿರುವ ಉಕ್ರೇನ್‌ಗೆ ಬ್ರಿಟನ್‌ನ ನಿರಂತರ ಬೆಂಬಲದ ವಾಗ್ದಾನವನ್ನೂ ಲಿರ್ ಟ್ರಸ್ ನೀಡಲಿದ್ದಾರೆ. ನ್ಯೂಯಾರ್ಕ್‌ನಲ್ಲಿ ಬುಧವಾರ ಅವರು ಅಮೆರಿಕ ಅಧ್ಯಕ್ಷ ಜೋ ಬೈಡನ್‌ರನ್ನು ಭೇಟಿಯಾಗಿ ಮಾತುಕತೆ ನಡೆಸುವ ಸಂದರ್ಭ ಈ ಬಗ್ಗೆ ಘೋಷಿಸಲಿದ್ದಾರೆ ಎಂದು ವರದಿಯಾಗಿದೆ. ನೀವು ಇರಿಸುವ ಪ್ರತಿಯೊಂದು ಹೆಜ್ಜೆಯ ಹಿಂದೆಯೂ ಬ್ರಿಟನ್ ನಿಲ್ಲಲಿದೆ. ನಿಮ್ಮ ಭದ್ರತೆಯೇ ನಮ್ಮ ಭದ್ರತೆ ಎಂದು ಉಕ್ರೇನ್ ಜನತೆಗೆ ನೀಡಿದ ಸಂದೇಶದಲ್ಲಿ ಟ್ರಸ್ ಹೇಳಿದ್ದಾರೆ. ಉಕ್ರೇನ್, ಯುರೋಪ್ ಹಾಗೂ ವಿಶ್ವದಾದ್ಯಂತ ಹಲವು ಜೀವಗಳು ರಶ್ಯದ ಇಂಧನವನ್ನು ಅವಲಂಬಿಸುವಂತಾಗಿದೆ. ಈ ಅವಲಂಬನೆಯನ್ನು ಶಾಶ್ವತವಾಗಿ ಅಂತ್ಯಗೊಳಿಸುವ ಸಮಯ ಬಂದಿದೆ. ಈ ನಿಟ್ಟಿನಲ್ಲಿ ಕಾರ್ಯ ನಡೆಯಬೇಕಾಗಿದೆ ಎಂದು ಲಿರ್ ಟ್ರಸ್ ಹೇಳಿದ್ದಾರೆ. 2022ರಲ್ಲಿ ಉಕ್ರೇನ್‌ಗೆ 2.3 ಶತಕೋಟಿ ಪೌಂಡ್ ನೆರವು ನೀಡಲು ಬ್ರಿಟನ್ ಬದ್ಧವಾಗಿದ್ದು ಮುಂದಿನ ವರ್ಷ ಆ ದೇಶದ ಅಗತ್ಯತೆಯನ್ನು ಗಮನಿಸಿ ನೆರವಿನ ಪ್ರಮಾಣವನ್ನು ನಿರ್ಧರಿಸಲಾಗುವುದು ಎಂದು ಬ್ರಿಟನ್ ಸರಕಾರ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News