ನೆನಪು ಅಳಿಸುವ ಅಲ್ಝೀಮರ್

Update: 2022-09-21 04:43 GMT

ಅಲ್ಝೀಮರ್ ಒಂದು ಸಂಕೀರ್ಣ ಕಾಯಿಲೆಯಾಗಿದ್ದು, ಈ ರೋಗಿಯಲ್ಲಿ ನೆನಪು ಮಸುಕಾಗಿ ಹೋಗಿ, ಹೊಸತನವನ್ನು ಕಲಿಯುವ ಮತ್ತು ಹಿಂದೆ ನಡೆದು ಹೋದುದನ್ನು ನೆನಪಿಸಿಕೊಳ್ಳುವ ಸಾರ್ಮರ್ಥ್ಯ ಕಳೆದುಹೋಗುತ್ತದೆೆ. ದೇಹಬಲ ಇದ್ದರೂ ದೈನಂದಿನ ಕಾರ್ಯ ಚಟುವಟಿಕೆಗಳನ್ನು ಮತ್ತು ವ್ಯಕ್ತಿಗಳನ್ನು ಗುರುತಿಸುವುದು ಅಸಾಧ್ಯವಾಗುತ್ತದೆ. ಈ ರೋಗಿಗಳಿಗೆ ತಮ್ಮ ನೆನಪು ಶಕ್ತಿ ಕಳೆದು ಹೋಗಿದೆ ಎಂಬುದೇ ಗೊತ್ತಾಗುವುದಿಲ್ಲ. ತೀರ ಇತ್ತೀಚಿನ ಸಂಗತಿಗಳು ಮತ್ತು ಘಟನೆಗಳೂ ನೆನಪಿಗೆ ಬರುವುದಿಲ್ಲ. ಎಷ್ಟೋ ವರ್ಷಗಳ ಹಿಂದೆ ಜರುಗಿ ಹೋದ ಘಟನೆಯನ್ನು, ಇಲ್ಲವೇ ವ್ಯಕ್ತಿಯನ್ನು ಏಕಾಏಕಿ ನೆನಪಿಗೆ ತಂದುಕೊಳ್ಳುತ್ತಾರೆ. ಅವರು ತಮ್ಮ ಸುತ್ತಮುತ್ತಲಿನ ವಿಷಯಗಳ ಬಗ್ಗೆ ಸಂಪೂರ್ಣವಾಗಿ ನಿರಾಸಕ್ತರಾಗಿರುತ್ತಾರೆ. ಅವರ ಬಗ್ಗೆ ಅವರಿಗೆ ಏನೂ ಅನ್ನಿಸುವುದೇ ಇಲ್ಲ. ಸ್ಥಳ ಮತ್ತು ಸಮಯ ಪ್ರಜ್ಞೆ ಸಂಪೂರ್ಣವಾಗಿ ನಾಶವಾಗಿರುತ್ತದೆ. ಅವರ ವ್ಯಕ್ತಿತ್ವದಲ್ಲಿ ವಿಪರೀತ ಮಾರ್ಪಾಡಾಗಿರುತ್ತದೆ. ಆ ಕಾರಣವಾಗಿ ಕುಳಿತಲ್ಲಿ ಕುಳಿತಿರದೆ, ನಿಂತಲ್ಲಿ ನಿಂತಿರದೆ, ಮನಬಂದಂತೆ ಗೊತ್ತು ಗುರಿಯಿಲ್ಲದೆ ನಡೆದಾಡುತ್ತಾರೆ. ನಿದ್ದೆ ಕಡಿಮೆಯಾಗಿ ಮಾನಸಿಕ ತಳಮಳ, ಖಿನ್ನತೆ, ಭ್ರಾಂತಿ ತೋರಿಬರುತ್ತದೆ. ಅವರ ಚಲನ ಸಾಮರ್ಥ್ಯ ರೋಗದ ಕೊನೆಯ ಹಂತದವರೆಗೂ ಸಮರ್ಪಕವಾಗಿರುತ್ತದೆ. ರೋಗ ಉಲ್ಬಣಿಸಿದಂತೆ ಆಹಾರ ನೀರಿನ ಬಗ್ಗೆ, ಮಲ ಮೂತ್ರ ವಿಸರ್ಜನೆಯ ಪರಿಜ್ಞಾನವೂ ಅವರಲ್ಲಿ ಉಳಿಯುವುದಿಲ್ಲ. ಒಟ್ಟಿನಲ್ಲಿ ಅತ್ತರೆ ಅಳುತ್ತಲೇ ಇರುವ, ಗಂಡ/ಹೆಂಡತಿ, ಮಕ್ಕಳು ಬಂಧು-ಬಳಗವನ್ನೇ ಗುರುತಿಸಲಾಗದ, ಭಾವನೆಗಳೇ ಇಲ್ಲದ ಬರಡು ಬದುಕು ಎಂದರೂ ತಪ್ಪಲ್ಲ.

ಚಿಕಿತ್ಸೆ ಹೇಗೆ?

ಮೆದುಳಿನ ಸ್ಕ್ಯಾನ್ ಮಾಡಿಸಿ, ಮೆದುಳಿನ ರಚನೆ ಮತ್ತು ನರತಂತುಗಳ ಆಕೃತಿಗಳ ಬಗ್ಗೆ ವಿವರ ತಿಳಿದುಕೊಂಡು, ಮೆದುಳಿನಲ್ಲಿ ಉಂಟಾದ ಬದಲಾವಣೆಗಳನ್ನು ಗುರುತಿಸಲಾಗುತ್ತದೆ. ಇದರ ಜೊತೆಗೆ ರೋಗದ ಚರಿತ್ರೆಯ ವಿವರಗಳು, ಕೌಟುಂಬಿಕ ಹಿನ್ನೆಲೆ ಮತ್ತು ವ್ಯಕ್ತಿಯ ಜೀವನಶೈಲಿ, ಆಹಾರ ಪದ್ಧತಿಯನ್ನು ಸಮಗ್ರವಾಗಿ ಅಭ್ಯಸಿಸಿ ರೋಗದ ನಿರ್ಣಯವನ್ನು ಮಾಡಲಾಗುತ್ತದೆ. ರೋಗಿಯ ದೈನಂದಿನ ಚಲನವಲನ, ವರ್ತನೆಗಳನ್ನು ಸಿಟಿಸ್ಕ್ಯಾನ್‌ನ ಜೊತೆ ಹೊಂದಾಣಿಕೆ ಮಾಡಿ ರೋಗವನ್ನು ಗುರುತಿಸಿ ವೈದ್ಯರು ಚಿಕಿತ್ಸೆಯನ್ನು ನಿರ್ಧರಿಸುತ್ತಾರೆ. ರೋಗವನ್ನು ಸಂಪೂರ್ಣವಾಗಿ ಗುಣಪಡಿಸಲು ಅಸಾಧ್ಯ. ಆದರೆ ಕೆಲವೊಮ್ಮೆ ರೋಗಿಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಮಿಥ್ಯಮಾತ್ರೆಗಳನ್ನು ನೀಡಲಾಗುತ್ತದೆ. ಒಟ್ಟಿನಲ್ಲಿ ರೋಗಿಯ ತಿಳುವಳಿಕೆಯ ಮಟ್ಟವನ್ನು ಹೆಚ್ಚಿಸಲು ಮತ್ತು ಅವರು ತೋರ್ಪಡಿಸುವ ಖಿನ್ನತೆ, ತಳಮಳ, ನಿದ್ರಾಹೀನತೆ, ಮನೋವಿಕಾರದಂತಹ ವರ್ತನೆಯ ಬದಲಾವಣೆಗಳನ್ನು ಕಡಿಮೆ ಮಾಡುವ ಪ್ರಯತ್ನ ಚಿಕಿತ್ಸೆಯ ಪರಮೋಚ್ಚ ಧ್ಯೇಯವಾಗಿರುತ್ತದೆ.

ಕಾಳಜಿ ಅಗತ್ಯ

1. ಅಲ್ಝೀಮರ್ ರೋಗಿಗಳನ್ನು ಕೀಳಾಗಿ ಕಾಣಲೇಬಾರದು. ಆರಂಭಿಕ ಹಂತದಲ್ಲಿ ಈ ರೋಗಿಗಳು ಇತರ ಎಲ್ಲರಂತೆ ಎಲ್ಲರೊಡನೆ ಬೆರೆಯಲು, ಊರು ಸುತ್ತಲು ಬಯಸುತ್ತಾರೆ. ಅವರನ್ನು ಸಮಾಜದ ಮುಖ್ಯವಾಹಿನಿಯಿಂದ ದೂರವಿಡಲೇ ಬಾರದು. ಅವರ ಆತ್ಮಸ್ಥೈರ್ಯ ಕುಸಿಯುವಂತಹ ಯಾವುದೇ ಕೆಲಸ ಮಾಡಬಾರದು.

2. ಅವರನ್ನು ಅತಿಯಾದ ಕಾಳಜಿ ಮತ್ತು ಪ್ರೀತಿಯಿಂದ ಕಾಣಬೇಕು. ಕಡಿಮೆ ಶಬ್ದದ ಚಿಕ್ಕ ಚಿಕ್ಕ ವಾಕ್ಯಗಳಿಂದ ಅವರನ್ನು ಸಂಬೋಧಿಸಬೇಕು. ದೇಹದ ಭಾಷೆಯಿಂದ ಅವರೊಡನೆ ವ್ಯವಹರಿಸಬೇಕಾಗಬಹುದು. ಮಾತಿನ ಭಾಷೆ ಅರಿವಾಗದಿದ್ದರೂ ದೇಹದ ಭಾಷೆ ಹೆಚ್ಚು ಪರಿಣಾಮಕಾರಿ.

3. ಈ ರೋಗಿಗಳ ಜೊತೆ ವಾದ ಮಾಡಬೇಡಿ ಅವರು ಹೇಳಿದ ಮಾತುಗಳನ್ನು ಸುಮ್ಮನೆ ಒಪ್ಪಿಕೊಳ್ಳಿ.

4. ಅವರ ಬಗ್ಗೆ ಇಲ್ಲಸಲ್ಲದ ಮಾತುಗಳನ್ನು ಹೇಳಿ, ಮನೋಸ್ಥಿತಿಯನ್ನು ಕುಂದಿಸಬೇಡಿ. ನಾಳೆ ನಮಗೂ ಅದೇ ಸ್ಥಿತಿ ಬರಬಹುದು. ಅವರು ಯಾವತ್ತಾದರೂ ಚಿಂತೆಯಿಂದ ಗೊಂದಲದಿಂದ ಇದ್ದಲ್ಲಿ ಸಮಾಧಾನದಿಂದ ವ್ಯವಹರಿಸಿ.

5. ಆದಷ್ಟು ಅವರನ್ನು ದೈಹಿಕ ಚಟುವಟಿಕೆಯಲ್ಲಿ ಇರುವಂತೆ ನೋಡಿಕೊಳ್ಳಿ. ಆದಷ್ಟು ನಿಮ್ಮ ಪರಿಚಯ, ಸಮಯದ ಬಗ್ಗೆ ಅರಿವು ಮೂಡಿಸಿ ಅವರಿಗೆ ಹೆಚ್ಚಿನ ಮನೋಸ್ಥೈರ್ಯ ನೀಡಬೇಕು.

Writer - ಡಾ. ಮುರಲೀ ಮೋಹನ್ ಚೂಂತಾರು

contributor

Editor - ಡಾ. ಮುರಲೀ ಮೋಹನ್ ಚೂಂತಾರು

contributor

Similar News