×
Ad

ಚುನಾವಣೆಯಲ್ಲಿ ಬಿಜೆಪಿ 25 ಸ್ಥಾನ ಕಾರ್ಯಕರ್ತರಿಗೆ ನೀಡಲಿ : ಪ್ರಮೋದ್ ಮುತಾಲಿಕ್

Update: 2022-09-21 18:23 IST

ಉಡುಪಿ, ಸೆ.21: ಈ ಬಾರಿಯ ರಾಜ್ಯ ಚುನಾವಣೆಯಲ್ಲಿ ಬಿಜೆಪಿ 25 ಸ್ಥಾನವನ್ನು ಹಿಂದೂ ಕಾರ್ಯಕರ್ತರಿಗೆ ನೀಡಬೇಕು. ಹಿಂದೂ ಕಾರ್ಯಕರ್ತರು, ಹೋರಾಟಗಾರರು, ಸಂಘಟಕರಿಗೆ ಅವಕಾಶ ನೀಡಬೇಕು. ಈ ಬಗ್ಗೆ ಪೇಜಾವರ ಸ್ವಾಮೀಜಿಯ ಗಮನ ಸೆಳೆದಿದ್ದೇನೆ. ನಾನು ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ.

ಪೇಜಾವರ ಮಠದ ಶ್ರೀವಿಶ್ವ ಪ್ರಸನ್ನ ತೀರ್ಥರನ್ನು ಬುಧವಾರ ಪೇಜಾವರ ಮಠದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ ಬಳಿಕ ಅವರು ಮಾಧ್ಯಮದ ವರೊಂದಿಗೆ ಮಾತನಾಡುತಿದ್ದರು. ಕಾರ್ಯಕರ್ತರು ಶಾಸಕರಾಗಿ ಆಯ್ಕೆಯಾದರೆ ಹಿಂದುತ್ವದ ಬಗ್ಗೆ ಧ್ವನಿ ಎತ್ತುತ್ತಾರೆ. ಹಿಂದುತ್ವಕ್ಕೆ ಆದ್ಯತೆ ನೀಡುತ್ತಾರೆ. ಬಿಜೆಪಿಯಲ್ಲಿ ಹಿಂದುತ್ವದ ಕಾಳಜಿಯ ಕೊರತೆ ಇದೆ. ಈ ತೊಂದರೆ ನಿವಾರಿಸಲು ಈ 25 ಮಂದಿಯಿಂದ ಸಾಧ್ಯ. ಈ ಬಗ್ಗೆ ಬಿಜೆಪಿಯ ರಾಜ್ಯಾಧ್ಯಕ್ಷರನ್ನು ಒತ್ತಾಯಿಸುತ್ತೇನೆ ಎಂದರು.

25 ಮಂದಿ ಕಾರ್ಯಕರ್ತರಿಗೆ ಟಿಕೆಟ್ ಕೊಡಲೇಬೇಕು ಎಂಬ ಹಕ್ಕೊತ್ತಾಯ ಮಾಡುತ್ತೇನೆ. ಬಿಜೆಪಿಯಲ್ಲಿ ಟಿಕೆಟ್ ಕೇಳುವುದು ನಮ್ಮ ಹಕ್ಕು. ಬಿಜೆಪಿ ಪಕ್ಷದ ಸಲುವಾಗಿ ನಾವು ಬೆವರು ರಕ್ತ ಸುರಿಸಿದ್ದೇವೆ. ಕಾರ್ಯಕರ್ತರ ಈ ಬೇಡಿಕೆಯನ್ನು ಪಕ್ಷ ಪೂರೈಸಲೇಬೇಕು. ಸಂಬಂಧಪಟ್ಟವರ ಜೊತೆ ಮಾತನಾಡುವ ಬಗ್ಗೆ ಸ್ವಾಮೀಜಿ ಸಕಾರಾತ್ಮಕ ಸ್ಪಂದಿಸಿದ್ದಾರೆ. ಬಿಜೆಪಿಗೆ ಹೊರತಾಗಿ ಈ ಚುನಾವಣೆಯಲ್ಲಿ ಸ್ಪರ್ಧಿಸುವ ಯಾವುದೇ ನಿರ್ಧಾರ ಮಾಡಿಲ್ಲ ಎಂದು ಅವರು ಹೇಳಿದರು. ಬಿಜೆಪಿಯವರು ಟಿಕೆಟ್ ಕೊಟ್ಟೇ ಕೊಡುತ್ತಾರೆ ಎಂಬ ವಿಶ್ವಾಸವಿದೆ. ಇತ್ತೀಚೆಗೆ ಬಿಜೆಪಿಯಲ್ಲಿ ಆಗುತ್ತಿರುವ ಬೆಳವಣಿಗೆಯಿಂದ ರಾಜ್ಯದ ಎಲ್ಲರಿಗೂ ಅಸಮಾ ಧಾನ ಉಂಟಾಗಿದೆ. ಈ ಅಸಮಾಧಾನವನ್ನು ಸರಿಯಾದ ನಿಟ್ಟಿನಲ್ಲಿ ತೆಗೆದು ಕೊಂಡು ಹೋಗಲು ನಾವು 25 ಮಂದಿಗೆ ಅವಕಾಶ ಕೇಳುತ್ತಿದ್ದೇವೆ. ಇದೇ ಕ್ಷೇತ್ರದಲ್ಲಿ ಟಿಕೆಟ್ ನೀಡಬೇಕು, ಇಂತಹ ವ್ಯಕ್ತಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಲ್ಲ ಎಂದು ಅವರು ಹೇಳಿದರು.

‘ಸಂಘಟನೆ ಕಾರ್ಯಕರ್ತರ ಕೇಸು ವಾಪಾಸ್ಸು ಪಡೆದಿಲ್ಲ’:  ಹಿಂದೂಗಳಿಗೆ ಆಗುತ್ತಿರುವ ಅನ್ಯಾಯದ ಕುರಿತು ನಾನು ಪೇಜಾವರ ಸ್ವಾಮೀಜಿಯೊಂದಿಗೆ ಮಾತನಾಡಿದ್ದೇನೆ. ಸಂಘಟನೆಯ ಕಾರ್ಯಕರ್ತರ ಮೇಲೆ ಹಾಕಿರುವ ರೌಡಿ ಶೀಟ್, ಕೇಸುಗಳು, ಗೂಂಡಾ ಕಾಯ್ದೆ ತೆರವು ಮಾಡಿಲ್ಲ. ಬಿಜೆಪಿ ಸರಕಾರ ಆಡಳಿತಕ್ಕೆ ಬಂದು ಮೂರು ವರ್ಷ ಕಳೆಯಿತು. ಕಳೆದ 10 ವರ್ಷಗಳಿಂದ ಹಿಂದುತ್ವದ ಕಾರ್ಯಕರ್ತರು ಕೋರ್ಟ್‌ಗೆ ಅಲೆಯುತ್ತಿದ್ದಾರೆ. ಹಿಂದೂ ಕಾರ್ಯಕರ್ತರ ನೋವನ್ನು ಪೇಜಾವರ ಸ್ವಾಮೀಜಿ ಗಮನಕ್ಕೆ ತಂದಿದ್ದೇನೆ ಎಂದು ಪ್ರಮೋದ್ ಮುತಾಲಿಕ್ ತಿಳಿಸಿದರು.

ಕೋಲಾರದ ಮಾಲೂರಿನಲ್ಲಿ ದಲಿತ ಬಾಲಕನಿಗೆ ಬಹಿಷ್ಕಾರ ಹಾಗೂ ದಂಡ ಹಾಕಿರುವುದು ಅಕ್ಷಮ್ಯ ಅಪರಾಧ. ದೇವರಿಗೆ ಮಡಿ ಮೈಲಿಗೆ ಇರೋದಿಲ್ಲ ಸ್ವಾತಂತ್ರ್ಯ ಬಂದು 75 ವರ್ಷವಾದ ಬಳಿಕವೂ ದಲಿತರಿಗೆ ಈ ರೀತಿ ಕ್ರೌರ್ಯ ಹಿಂಸೆ ನೀಡುವುದು ಸರಿಯಲ್ಲ. ದಲಿತ ಬಾಲಕನಿಗೆ ದಂಡ ಹಾಕಿದವರ ಮೇಲೆ ಕಠಿಣ ಕ್ರಮ ಕೈಗೊಂಡು ಶಿಕ್ಷಿಸಬೇಕು. ಇನ್ನು ಮುಂದೆ ಇಂತಹ ಘಟನೆಗಳು ಮರುಕಳಿಸಬಾರದು. ದಂಡ ಹಾಕಿದವರು ಕ್ಷಮೆ ಕೇಳಬೇಕು ಮತ್ತು ದಂಡದ ಹಣ ವಾಪಾಸು ನೀಡಬೇಕು ಎಂದು ಅವರು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News