×
Ad

​ರಾಜ್ಯ ಸರಕಾರದಿಂದ ವಿಶ್ವ ಕರ್ಮ ಸಮುದಾಯದ ಅವಗಣನೆ: ಅಖಿಲ ಭಾರತ ವಿಶ್ವ ಕರ್ಮ ಪರಿಷತ್ ಆರೋಪ

Update: 2022-09-21 18:33 IST

ಮಂಗಳೂರು : ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರಕಾರವು ವಿಶ್ವಕರ್ಮ ಸಮುದಾಯದ ಬಗ್ಗೆ ನಿರ್ಲಕ್ಷ್ಯ ಧೋರಣೆಯನ್ನು ಹೊಂದಿದೆ ಎಂದು ಅಖಿಲ ಭಾರತ ವಿಶ್ವ ಕರ್ಮ ಪರಿಷತ್ ಆರೋಪಿಸಿದೆ.

ಸುದ್ದಿಗೋಷ್ಠಿಯಲ್ಲಿಂದು ಈ ಆರೋಪ ಮಾಡಿದ ಪರಿಷತ್‌ನ ಕರ್ನಾಟಕ ರಾಜ್ಯ ಸಂಚಾಲಕ ಉದಯ ಜಿ. ಆಚಾರ್ಯ, ಇತ್ತೀಚೆಗೆ ದ.ಕ. ಹಾಗೂ ಉಡುಪಿ ಜಿಲ್ಲೆಗಳಲ್ಲಿ ಸರಕಾರಿ ಪ್ರಾಯೋಜಿತ ಕಾರ್ಯಕ್ರಮ ನಾಮಕಾವಸ್ತೆ ನಡೆಸಲಾಗಿದೆ. ಇದರಿಂದ ಸಮುದಾಯದ ಜನರಿಗೆ ನೋವಾಗಿದೆ ಎಂದರು.

ಆಮಂತ್ರಣ ಪತ್ರಿಕೆಯಲ್ಲಿ ಪ್ರೊಟೋಕಾಲ್ ಪ್ರಕಾರ ಜಿಲ್ಲೆಯ ಜನಪ್ರತಿನಿಧಿಗಳು, ಇಲಾಖೆ, ಪ್ರಾಧಿಕಾರ ಮತ್ತು ನಿಗಮ ಮಂಡಳಿ, ಅಕಾಡೆಮಿ ಮುಖ್ಯಸ್ಥರ ಹೆಸರ್ನು ನಮೂದಿಸಲಾಗಿತ್ತು. ಆದರೆ ಅಲ್ಲಿದ್ದುದು ಕೇವಲ ಸ್ಥಳೀಯ ಶಾಸಕರು, ಮೇಯರ್, ಉಪ ಮೇಯರ್ ಮತ್ತು ತಹಶೀಲ್ದಾರ್ ಮಾತ್ರ. ಉದ್ಘಾಟನೆಗೆ ಜಿಲ್ಲಾ ಉಸ್ತುವಾರಿ ಸಚಿವರಾಗಲಿ, ಜಿಲ್ಲಾಧಿಕಾರಿಯಾಗಲಿ ಹಾಜರಾಗದೆ ಸಮುದಾಯವನ್ನು ಅವಗಣನೆ ಮಾಡಲಾಗಿದೆ ಎಂದು ಅವರು ಆರೋಪಿಸಿದರು.

ಓಟಿಗಾಗಿ ಮನೆಗೆ ಬಂದು ಕಾಲಿಗೆ ಬೀಳುವ ಜನಪ್ರತಿನಿಧಿಗಳು ಗೆದ್ದ ಮೇಲೆ ಪ್ರಬಲ ಸಮುದಾಯದ ಕಾರ್ಯಕ್ರಮ ಗಳಿಗೆ ಮಾತ್ರ ಪ್ರೊಟೋಕಾಲ್ ಇಲ್ಲದಿದ್ದರೂ ಹಾಜರಾಗುತ್ತಾರೆ. ಇಂತಹ ತಾರತಮ್ಯ, ನಿರ್ಲಕ್ಷ್ಯ ಯಾಕೆ ಎಂದು ಉದಯ ಜಿ. ಆಚಾರ್ಯ ಪ್ರಶ್ನಿಸಿದರು.

ವಿಶ್ವಕರ್ಮರು ಸೌಮ್ಯ, ಮೃದು ಹಾಗೂ ತಾಳ್ಮೆಯುಳ್ಳವರು. ಇವರನ್ನು ಮಾತಿನ ಮೋಡಿಯಿಂದ ಮೂರ್ಖರನ್ನಾಗಿ ಸಬಹುದು ಎಂಬ ಕಲ್ಪನೆ ಆಡಳಿತ ಪಕ್ಷಕ್ಕೆ ಇರಬಹುದು. ಅಂತಹ ಯೋಚನೆ ಏನಾದರೂ ಇದ್ದರೆ ಅದನ್ನು ಹೇಗೆ ಸಂಭಾಳಿಸಬೇಕೆಂಬುದು ವಿಶ್ವಕರ್ಮರಿಗೂ ತಿಳಿದಿದೆ. ಅವಿಭಜಿತ ದ.ಕ. ಜಿಲ್ಲೆಯಲ್ಲಿ ೧.೭೫ ಲಕ್ಷ ಜನಸಂಖ್ಯೆಯನ್ನು ವಿಶ್ವಕರ್ಮರು ಹೊಂದಿದ್ದಾರೆ. ಈಗಾಗಲೇ ಜಿಎಸ್‌ಟಿ, ನೋಟು ಬ್ಯಾನ್ ಹಾಗೂ ಕೋವಿಡ್‌ನಿಂದಾಗಿ ವಿಶ್ವ ಕರ್ಮ ಸಮುದಾಯ ತನ್ನ ಕುಲಕಸುಬಿನಿಂದ ಹಿಂದೆ ಸರಿಯುವಂತಾಗಿದೆ. ೨೦೦ಕ್ಕೂ ಅಧಿಕ  ಚಿನ್ನಾಭರಣ ತಯಾರಿ ಅಂಗಡಿಗಳು ಕಳೆದ ಸುಮಾರು ನಾಲ್ಕೈದು ವರ್ಷಗಳಲ್ಲಿ ಮುಚ್ಚಿವೆ. ಸುಮಾರು 15 ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೆಲಸವಿಲ್ಲದೆ ಈಗಾಗಲೇ ಫುಡ್ ಡೆಲಿವರಿಯಂತಹ ಕಾರ್ಯದಲ್ಲಿ ಸಮುದಾಯದ ಯುವಕರು ತೊಡಗಿಕೊಳ್ಳುವಂತಾಗಿದೆ. ಜನಪ್ರತಿನಿಧಿಗಳೆನಿಸಿಕೊಂಡವರು ಕಾರ್ಯಕ್ರಮಕ್ಕೆ ಆಗಮಿಸಿ ನಮ್ಮನ್ನು ಹೊಗಳಿ ಹೋದ ಬಳಿಕ ತಿರುಗಿಯೂ ನೋಡುವುದಿಲ್ಲ ಎಂದು ಉದಯ ಆಚಾರ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ನಮ್ಮ ಬೇಡಿಕೆಗಳನ್ನು ಈಡೇರಿಸಿ
*ಪ್ರತಿ ಜಿಲ್ಲೆಯಲ್ಲೂ ವಿಶ್ವ ಕರ್ಮ ಸಮುದಾಯ ಪ್ರಮುಖರ ಹೆಸರಿನಲ್ಲಿ ರಸ್ತೆ, ಸ್ಮಾರಕ, ವೃತ್ತಕ್ಕೆ ನಾಮಕರಣ ಮಾಡುವ ಕಾರ್ಯವಾಗಬೇಕು.
*ವಿಶ್ವಕರ್ಮರನ್ನು ದೇವಶಿಲ್ಪಿ ಎನ್ನಲಾಗುತ್ತದೆ. ಹಾಗಾಗಿ ವಿಶ್ವಕರ್ಮ ಹೆಸರನ್ನು ಮಂಗಳೂರು ಅಂತಾರಾಷ್ಟರೀಯ ವಿಮಾನ ನಿಲ್ದಾಣಕ್ಕೆ ಇಡಬೇಕು ಎಂದು ಉದಯ ಜಿ. ಆಚಾರ್ಯ ಆಗ್ರಹಿಸಿದರು.
ಗೋಷ್ಠಿಯಲ್ಲಿ ರಾಜ್ಯ ಸಂಚಾಲಕ ಯೋಗೀಶ್ ಆಚಾರ್ಯ ಇನ್ನ ಉಪಸ್ಥಿತರಿದ್ದರು.

ಶಾಸಕ ಹರೀಶ್ ಪೂಂಜಾರಿಂದ ರಾಜಕೀಯ ಹೇಳಿಕೆ: ಆಕ್ಷೇಪ

ಬೆಳ್ತಂಗಡಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಶಾಸಕ ಹರೀಶ್ ಪೂಂಜಾ ಅವರು ವಿಶ್ವ ಕರ್ಮ  ಶೇ. 100ರಷ್ಟು ನಮ್ಮ ಪಕ್ಷದ ಸಮಾಜ. ಪಕ್ಷದೊಂದಿಗೆ ಗುರುತಿಸಿಕೊಂಡಿದೆ ಎಂಬ ಹೇಳಿಕೆ ನೀಡಿದ್ದು, ಇದನ್ನು ನಾವು ಖಂಡಿಸುತ್ತೇವೆ. ವಿಶ್ವಕರ್ಮ ಸಮಾಜ ಯಾವುದೇ ಪಕ್ಷದ ಜತೆ ಪ್ರತ್ಯೇಕವಾಗಿ ಗುರುತಿಸಿಕೊಂಡಿಲ್ಲ. ನಮ್ಮ ನಾಯಕರು ಎಲ್ಲಾ ಪಕ್ಷಗಳಲ್ಲಿಯೂ ಇದ್ದಾರೆ. ಈ ರೀತಿಯ ಬಾಲಿಶ ಹೇಳಿಕೆ ನೀಡಿ ಸಮಾಜವನ್ನು ರಾಜಕೀಯವಾಗಿ ಒಡೆಯುವ ಕೆಲಸ ಮಾಡಬಾರದು ಎಂದು ರಾಜ್ಯ ಸಂಚಾಲಕ ಪ್ರಭಾಕರ್ ಆಚಾರ್ಯ ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News