×
Ad

ಪ್ರೌಢಶಾಲಾ ಜಿಲ್ಲಾಮಟ್ಟದ ನಾಟಕ ಸ್ಪರ್ಧೆ: ಪಂಚವಟಿ ಪ್ರಥಮ

Update: 2022-09-21 20:10 IST

ಉಡುಪಿ, ಸೆ.21: ಕರ್ನಾಟಕ ನಾಟಕ ಅಕಾಡೆಮಿ, ಉಡುಪಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಸುಮನಸಾ ಕೊಡವೂರು-ಉಡುಪಿ ಸಹಯೋಗದಲ್ಲಿ ಆಯೋಜಿಸಲಾದ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಉಡುಪಿ ಜಿಲ್ಲಾ ಮಟ್ಟದ ನಾಟಕ ಸ್ಪರ್ಧೆಯಲ್ಲಿ ಬೈಂದೂರು ವಲಯದ ಹಕ್ಲಾಡಿಸರಕಾರಿ ಪ್ರೌಢ ಶಾಲೆಯ ಪಂಚವಟಿ ನಾಟಕವು ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟದ ನಾಟಕ ಸ್ಫರ್ಧೆಗೆ ಆಯ್ಕೆಯಾಗಿದೆ.

ಕಾರ್ಕಳ ಜ್ಞಾನಸುಧಾ ಅಂಗ್ಲ ಮಾಧ್ಯಮ ಪ್ರೌಢಶಾಲಾ ತಂಡದ ಇದು ಸತ್ಯ ನಾಟಕ ದ್ವಿತೀಯ ಹಾಗೂ ಮಲ್ಪೆ ನಾರಾಯಣ ಗುರು ಆಂಗ್ಲ ಮಾಧ್ಯಮ ಶಾಲಾ ತಂಡದ ಸ್ವಾತಂತ್ರ್ಯದ ನಕ್ಷತ್ರಗಳು ತೃತೀಯ ಬಹುಮಾನ ಪಡೆದುಕೊಂಡಿತು. ಸ್ಫರ್ಧೆಯಲ್ಲಿ ಒಟ್ಟು 7 ತಂಡಗಳು ಭಾಗವಹಿಸಿದ್ದವು.

ಬಹುಮಾನ ವಿತರಣಾ ಸಮಾರಂಭದ ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ವಹಿಸಿದ್ದರು. ಈ ಸಂದರ್ಭದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಪ್ರದೀಪ್‌ ಚಂದ್ರ ಕುತ್ಪಾಡಿಯವರನ್ನು ಅಭಿನಂದಿಸಲಾಯಿತು.

ಮುಖ್ಯ ಅತಿಥಿಗಳಾಗಿ ಮಲ್ಪೆಸರಕಾರಿ ಪ್ರೌಢಶಾಲಾ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಗೋಪಾಲ ಸಿ.ಬಂಗೇರ, ಉದ್ಯಮಿ ಸತೀಶ್ ಕೋಟ್ಯಾನ್, ಕೊಡವೂರು, ಮಲ್ಪೆಸರಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ವರ್ಗೀಸ್, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಪ್ರದೀಪ್‌ಚಂದ್ರ ಕುತ್ಪಾಡಿ, ಉಪಸ್ಥಿತರಿದ್ದರು.

ತೀರ್ಪುಗಾರರಾಗಿ ರಂಗನಟ ಎಂ.ಎಸ್.ಭಟ್, ಸಾಹಿತಿ ಪೂರ್ಣಿಮಾ ಸುರೇಶ್, ರಂಗಕರ್ಮಿ ಲಕ್ಷ್ಮೀನಾರಾಯಣ ಭಟ್ ಸಹಕರಿಸಿದರು. ಸುಮನಸಾ ಅಧ್ಯಕ್ಷ ಪ್ರಕಾಶ್ ಜಿ.ಕೊಡವೂರು ಸ್ವಾಗತಿಸಿದರು. ಸುಮನಸಾ ಕಾರ್ಯದರ್ಶಿ ಚಂದ್ರಕಾಂತ್ ಕುಂದರ್ ವಂದಿಸಿದರು. ದಯಾನಂದ ಕರ್ಕೇರ ಕಾರ್ಯಕ್ರಮ ನಿರೂಪಿಸಿದರು. ರಾಜ್ಯಮಟ್ಟದ ನಾಟಕ ಸ್ಪರ್ಧೆ ಅ.೧೦ ಮತ್ತು ೧೧ರಂದು ಬೆಂಗಳೂರಿನಲ್ಲಿ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News