ಬಸ್‍ನಲ್ಲಿ ಪರ್ಸ್ ಕಳವು : ಸಿಸಿಕ್ಯಾಮರಾ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್

Update: 2022-09-21 14:57 GMT

ಪುತ್ತೂರು : ಖಾಸಗಿ ಬಸ್ಸೊಂದರಲ್ಲಿ ಮಂಗಳೂರಿನಿಂದ ಪುತ್ತೂರಿಗೆ ಆಗಮಿಸುತ್ತಿದ್ದ  ಪ್ರಯಾಣಿಕ ಮಹಿಳೆಯೊಬ್ಬರ ಹಣವಿದ್ದ ಪರ್ಸನ್ನು ಮತ್ತೋರ್ವ ಮಹಿಳೆ ಅಪಹರಿಸಿದ ಘಟನೆ ಮಂಗಳವಾರ ನಡೆದಿದ್ದು, ಈ  ದೃಶ್ಯವು ಬಸ್ಸಿನ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ. ಸಿಸಿ ಕ್ಯಾಮರದಲ್ಲಿನ ದೃಶ್ಯವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.‌

ಪುತ್ತೂರು ತಾಲೂಕು ಪಂಚಾಯತ್ ಯೋಜನಾಧಿಕಾರಿ ಸುಕನ್ಯ ಎಂಬವರು ಪರ್ಸ್ ಕಳೆದುಕೊಂಡವರು. ಇದೀಗ ಅವರು ಸಿಸಿ ಕ್ಯಾಮರಾ ದೃಶ್ಯ ಆಧರಿಸಿ ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದಾರೆ. ಪರ್ಸ್ ಕಳ್ಳತನಗೈದ ಮಹಿಳೆಗಾಗಿ ಪೊಲೀಸರು ಹುಡುಕಾಟ ಪ್ರಾರಂಭಿಸಿದ್ದಾರೆ. ಹುಡುಕಾಟಕ್ಕೆ ಖಾಸಗಿ ಬಸ್ ಬಸ್ಸಿನೊಳಗೆ ಅಳವಡಿಸಿದ್ದ ಸಿಸಿಟಿವಿಯ ದೃಶ್ಯವೇ ಪ್ರಮುಖ ಸಾಕ್ಷಿಯಾಗಿದೆ.

ಸುಕನ್ಯ ಅವರು ಮಂಗಳೂರಿನಿಂದ ಪ್ರತಿದಿನ ಬಸ್ ನಲ್ಲಿ ಪುತ್ತೂರು ತಾಲೂಕು ಪಂಚಾಯತ್ ಕಚೇರಿಗೆ ಬರುತ್ತಿದ್ದಾರೆ. ಸೆ.20ರಂದು ಖಾಸಗಿ ಬಸ್ಸಿನಲ್ಲಿ ಬರುತಿದ್ದಾಗ ಕಲ್ಲಡ್ಕದಲ್ಲಿ ಒಬ್ಬ ಮಹಿಳೆ ಬಸ್‍ಗೆ ಹತ್ತಿ ಅವರ ಪಕ್ಕದಲ್ಲೇ ಕುಳಿತಿದ್ದರು. ಆ ಮಹಿಳೆಯ ನಡೆಗಳಿಂದ ಅನುಮಾನಗೊಂಡ ಸುಕನ್ಯರವರು ತನ್ನ ಬ್ಯಾಗನ್ನು ಒಂದು ಕೈಯಲ್ಲಿ ಹಾಗೂ ಮತ್ತೊಂದು ಕೈಯಲ್ಲಿ ಟೀಫಿನ್ ಬಾಕ್ಸ್ ಹಿಡಿದುಕೊಂಡು ಪುತ್ತೂರು ಪೋಸ್ಟ್ ಆಫೀಸ್ ತಂಗುದಾಣದ ಬಳಿ ಇಳಿದಿದ್ದರು.

ಬಳಿಕ ತಾ.ಪಂ ಗೆ ನಡೆದುಕೊಂಡು ಹೋಗುವಾಗ ಮೆಡಿಕಲ್ ನಲ್ಲಿ ಮಾತ್ರೆ ಖರೀದಿಗೆಂದು ಪರ್ಸ್ ತಡಕಾಡಿದಾಗ ಬ್ಯಾಗ್‍ನ ಜಿಪ್ ಓಪನ್ ಆಗಿ ಪರ್ಸ್ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿತ್ತು. ತಕ್ಷಣವೇ ಅವರು ಬಸ್ಸಿನ ಚಾಲಕರೊಬ್ಬರ ಮೊಬೈಲ್‍ಗೆ ಕರೆ ಮಾಡಿ ತಿಳಿಸಿದ್ದರು. ಅವರು ಈ ಬಸ್ಸಿನಲ್ಲಿ ಸಿಸಿ ಕ್ಯಾಮರಾ ಅಳವಡಿಸಿರುವ ಬಗ್ಗೆ ಮಾಹಿತಿ  ನೀಡಿದ್ದರು.  ನಂತರ ಪುತ್ತೂರು ನಗರ ಠಾಣೆಗೆ ದೂರು ನೀಡಿದ ಸುಕನ್ಯ ಅವರು ಬಸ್ಸಿನಲ್ಲಿ ಸಿಸಿಟಿವಿ ಇರುವ ಬಗ್ಗೆ ಮಾಹಿತಿ ನೀಡಿದ್ದರು. 

ಪೊಲೀಸರು ಸಿಸಿಟಿವಿ ದೃಶ್ಯ ಪರಿಶೀಲಿಸಿದಾಗ ಕಳ್ಳತನ ಮಾಡುವ ಮಹಿಳೆ ಮಧ್ಯವಯಸ್ಕಳಾಗಿದ್ದು, ಅಷ್ಟು ಪ್ರಯಾಣಿಕರಿದ್ದರೂ ಯಾರಿಗೂ ಅನುಮಾನ ಬರದಂತೆ ಎಲ್ಲರೂ ಇಳಿಯುವ ಸಂದರ್ಭ ನೋಡಿ ಕಳವು ಮಾಡಲಾಗಿದ್ದು, ಇದು ಬಸ್ ನ ಸಿಸಿಟಿವಿಯಲ್ಲಿ ದಾಖಲಾಗಿದೆ.

"ಪ್ರಯಾಣಿಕರ ಭದ್ರತೆಯ ದೃಷ್ಟಿಯಿಂದ ನಾವು ಸಿಸಿಟಿವಿ ಬಸ್ ಗೆ ಹಾಕಿದ್ದೇವೆ. ಬಸ್ ಪ್ರಯಾಣಿಕರಿಂದ ತುಂಬಿರುವಾಗ ಈ ತರಹ ಕಳ್ಳತನಗಳು ಹೆಚ್ಚಾಗಿ ಆಗುತ್ತದೆ. ಪ್ರಯಾಣಿಕರು ಆದಷ್ಟು ತಮ್ಮ ಗಮನ ಜಾಸ್ತಿ ಕೊಡುತ್ತಿರಬೇಕು. ಹಲವು ಪ್ರಕರಣಗಳು ಸಿಸಿಟಿವಿ ಹಾಕಿದ ನಂತರ ಪತ್ತೆಯಾಗಿವೆ" ಎಂದು ಬಸ್ಸು ಮಾಲಕ ಪ್ರಕಾಶ್ ಶೆಟ್ಟಿ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಬಸ್ಸಿಗೆ ಸಿಸಿಟಿವಿ ಅಳವಡಿಸಿರುವ ಬಗ್ಗೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News