×
Ad

ಮಂಗಳೂರು | ನಾಲ್ವರು ಪಿಎಫ್ ಐ ಮುಖಂಡರನ್ನು ವಶಕ್ಕೆ ಪಡೆದ ಎನ್ ಐಎ

Update: 2022-09-22 11:07 IST

ಮಂಗಳೂರು, ಸೆ.22: ಮಂಗಳೂರು ನಗರ ಹಾಗೂ ಹೊರವಲಯದ ಹಲವೆಡೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(PFI) ಮುಖಂಡರ ಮನೆಗಳ ಮೇಲೆ ಗುರುವಾರ ಮುಂಜಾನೆ ಎನ್ ಐಎ(NIA)‌ ದಾಳಿ ನಡೆಸಿದೆ. ಈ ವೇಳೆ ನಾಲ್ವರನ್ನು ವಶಕ್ಕೆ ಪಡೆದಿರುವ ಎನ್ ಐಎ‌, ಮನೆಮಂದಿಯ ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆದಿದೆ ಎಂದು ತಿಳಿದುಬಂದಿದೆ. ಇದೇವೇಳೆ ಮಂಗಳೂರಿನಲ್ಲಿರುವ PFI, SDPI ಕಚೇರಿಯ ಮೇಲೂ ದಾಳಿ ನಡೆಸಿರುವ NIA ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ಮಂಗಳೂರು ತಾಲೂಕಿನ ಕಂಕನಾಡಿ, ಹಳೆಯಂಗಡಿ, ಜೋಕಟ್ಟೆ, ಕಾವೂರಿನಲ್ಲಿರುವ ಪಿಎಫ್ಐ ನಾಯಕರ ಮನೆಗಳು ಹಾಗೂ ನಗರದಲ್ಲಿರುವ ಎಸ್.ಡಿ.ಪಿ.ಐ.(SDPI) ಕಚೇರಿಗೆ ಗುರುವಾರ ಬೆಳಗ್ಗಿನ ಜಾವ 3:30ರ ಸುಮಾರಿಗೆ ಏಕಕಾಲದಲ್ಲಿ ದಾಳಿ ಮಾಡಿದ ಎನ್ಐಎ ಅಧಿಕಾರಿಗಳ ತಂಡ ಮನೆಗಳನ್ನು ಜಾಲಾಡಿದೆ. ಅಲ್ಲದೆ, ಮನೆಯಲ್ಲಿದ್ದ ಎಲ್ಲಾ ಸದಸ್ಯರ ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆದಿದೆ.

ಪಿಎಫ್ಐ ಮುಖಂಡರಾದ ಕಾವೂರು ನಿವಾಸಿ ನವಾಝ್, ಬಜ್ಪೆ ಜೋಕಟ್ಟೆಯ ಎ.ಕೆ.ಅಶ್ರಫ್, ಹಳೆಯಂಗಡಿಯ ಮೊಯ್ದಿನ್ ಹಾಗೂ ಕಂಕನಾಡಿ ನಿವಾಸಿ ಅಶ್ರಫ್ ಎಂಬವರ‌ ಮನೆಗಳ ಮೇಲೆ ದಾಳಿ ಮಾಡಿದ್ದು, ಮನೆಯಲ್ಲಿದ್ದ ನವಾಝ್, ಎ.ಕೆ.ಅಶ್ರಫ್, ಮೊಯ್ದಿನ್ ಅವರನ್ನು ವಶಕ್ಕೆ ಪಡೆದಿದ್ದಾರೆ. ಕೆಲಸ ನಿಮಿತ್ತ ದಿಲ್ಲಿಗೆ ತೆರಳಿದ್ದ ಕಂಕನಾಡಿಯ ಅಶ್ರಫ್ ಎಂಬವರನ್ನು ಅಲ್ಲಿಯೇ ವಶಕ್ಕೆ ಪಡೆದುಕೊಂಡಿದೆ‌ ಎಂದು ತಿಳಿದು ಬಂದಿದೆ.

ಹಳೆಯಂಗಡಿ ನಿವಾಸಿ ಪಿಎಫ್ಐ ಮುಖಂಡ ಮೊಯ್ದಿನ್ ಅವರ ಮನೆಯ ಮೇಲೆ ದಾಳಿ ಮಾಡಿದ ತಂಡ, ಅದೇ ಸಮಯದಲ್ಲಿ ಅವರ ತಾಯಿಯ ಮನೆಗೂ ದಾಳಿ ಮಾಡಿದೆ. ಈ ವೇಳೆ ಎರಡೂ ಮನೆಯನ್ನು ಜಾಲಾಡಿದೆ. ಅಲ್ಲದೆ, ಮನೆಯ ಎಲ್ಲಾ ಸದಸ್ಯರ ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆದು ಕೊಂಡಿದೆ ಎಂದು ತಿಳಿದು ಬಂದಿದೆ.

ಪಿಎಫ್ಐ ಮುಖಂಡರ ಮನೆಯ ಜೊತೆಗೆ ಮಂಗಳೂರು ನಗರದ ಸ್ಟೇಟ್ ಬ್ಯಾಂಕ್ ನ ನೆಲ್ಲಿಕಾಯಿ ರಸ್ತೆ ಬಳಿ ಇರುವ ಎಸ್.ಡಿ.ಪಿ.ಐ., ಪಿ.ಎಫ್.ಐ. ಕಚೇರಿ ಮೇಲೂ ಎನ್ಐಎ ದಾಳಿ ಮಾಡಿದೆ. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಎಸ್.ಡಿ.ಪಿ.ಐ. ದ.ಕ.  ಜಿಲ್ಲಾಧ್ಯಕ್ಷ ಅಬೂಬಕರ್ ಕುಳಾಯಿ, ಎನ್ಐಎ ಅಧಿಕಾರಿಗಳು ಯಾವುದೇ ಸೂಕ್ತ ಕಾರಣಗಳನ್ನು ನೀಡದೇ ವಿನಾಕಾರಣ ಎಸ್.ಡಿ.ಪಿ.ಐ. ಕಚೇರಿ ಮೇಲೆ ದಾಳಿ ಮಾಡಿದ್ದಾರೆ. ಅಧಿಕಾರಿಗಳನ್ನು ಈ ಕುರಿತು ಮಾಹಿತಿ ಕೇಳಿದರೆ, ಪಿಎಫ್ಐ ಕಚೇರಿ ಎಂದು ಎಸ್.ಡಿ.ಪಿ.ಐ.,  ಕಚೇರಿಗೆ ದಾಳಿ ಮಾಡಿರುವುದಾಗಿ ಸಮಜಾಯಿಷಿ ನೀಡಿದ್ದಾರೆ ಎಂದರು.

ಎಸ್.ಡಿ.ಪಿ.ಐ.  ಕಚೇರಿ ಕಟ್ಟಡದ ಬಾಡಿಗೆ ಅಗ್ರಿಮೆಂಟ್ ದಾಖಲೆ, ಕಚೇರಿಯಲ್ಲಿ ಬಳಕೆ ಮಾಡುವ ಲ್ಯಾಪ್ ಟಾಪ್ ಹಾಗೂ ನಮ್ಮ ಪಕ್ಷಕ್ಕೆ ಸಂಬಂಧಿಸಿದ ಕೆಲವು ಫೋಟೋ ಗಳನ್ನು ವಶಕ್ಕೆ ಪಡೆದುಕೊಂಡು ಹೋಗಿದ್ದಾರೆ. ಆದರೆ ಯಾವುದೇ ದಾಖಲೆಗಳನ್ನು ಕೊಂಡೊಯ್ದಿಲ್ಲ ಎಂದವರ ಸ್ಪಷ್ಟಪಡಿಸಿದರು.

 ಎನ್ಐಎ ಅಧಿಕಾರಿಗಳು, ಎಸ್ಡಿಪಿಐ ಕಚೇರಿಗೆ ಅತಿಕ್ರಮ ಪ್ರವೇಶ ಮಾಡಿ, ದರ್ಪ ಪ್ರದರ್ಶಿಸಿದ ಜೊತೆಗೆ ಕಚೇರಿಗೆ ಹಾನಿ ಉಂಟು‌ ಮಾಡಿದ್ದಾರೆ. ಈ ಕುರಿತು ಕಾನೂನು ಹೋರಾಟ ಮಾಡಲಾಗುವುದು ಎಂದು ಅಬೂಬಕರ್ ಕುಳಾಯಿ ತಿಳಿಸಿದ್ದಾರೆ.

ಇದನ್ನೂ ಓದಿ: SDPI, PFI ಕಚೇರಿ ಸೇರಿದಂತೆ ನಾಯಕರ ಮನೆ ಮೇಲೆ ಎನ್ಐಎ ದಾಳಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News