ಅ.1ರಿಂದ ಉಳ್ಳಾಲದಲ್ಲಿ 75ನೆ ಶಾರದಾ ಉತ್ಸವ

Update: 2022-09-22 12:35 GMT

ಮಂಗಳೂರು, ಸೆ. 22: ಉಳ್ಳಾಲ ಸಾರ್ವಜನಿಕ ಶ್ರೀ ಶಾರದಾ ಉತ್ಸವ ಸಮಿತಿ ವತಿಯಿಂದ 75ನೇ ವರ್ಷದ ಶಾರದಾ ಉತ್ಸವ ಅ.1ರಿಂದ 5ರ ವರೆಗೆ ಶ್ರೀ ಶಾರದಾ ನಿಕೇತನದಲ್ಲಿ ವೇದಮೂರ್ತಿ ಎನ್.ಯೋಗೀಶ್ ಭಟ್ ಅವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ.

1948ರಲ್ಲಿ ಆರಂಭಗೊಂಡಿರುವ ಉಳ್ಳಾಲ ಶ್ರೀಸಾರ್ವಜನಿಕ ನವರಾತ್ರಿ ಶ್ರೀ ಶಾರದಾ ಉತ್ಸವಕ್ಕೆ ಈ ಬಾರಿ ಅಮೃತ ಮಹೋತ್ಸವ ಸಂಭ್ರಮ. ಇದರ ಸವಿನೆನಪಿಗಾಗಿ ಪ್ರಥಮ ಬಾರಿಗೆ ಅ.3ರಂದು ‘ಶತಚಂಡಿಕಾ ಯಾಗ’ ಬ್ರಹ್ಮಶ್ರೀ ಕುತ್ಯಾರು ಕೇಂಜ ಶ್ರೀಧರ ತಂತ್ರಿಯವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ. ಉತ್ಸವದ ಪೂರ್ವಭಾವಿಯಾಗಿ ಸೆ.25ರಂದು ಭಾರತ್ ಪ್ರೌಢಶಾಲಾ ಮೈದಾನದಲ್ಲಿ ಕಬಡ್ಡಿ ಸಹಿತ ವಿವಿಧ ಆಟೋಟ ಸ್ಪರ್ಧೆ ಶಾಲಾ ಮಕ್ಕಳಿಗಾಗಿ ಹಮ್ಮಿಕೊಳ್ಳಲಾಗಿದೆ. ಅ.1ರಂದು ಸಂಜೆ ಹೊರೆ ಕಾಣಿಕೆ ಮೆರವಣಿಗೆ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ಶ್ರೀಕರ ಕಿಣಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.

ಅ.1ರಂದು ಶ್ರೀ ಶಾರದಾ ನಿಕೇತನದಲ್ಲಿ ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ಸಾಂಸ್ಕೃತಿಕ ಸ್ಪರ್ಧೆ, ಅ.5ರಂದು ಸಾರ್ವಜನಿಕರಿಗೆ ರಸ ಪ್ರಶ್ನೆ ಸ್ಪರ್ಧೆ ಆಯೋಜಿಸಲಾಗಿದೆ. ಅ.2ರಂದು ಪೈಲ್ವಾನ್ ದಿ.ಮೋತಿ ಪುತ್ರನ್ ಅವರ ಸ್ಮರಣಾರ್ಥ ಶ್ರೀ ವೀರ ಮಾರುತಿ ವ್ಯಾಯಾಮ ಶಾಲೆ, ಬ್ರದರ್ಸ್ ಸ್ಪೋರ್ಟ್ಸ್ ಕ್ಲಬ್ ಹಾಗೂ ಬ್ರದರ್ಸ್ ಯುವಕ ಮಂಡಲ ವತಿಯಿಂದ ದ.ಕ ಜಿಲ್ಲಾ ಮಟ್ಟದ ಬೆಳ್ಳಿ ಗದೆಯ ಕುಸ್ತಿ ಪಂದ್ಯಾಟ ಆಯೋಜಿಸಲಾಗಿದೆ. ಅಮೃತ ಮಹೋತ್ಸವದ ಸವಿನೆನಪಿಗಾಗಿ ಅ.4ರಂದು ‘ಶಾರದಾಮೃತ’ ಸ್ಮರಣಸಂಚಿಕೆ ಬಿಡುಗಡೆಗೊಳ್ಳಲಿದೆ ಮತ್ತು ಸೇವಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಸೇವಾ ಭಾರತಿ ಅಂಗ ಸಂಸ್ಥೆ ಅದಮ್ಯ ಚೇತನ -ಅಂಗವಿಕರ ಹಗಲು ಪಾಲನಾ ಕೇಂದ್ರಕ್ಕೆ ದಿ.ಯು.ದಯಾನಂದ ನಾಯಕ್ ದತ್ತಿ ಪ್ರಶಸ್ತಿ ನೀಡಿ ಗೌರವಾಗಿಸಲಾಗುವುದು ಎಂದವರು ವಿವರಿಸಿದರು.

ಅ.5ರಂದು ಸಂಜೆ ಶಾರದಾ ಮಾತೆಯ ವಿಸರ್ಜನಾ ಮೆರವಣಿಗೆ ಆರಂಭಗೊಒಂಡು ಶೋಭಾಯಾತ್ರೆ ಬಳಿಕ  ಸಮುದ್ರದಲ್ಲಿ ಶ್ರೀಶಾರದಾ ಮೂರ್ತಿ ವಿಸರ್ಜನೆ ನಡೆಯಲಿದೆ ಎಂದು ಗೌರವಾಧ್ಯಕ್ಷ ಯು.ಎಸ್.ಪ್ರಕಾಶ್ ತಿಳಿಸಿದರು.

ಕಾರ್ಯಾಧ್ಯಕ್ಷ ವಿಜಯ ಉಳ್ಳಾಲ್, ಸಂಚಾಲಕ ಪಶುಪತಿ ಉಳ್ಳಾಲ, ಭರತ್ ಕುಮಾರ್, ಚಂದ್ರಶೇಖರ ಯು.ಎಸ್. ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News