ಉಡುಪಿ: ಅಜೆಕಾರಿನಲ್ಲಿ 14ನೇ ಶತಮಾನದ ಶಾಸನ ಪತ್ತೆ
ಉಡುಪಿ, ಸೆ.22: ಕಾರ್ಕಳ ತಾಲೂಕಿನ ಮರ್ಣೆ ಗ್ರಾಮದ ಅಜೆಕಾರು ಗಾಣದಬೆಟ್ಟು ಪ್ರದೇಶದ ಅಮ್ಮು ಶೆಟ್ಟಿ ಎಂಬವರ ಜಾಗದಲ್ಲಿ 14ನೇ ಶತಮಾನಕ್ಕೆ ಸೇರಿದ ಶಾಸನವೊಂದು ಪತ್ತೆಯಾಗಿದೆ.
ಉಡುಪಿಯ ಪ್ರಾಚ್ಯಸಂಚಯ ಸಂಶೋಧನ ಕೇಂದ್ರದ ಅಧ್ಯಯನ ನಿರ್ದೇಶಕ ಪ್ರೊ.ಎಸ್.ಎ.ಕೃಷ್ಣಯ್ಯ ಮತ್ತು ಯು.ಕಮಲಬಾಯಿ ಪ್ರೌಢಶಾಲೆ ಕಡಿಯಾಳಿ ಇದರ ನಿವೃತ್ತ ಶಿಕ್ಷಕ ಕೆ. ಶ್ರೀಧರ ಭಟ್ ಇವರ ಮಾರ್ಗದರ್ಶನದಲ್ಲಿ ಹೈದರಾಬಾದ್‌ನ ಪ್ಲೀಚ್ ಇಂಡಿಯಾ ಫೌಂಡೇಶನ್‌ನ ಸಹಾಯಕ ಸಂಶೋಧಕ ರಾದ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಅವರು ಶಿಲಾಶಾಸನದ ಅಧ್ಯಯನ ನಡೆಸಿದ್ದಾರೆ.
ಕನ್ನಡ ಲಿಪಿ ಮತ್ತು ಭಾಷೆಯ 10 ಸಾಲುಗಳನ್ನು ಒಳಗೊಂಡಿರುವ ಈ ದಾನ ಶಾಸನವು 3 ಅಡಿ ಎತ್ತರ ಹಾಗೂ 2 ಅಡಿ ಅಗಲವನ್ನು ಹೊಂದಿದ್ದು, ಗ್ರಾನೈಟ್ (ಕಣ) ಶಿಲೆಯಲ್ಲಿ ಕೊರೆಯಲ್ಪಟ್ಟಿದೆ. ಶಾಸನದ ಮೇಲ್ಭಾಗದಲ್ಲಿ ಸೂರ್ಯ-ಚಂದ್ರ ಮತ್ತು ಶಂಖ-ಚಕ್ರದ ಕೆತ್ತನೆ ಇದ್ದು, ಶಕವರುಷ 1331ನೆಯ ಮಾರ್ಗಶಿರ ಶುದ್ಧ 1 ಗುರುವಾರ ಅಂದರೆ ಸಾಮಾನ್ಯ ವರ್ಷ 1409 ವಿರೋಧಿ ಸಂವತ್ಸರ ನವಂಬರ್ 07 ಗುರುವಾರಕ್ಕೆ ಸರಿಹೊಂದುತ್ತದೆ ಎಂದು ಶ್ರುತೇಶ್ ಆಚಾರ್ಯ ತಿಳಿಸಿದ್ದಾರೆ.
ಮಂಣೆ (ಪ್ರಸ್ತುತ ಮರ್ಣೆ)ಯ ವಿಷ್ಣು ದೇವರ ದೀವಿಗೆಗೆ ಆಜಕಾರ (ಪ್ರಸ್ತುತ ಅಜೆಕಾರು) ಕಾತು ಮೂಲಿಗೆ ಎಂಬ ವ್ಯಕ್ತಿಯು ಬೆಟ್ಟಿಂ (ಪ್ರಸ್ತುತ ಗಾಣದಬೆಟ್ಟು) ಪ್ರದೇಶದಿಂದ ಎಣ್ಣೆಯನ್ನು ಮತ್ತು 11 ತೆಂಗಿನಕಾಯಿಯನ್ನು (ಅಥವಾ 11 ತೆಂಗಿನಕಾಯಿಯ ಎಣ್ಣೆ) ದಾನವಾಗಿ ಬಿಟ್ಟಿರುವುದರ ಬಗ್ಗೆ ಶಾಸನವು ಉಲ್ಲೇಖಿಸುತ್ತದೆ. ಶಾಸನ ಪತ್ತೆಯಾಗಿರುವ ಜಾಗದ ಸಮೀಪದಲ್ಲೇ ಪುರಾತನ ವಿಷ್ಣುಮೂರ್ತಿ ದೇವಸ್ಥಾನವಿದೆ. ಈ ದೇವಸ್ಥಾನಕ್ಕೆ ನೀಡಿದ ದಾನವನ್ನು ಶಾಸನ ವಿವರಿಸುತ್ತದೆ ಎಂದವರು ಹೇಳಿದ್ದಾರೆ.
ಕ್ಷೇತ್ರಕಾರ್ಯ ಶೋಧನೆಯ ಸಂದರ್ಭದಲ್ಲಿ ಪ್ರಕಾಶ್ ಶೆಟ್ಟಿ ಮರ್ಣೆ, ಸುರೇಶ್ ಶೆಟ್ಟಿ ಗಾಣದಬೆಟ್ಟು ಮನೆ, ರವಿ ಸಂತೋಷ್ ಆಳ್ವ ಮತ್ತು ಸುಶಂತ್ ಶೆಟ್ಟಿ ಸಹಕಾರ ನೀಡಿದ್ದರು ಎಂದು ಪ್ರಕಟಣೆಯಲ್ಲಿ ಶ್ರುತೇಶ್ ಆಚಾರ್ಯ ತಿಳಿಸಿದ್ದಾರೆ.