ಪ್ರಥಮ ಚಿಕಿತ್ಸೆ ವೈದ್ಯಕೀಯ ನೆರವು ಮಾನವೀಯತೆ ಪ್ರತೀಕ: ಡಾ.ಕೀರ್ತಿ
ಉಡುಪಿ, ಸೆ.22: ದೈನಂದಿನ ಬದುಕಿನಲ್ಲಿ ಅಪಘಾತಗಳು ಎಲ್ಲಿ ಬೇಕಾದರೂ ನಡೆಯಬಹುದು. ಈ ಸಂದರ್ಭದಲ್ಲಿ ಗಾಯಾಳುಗೆ ಧೈರ್ಯ ತುಂಬಿ ಸೂಕ್ತ ಪ್ರಥಮ ಚಿಕಿತ್ಸೆ ನೀಡಿದಲ್ಲಿ ಜೀವ ಉಳಿಸಬಹುದು ಎಂದು ಉಡುಪಿ ಜಿಲ್ಲಾ ರೆಡ್‌ಕ್ರಾಸ್ ಸಂಸ್ಥೆಯ ಅಧಿಕೃತ ಪ್ರಥಮ ಚಿಕಿತ್ಸೆ ತರಬೇತುದಾರರಾದ ಡಾ.ಕೀರ್ತಿ ಹೇಳಿದ್ದಾರೆ.
ಸಂತೆಕಟ್ಟೆ ಮೌಂಟ್ ರೋಸರಿ ಆಂಗ್ಲ ಶಾಲೆಯಲ್ಲಿ ಜೂನಿಯರ್ ರೆಡ್‌ಕ್ರಾಸ್ ಘಟಕ ಫ್ರೌಢ ಶಾಲಾ ವಿದ್ಯಾರ್ಥಿ ಗಳಿಗೆ ಆಯೋಜಿಸಿದ ಪ್ರಥಮ ಚಿಕಿತ್ಸೆಯ ತರಬೇತು ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಅವರು ಪ್ರಾತ್ಯಕ್ಷಿಕೆಗಳ ಮೂಲಕ ತರಬೇತಿ ನೀಡಿ ಮಾತನಾಡಿದರು.
ಪ್ರಥಮ ಚಿಕಿತ್ಸೆ ಕೊಟ್ಟು ಗಾಯಾಳುವನ್ನು ವೈದ್ಯರ ಬಳಿ ತರುವುದು ನಾವು ಮಾಡುವ ವೈದ್ಯಕೀಯ ನೆರವು ಮಾತ್ರವಲ್ಲ, ನಮ್ಮ ಮಾನವೀಯತೆಯನ್ನು ತೋರಿಸುತ್ತದೆ ಎಂದವರು ಹೇಳಿದರು.
ಮೂಳೆಮುರಿತ ಗುರುತಿಸುವಿಕೆ, ಪಟ್ಟಿ ಕಟ್ಟುವ ಕ್ರಮ, ಕೃತಕ ಉಸಿರಾಟ ನೀಡುವಿಕೆ, ಗಾಯಾಳುಗೆ ಧೈರ್ಯ ನೀಡುವ ರೀತಿ, ಗಾಯಾಳುವಿನ ಸುತ್ತ ಗಾಳಿ ಬೆಳಕಿನ ಅಗತ್ಯತೆ, ಮಲಗಿಸುವ, ಕುಳಿತುಕೊಳ್ಳಿಸುವ ಭಂಗಿಗಳ ಕುರಿತೂ ಅವರು ವಿದ್ಯಾರ್ಥಿಗಳಿಗೆ ಮಾಹಿತಿಗಳನ್ನು ನೀಡಿದರು.
ಉಡುಪಿ ಜಿಲ್ಲಾ ರೆಡ್‌ಕ್ರಾಸ್ ಸಂಸ್ಥೆಯ ಕಾರ್ಯಕ್ರಮ ಸಂಯೋಜಕಿ ಭಾಗ್ಯಶ್ರೀ, ಶಿಕ್ಷಕಿಯರಾದ ಜಾನೆಟ್, ಲೀನಾ, ಮೀನಾ ಉಪಸ್ಥಿತರಿದ್ದರು. ಶಾಲಾ ಘಟಕದ ನಿದೆರ್ಶಕಿ ನ್ಯಾನ್ಸಿ ಸ್ವಾಗತಿಸಿ ವಿದ್ಯಾರ್ಥಿನಿ ದಿಯಾ ನೇತ್ರಾ ವಂದಿಸಿದರು.