ಪಿಎಫ್‌ಐ ವಿರುದ್ಧ ಎನ್‌ಐಎ ದಾಳಿ: 100ಕ್ಕೂ ಅಧಿಕ ಮಂದಿ ಬಂಧನ

Update: 2022-09-22 15:36 GMT

 ಹೊಸದಿಲ್ಲಿ,ಸೆ.22: ಕರ್ನಾಟಕ ಸೇರಿದತೆ 11 ರಾಜ್ಯಗಳಲ್ಲಿ ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾಗೆ ಸೇರಿದ ಸ್ಥಳಗಳ ಮೇಲೆ ಗುರುವಾರ ಬೆಳಗಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಹಾಗೂ ಜಾರಿನಿರ್ದೇಶನಾಲಯ (ಈ.ಡಿ.) ದಾಳಿ ನಡೆಸಿದ್ದು ಸಂಘಟನೆಯ 100ಕ್ಕೂ ಅಧಿಕ ಮಂದಿ ನಾಯಕರನ್ನು ಹಾಗೂ ಪದಾಧಿಕಾರಿಗಳನ್ನು ವಶಕ್ಕೆ ತೆಗೆದುಕೊಂಡಿದೆ. ಭಯೋತ್ಪಾದನೆ ಚಟುವಟಿಕೆಗಳ ಜೊತೆ ನಂಟು ಹೊಂದಿದ ಆರೋಪಲ್ಲಿ ಈ ದಾಳಿ ನಡೆಸಲಾಗಿದೆಯೆಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.

  ದೇಶಾದ್ಯಂತ 100ಕ್ಕೂ ಅಧಿಕ ಪಿಎಫ್‌ಐ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಬಂಧನವಾಗಿದ್ದು, ಕೇರಳದಲ್ಲಿ ಗರಿಷ್ಠ 22 ಮಂದಿ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ತಲಾ 20 ಮಂದಿಯ ಬಂಧನವಾಗಿದೆ. ಆಂಧ್ರಪ್ರದೇಶ 5, ಅಸ್ಸಾಂ 9, ದಿಲ್ಲಿ 3, ಮಧ್ಯಪ್ರದೇಶ 4, ಪುದುಚೇರಿ3, ತಮಿಳುನಾಡು 10, ಉತ್ತರಪ್ರದೇಶ 8 ಹಾಗೂ ರಾಜಸ್ಥಾನ 2 ಮಂದಿಯನ್ನು ಬಂಧಿಸಲಾಗಿದೆಯೆಂದು ವರದಿಯಾಗಿದೆ.  ಪಿಎಫ್‌ಐನ ದಿಲ್ಲಿ ಘಟಕದ ವರಿಷ್ಠ ಪರ್ವೆಝ್ ಅಹ್ಮದ್ ಹಾಗೂ ಅವರ ಸಹೋದರ ಬಂಧಿತರಲ್ಲಿ ಸೇರಿದ್ದಾರೆ.

   ಪಿಎಫ್‌ಐಗೆ ಸೇರಿದ ಸ್ಥಳಗಳ ಮೇಲೆ ನಡೆದ ದಾಳಿ ಕಾರ್ಯಾಚರಣೆಯಲ್ಲಿ ಆಯಾ ರಾಜ್ಯಗಳ ಪೊಲೀಸ್ ಪಡೆಗಳು ಕೂಡಾ ಭಾಗವಹಿಸಿರುವುದಾಗಿ ಮೂಲಗಳು ತಿಳಿಸಿವೆ.

 ಈವರೆಗೆ ಎನ್‌ಐಎ ನಡೆಸಿದ ಅತಿ ದೊಡ್ಡ ದಾಳಿ ಕಾರ್ಯಾಚರಣೆ ಇದಾಗಿದೆ ಎಂದು ಅದರ ಅಧಿಕಾರಿಗಳು ಬಣ್ಣಿಸಿದ್ದಾರೆ. ಭಯೋತ್ಪಾದನೆಗೆ ಹಣಕಾಸು ನೆರವು, ನಿಷೇಧಿತ ಸಂಘಟನೆಗಳಿಗೆ ಸೇರ್ಪಡೆಗೊಳ್ಳುವಂತೆ ಮಾಡಲು ಜನರನ್ನು ಪ್ರಚೋದಿಸುವುದು ಹಾಗೂ ತರಬೇತಿ ಶಿಬಿರಗಳನ್ನು ನಡೆಸುವುದರಲ್ಲಿ ಶಾಮೀಲಾಗಿರುವುದು ಇತ್ಯಾದಿ ಆರೋಪಗಳಿಗೆ ಸಂಬಂಧಿಸಿ ಶೋಧ ಕಾರ್ಯಾಚರಣೆಗಳನ್ನು ನಡೆಸಲಾಗಿದೆಯೆಂದು ಎನ್‌ಐಎ ಅಧಿಕಾರಿಗಳು ಹೇಳಿಕೊಂಡಿದ್ದಾರೆ.

  ಎನ್‌ಐಎ ದಾಳಿಯ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್‌ಶಾ ಅವರು ರಾಷ್ಟ್ರೀಯ ಭದ್ರತಾಸಲಹೆಗಾರ ಅಜಿತ್ ದೋವಲ್, ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ, ಎನ್‌ಐಎ ಮಹಾನಿರ್ದೇಶಕ ದಿನಕರ್ ಗುಪ್ತಾ ಸಭೆ ನಡೆಸಿ, ನೂತನ ಬೆಳವಣಿಗೆಗಳ ಬಗ್ಗೆ ಚರ್ಚಿಸಿದರೆಂದು ಅಧಿಕೃತ ಮೂಲಗಳು ತಿಳಿಸಿವೆ. ಈ ಮಧ್ಯೆ ಪಿಎಫ್‌ಐ ಹೇಳಿಕೆಯೊಂದನ್ನು ನೀಡಿ, ತನ್ನ ರಾಷ್ಟ್ರೀಯ, ರಾಜ್ಯ ಹಾಗೂ ಸ್ಥಳೀಯ ನಾಯಕರ ನಿವಾಸಗಳ ಮೇಲೆ ಎನ್‌ಐಎ ದಾಳಿ ನಡೆಸಿರುವುದಾಗಿ ತಿಳಿಸಿದೆ. ‘‘ ಭಿನ್ನಾಭಿಪ್ರಾಯದ ಧ್ವನಿಗಳನ್ನು ಮೌನವಾಗಿಸಲು ಏಜೆನ್ಸಿಗಳನ್ನು ಬಳಸಿಕೊಳ್ಳುವ ಫ್ಯಾಶಿಸ್ಟ್ ಆಡಳಿತದ ನಡೆಯನ್ನು ತಾನು ಬಲವಾಗಿ ಪ್ರತಿಭಟಿಸುವುದಾಗಿ ಸಂಘಟನೆ ತಿಳಿಸಿದೆ.

    ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಪ್ರತಿಭಟನೆಗಳಿಗೆ ಪ್ರಚೋದನೆ, 2020ರ ಈಶಾನ್ಯ ದಿಲ್ಲಿ ಹಿಂಸಾಚಾರ ಹಾಗೂ ಉತ್ತರಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ ದಲಿತ ಮಹಿಳೆಯೊಬ್ಬರ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಗಲಭೆಗೆ ಸಂಚು ಇತ್ಯಾದಿ ಆರೋಪಗಳಿಗೆ ಸಂಬಂಧಪಟ್ಟಂತೆ ಪಿಎಫ್‌ಐನ ಹಣಕಾಸು ನಂಟುಗಳ ಬಗ್ಗೆ ಜಾರಿ ನಿರ್ದೇಶನಾಲಯ (ಇ.ಡಿ.) ತನಿಖೆ ನಡೆಸುತ್ತಿದೆ.

  ಈ.ಡಿ.ಈ ಮೊದಲು,ಲಕ್ನೋದಲ್ಲಿನ ಕಪ್ಪುಹಣ ಬಿಳುಪು ತಡೆ ಕುರಿತ ವಿಶೇಷ ನ್ಯಾಯಾಲಯದ ಮುಂದೆ ಪಿಎಫ್‌ಐ ಹಾಗೂ ಅದರ ಪದಾಧಿಕಾರಿಗಳ ವಿರುದ್ಧ ಎರಡು ದೋಷಾರೋಪಪಟ್ಟಿಗಳನ್ನು ದಾಖಲಿಸಿದೆಯೆಂದು ಮೂಲಗಳು ತಿಳಿಸಿವೆ.

 ಸೆಪ್ಟೆಂಬರ್ 18ರಂದು ಭಯೋತ್ಪಾದಕ ಸಂಘಟನೆಗಳ ಜೊತೆ ನಂಚು ಹೊಂದಿದ ಆರೋಪದಲ್ಲಿ ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಪಿಎಫ್‌ಐನ 40 ಸ್ಥಳಗಳ ಮೇಲೆ ಎನ್‌ಐಎ ದಾಳಿ ನಡೆಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News