ಪೆಲೆಸ್ತೀನ್ ವಿಷಯದ ಬಗ್ಗೆ ವಿಶ್ವಸಂಸ್ಥೆ- ಅರಬ್ ಲೀಗ್ ಚರ್ಚೆ

Update: 2022-09-22 16:42 GMT

ಕೈರೊ, ಸೆ.22: ನ್ಯೂಯಾರ್ಕ್‍ನಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆ ಸಾಮಾನ್ಯ ಸಭೆಯ 77ನೇ ಅಧಿವೇಶನದ ನೇಪಥ್ಯದಲ್ಲಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ಮತ್ತು ಅರಬ್ ಲೀಗ್ ಪ್ರಧಾನ ಕಾರ್ಯದರ್ಶಿ ಅಹ್ಮದ್ ಅಬೋಲ್ ಘೆಯೆಟ್ ಪೆಲೆಸ್ತೀನ್ ವಿಷಯದ ಬಗ್ಗೆ ಚರ್ಚೆ ನಡೆಸಿರುವುದಾಗಿ ವರದಿಯಾಗಿದೆ.

ಇದೇ ಸಂದರ್ಭ ಅಂತರಾಷ್ಟ್ರೀಯ ಬಿಕ್ಕಟ್ಟು, ಮಧ್ಯಪ್ರಾಚ್ಯದಲ್ಲಿನ ಇತ್ತೀಚಿನ ಬೆಳವಣಿಗೆಯ ಬಗ್ಗೆಯೂ ಚರ್ಚೆ ನಡೆದಿದೆ. ರಶ್ಯ- ಉಕ್ರೇನ್ ಯುದ್ಧಕ್ಕೆ ಸಂಬಂಧಿಸಿ ವಿಶ್ವಸಂಸ್ಥೆಯ ಮುಖ್ಯಸ್ಥರಾಗಿ ಗುಟೆರಸ್ ನಿರ್ವಹಿಸಿದ ಪಾತ್ರವನ್ನು ಘೆಯೆಟ್ ಶ್ಲಾಘಿಸಿದರು ಎಂದು ಅರಬ್ ಲೀಗ್‍ನ ನಿಯೋಗ ಹೇಳಿದೆ.

ತಮ್ಮ ಉದ್ದೇಶಿತ ಗುರಿ ಸಾಧಿಸುವಲ್ಲಿ ಎದುರಾಗಿರುವ ಹಲವು ರಾಜಕೀಯ ಅಡಚಣೆಗಳಿಂದ ಪೆಲೆಸ್ತೀನಿಯರು ಹತಾಶರಾಗಿದ್ದಾರೆ. ಈ ವಲಯದಲ್ಲಿ ಸ್ಥಿರತೆ ಮತ್ತು ಸಮೃದ್ಧಿಯನ್ನು ಸಾಧಿಸುವ ಪ್ರಯತ್ನಗಳಲ್ಲಿ ಪೆಲೆಸ್ತೀನ್ ವಿಷಯ ಪ್ರಮುಖ ಆದ್ಯತೆಯಾಗಿ ಉಳಿದಿದೆ ಎಂದು ಉಭಯ ಮುಖಂಡರೂ ಒಪ್ಪಿಕೊಂಡಿದ್ದಾರೆ. ಈ ಪ್ರದೇಶಗಳಲ್ಲಿ ಕೆಲವು ದೇಶಗಳು ಎದುರಿಸುತ್ತಿರುವ ಬಿಕ್ಕಟ್ಟಿಗೆ ರಾಜಕೀಯ ಪರಿಹಾರ ಹುಡುಕುವ ಸಂಘಟಿತ ವಿಧಾನದ ಭಾಗವಾಗಿ ಕಾರ್ಯ ನಿರ್ವಹಿಸಲು ತಮ್ಮ ಬದ್ಧತೆಯನ್ನು ಅವರು ಪುನರುಚ್ಚರಿಸಿದ್ದಾರೆ ಎಂದು ಹೇಳಿಕೆ ಉಲ್ಲೇಖಿಸಿದೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News