ರಶ್ಯದಿಂದ ವಿಶ್ವಸಂಸ್ಥೆಯ ಶಾಸನದ ಉಲ್ಲಂಘನೆ : ವಿಶ್ವಸಂಸ್ಥೆಯಲ್ಲಿ ಬೈಡನ್ ವಾಗ್ದಾಳಿ

Update: 2022-09-22 16:56 GMT

ನ್ಯೂಯಾರ್ಕ್, ಸೆ.22: ತನ್ನ ನೆರೆದೇಶದ ಮೇಲೆ ಆಕ್ರಮಣ ಮಾಡಿರುವ ರಶ್ಯ, ವಿಶ್ವಸಂಸ್ಥೆಯ ಶಾಸನ(ಸನದು)ವನ್ನು ನಾಚಿಕೆಯಿಲ್ಲದೆ ಉಲ್ಲಂಘಿಸಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ರಶ್ಯ ವಿರುದ್ಧ ವಿಶ್ವಸಂಸ್ಥೆಯಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

`ಸಾರ್ವಭೌಮ ದೇಶವೊಂದನ್ನು ಜಾಗತಿಕ ನಕಾಶೆಯಿಂದ ಅಳಿಸಿ ಹಾಕಲು ರಶ್ಯ ಅಧ್ಯಕ್ಷ ಪುಟಿನ್ ಪ್ರಯತ್ನಿಸಿದ್ದಾರೆ. ಉಕ್ರೇನ್‍ನಲ್ಲಿ ಈಗ ತನ್ನ ವಶದಲ್ಲಿರುವ ಪ್ರದೇಶದಲ್ಲಿ ಜನಾಭಿಪ್ರಾಯ ಸಂಗ್ರಹಿಸುವ ರಶ್ಯದ ಯೋಜನೆ ವಿಶ್ವಸಂಸ್ಥೆ ಸನದಿನ ಗಂಭೀರ ಉಲ್ಲಂಘನೆಯಾಗಿದೆ. ರಶ್ಯಕ್ಕೆ ಬೆದರಿಕೆ ಎದುರಾದ್ದರಿಂದ ಈ ಕ್ರಮ ಅನಿವಾರ್ಯ ಎಂದು ಪುಟಿನ್ ಪ್ರತಿಪಾದಿಸುತ್ತಿದ್ದಾರೆ. ಆದರೆ ರಶ್ಯವನ್ನು ಯಾರೂ ಬೆದರಿಸಿಲ್ಲ, ರಶ್ಯ ಹೊರತುಪಡಿಸಿ ಬೇರೆ ಯಾರೂ ಸಂಘರ್ಷವನ್ನು ಬಯಸಿಲ್ಲ' ಎಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಬೈಡನ್ ಹೇಳಿದ್ದಾರೆ.

`ಉಕ್ರೇನ್ ಯುದ್ಧವು ಒಬ್ಬ ಮೊಂಡ ವ್ಯಕ್ತಿಯ ಆಯ್ಕೆಯಾಗಿದೆ. ಉಕ್ರೇನ್‍ನ, ಆ ದೇಶದ ಅಸ್ತಿತ್ವವನ್ನು ನಂದಿಸಲು ರಶ್ಯ ಯುದ್ಧ ಆರಂಭಿಸಿರುವುದು  ಸರಳ ಮತ್ತು ಸ್ಪಷ್ಟವಾಗಿದೆ . ಇದು ಜಾಗತಿಕ ಸಮುದಾಯದ ರಕ್ತವನ್ನು ಕುದಿಯುವಂತೆ ಮಾಡಿದೆ. ಆದ್ದರಿಂದಲೇ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ 141 ದೇಶಗಳು ಒಕ್ಕೊರಲಿನಿಂದ ಉಕ್ರೇನ್ ಆಕ್ರಮಣವನ್ನು ಖಂಡಿಸಿವೆ.   ಪ್ರತಿಯೊಂದು ಸಾರ್ವಭೌಮ ದೇಶ ಹೊಂದಿರುವ ಹಕ್ಕನ್ನು ಉಕ್ರೇನ್ ಕೂಡಾ ಹೊಂದಿದೆ. ಉಕ್ರೇನ್‍ನೊಂದಿಗೆ ಮತ್ತು ರಶ್ಯದ ಆಕ್ರಮಣದ ವಿರುದ್ಧ ನಾವು ಒಗ್ಗಟ್ಟಿನಿಂದ ನಿಲ್ಲುತ್ತೇವೆ. ಉಕ್ರೇನ್ ಅನ್ನು ರಶ್ಯ ರಚಿಸಿದೆ ಎಂದು ಆಕ್ರಮಣಕ್ಕೂ ಮುನ್ನ ಪುಟಿನ್ ಪ್ರತಿಪಾದಿಸಿದ್ದರು. ಉಕ್ರೇನ್‍ನ ರಾಜ್ಯತ್ವವನ್ನು ಅವರೆಂದಿಗೂ ಉಲ್ಲೇಖಿಸಿಲ್ಲ' ಎಂದು ಬೈಡನ್ ಹೇಳಿದರು.

ಪುಟಿನ್ ಯುರೋಪ್ ವಿರುದ್ಧ ಪರಮಾಣು ಬೆದರಿಕೆ ಒಡ್ಡಿದ್ದಾರೆ. ಉಕ್ರೇನ್‍ನ ಭಾಗವನ್ನು ಸ್ವಾಧೀನಪಡಿಸಿಕೊಳ್ಳಲು ಇನ್ನಷ್ಟು ಯೋಧರನ್ನು ಯುದ್ಧರಂಗಕ್ಕೆ ಕರೆಸಿಕೊಳ್ಳುತ್ತಿದ್ದಾರೆ. ಅವರ ಅತಿರೇಕದ ಕೃತ್ಯಗಳನ್ನು ಜಗತ್ತು ಗಮನಿಸಬೇಕು. ರಶ್ಯನ್ನರಿಂದ ಮರುಸ್ವಾಧೀನ ಪಡಿಸಿಕೊಂಡ ಇಝ್ಯುಮ್ ನಗರದಲ್ಲಿ ಇತ್ತೀಚೆಗೆ ಸಾಮೂಹಿಕ ಗೋರಿ ಪತ್ತೆಯಾಗಿರುವುದು ರಶ್ಯನ್ನರು ನಡೆಸಿದ ಚಿತ್ರಹಿಂಸೆಗೆ ಸಾಕ್ಷಿಯಾಗಿದೆ. ಅವರು ಶಾಲೆ, ರೈಲು ನಿಲ್ದಾಣ, ಆಸ್ಪತ್ರೆಯ ಮೇಲೆಯೂ ದಾಳಿ ನಡೆಸಿದ್ದಾರೆ. ಇವು ರಶ್ಯನ್ನರ ಭಯಾನಕ ಯುದ್ಧಾಪರಾಧದ ಸಾಕ್ಷಿಗಳಾಗಿವೆ. ಯಾವುದೇ ದೇಶದ ಭಾಗವನ್ನು ಆಕ್ರಮಿಸಿಕೊಳ್ಳುವುದು ತನ್ನ ಆಯ್ಕೆಗೆ ಬಿಟ್ಟ ವಿಷಯ ಎಂದು ಪ್ರತಿಪಾದಿಸುವುದಕ್ಕೆ ನಮ್ಮೆಲ್ಲರ ವಿರೋಧವಿದೆ. ದೇಶವನ್ನು ಆಕ್ರಮಿಸಿಕೊಳ್ಳಲು ಹಿಂಸೆ ಮತ್ತು ಯುದ್ಧ ನಡೆಸುವುದು ಹಾಗೂ ರಕ್ತಪಾತ ನಡೆಸಿ ಗಡಿಯನ್ನು ವಿಸ್ತರಿಸುವುದರ ವಿರುದ್ಧ ವಿಶ್ವಸಂಸ್ಥೆಯ ಸದಸ್ಯ ದೇಶಗಳು ಸ್ಪಷ್ಟ, ದೃಢ ಮತ್ತು ಅಚಲ ಸಂಕಲ್ಪ ಹೊಂದಿವೆ. ಇಂಧನವನ್ನು ಅಸ್ತ್ರದ ರೂಪದಲ್ಲಿ ಯಾವುದೇ ದೇಶ ಬಳಸುವಂತಿಲ್ಲ ಎಂದು ಬೈಡನ್ ಹೇಳಿದ್ದಾರೆ.   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News